Kannada NewsKarnataka NewsLatest

*ಮೈಸೂರು ರಂಗಾಯಣ: ನಾಟಕಗಳ ಪ್ರದರ್ಶನ*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೈಸೂರು ರಂಗಾಯಣದ ಹಿರಿಯ ಕಲಾವಿದರಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನ. ೪ ೫ ರಂದು ‘ಮುಟ್ಟಿಸಿಕೊಂಡವನು ಹಾಗೂ ಕಸಾಂದ್ರ ಮತ್ತು ಸತಿ ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.


ನ. ೪ ೨೦೨೩ ರಂದು ಪ್ರದರ್ಶಿಸುವ ಮುಟ್ಟಿಸಿಕೊಂಡವನು ನಾಟಕ ಪಿ. ಲಂಕೇಶ್ ಕಥೆಯಾಧಾರಿತವಾಗಿದ್ದು, ರಂಗಾಯಣದ ಹಿರಿಯ ಕಲಾವಿದರಾದ ನಂದಿನಿ ಕೆ.ಆರ್. ಅವರು ನಿರ್ದೇಶಿಸಿದ್ದಾರೆ. ಈ ನಾಟಕದಲ್ಲಿ ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾಗಿಯೇ ಇರುವ ಒಳ್ಳೆಯತನ ಮತ್ತು ಮುಗ್ಧತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲುಗುತ್ತವೆ ಎಂಬುದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ.


ನ. ೫ ೨೦೨೩ ರಂದು ಪ್ರದರ್ಶಿಸುವ ಕಸಾಂದ್ರ ಮತ್ತು ಸತಿ ನಾಟಕ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಶ್ರೀ ಬಿ.ಆರ್. ವೆಂಕಟರಮಣ ಐತಾಳ ಅವರು ನಿರ್ದೇಶನ ಮಾಡಿದ್ದಾರೆ.


ಹೆಚ್.ಎಸ್. ಶಿವಪ್ರಕಾಶರು ಗ್ರೀಕ್ ಪುರಾಣ ಹಾಗೂ ಈಸ್ಕಿಲಸ್ ನ ಅಗಮೆಮ್ನೋನ್ ನಾಟಕಗಳನ್ನು ಆಧರಿಸಿ ‘ಕಸಾಂದ್ರ’ ನಾಟಕವನ್ನು ಮತ್ತು ಶಿವಪುರಾಣಗಳು ಹಾಗೂ ದೇಸಿ ಜಾನಪದ ಪುರಾಣಗಳಲ್ಲಿ ಬರುವ ದಾಕ್ಷಾಯಣಿಯ ಕಥೆಯನ್ನು ಆಧರಿಸಿ ‘ಸತಿ’ ಎಂಬ ನಾಟಕವನ್ನೂ ಬರೆದಿದ್ದಾರೆ. ಈ ಎರಡೂ ದುರಂತ ಕಥೆಗಳು ಮಾನವಕುಲದ ಆದಿಮ ರೂಪಕಗಳು. ಇದು ಮನುಕುಲದ ಇತಿಹಾಸದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸರ್ವಾಧಿಕಾರ ದರ್ಪ ದಮನ ಹಿಂಸೆಯ ಸ್ವರೂಪಗಳನ್ನು ಪುರಾಣದ ಚೌಕಟ್ಟಿನಲ್ಲಿ ನೋಡುವ ಪ್ರಯತ್ನವಾಗಿದೆ.


ಸದರಿ ನಾಟಕಗಳು ಭಿನ್ನ-ಭಿನ್ನ ರಂಗಪ್ರಯೋಗಗಳಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಮೈಸೂರು ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button