Wanted Tailor2
Cancer Hospital 2
Bottom Add. 3

*ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೩*

ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದಿಂದ ಸುವರ್ಣ ಯುಗ ಪ್ರಾರಂಭ: ಮುರಳಿ ಮೋಹನ್ ರೆಡ್ಡಿ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆಯಾಗಿದೆ. ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳು ಎಲ್ಲ ವಲಯಗಳಲ್ಲೂ ಪ್ರಗತಿಪಥದತ್ತ ಸಾಗಿವೆ. ದೇಶದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಪಾರದರ್ಶಕತೆಯ ಬದಲಾವಣೆಯ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇದರಿಂದ ರಾಷ್ಟ್ರದ ಸುವರ್ಣ ಯುಗ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ್ ರೆಡ್ಡಿ ಅವರು ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಲೋಕಾಯುಕ್ತ ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ನ.೦೩) ನಡೆದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೩ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರತಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಸರ್ಕಾರಿ ನೌಕರರು, ಖಾಸಗಿ ವಲಯಗಳ ನೌಕರರು ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು. ಸ್ವಯಂ ಪ್ರೇರಿತವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಅನೇಕರು ಹೋರಾಡುತ್ತಿದ್ದಾರೆ ಅಂತಹವರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.


ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಿ:
ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಹಾಗೂ ಸರ್ಕಾರಿ ಸೇವೆಗಳಿಗಾಗಿ ಬಂದಲ್ಲಿ ಅವರಿಗೆ ಉತ್ತಮ ಸೇವೆ ಒದಗಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಂದ ಯಾವುದೇ ಹಣದ ಬೇಡಿಕೆ ಇಡದೇ ಪಾರದರ್ಶಕ ಸೇವೆ ನೀಡಬೇಕು. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಡೆದ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಮುರಳಿ ಮೋಹನ್ ರೆಡ್ಡಿ ಅವರು ತಿಳಿಸಿದರು.
ಸಾರ್ವಜನಿಕರಿಗೆ ಸರ್ಕಾರಿ ವಲಯಗಳ ಕುರಿತು ಭರವಸೆ ಮೂಡಬೇಕು. ಸರ್ಕಾರಿ ಕಚೇರಿಗೆ ಮುಕ್ತವಾಗಿ ಬಂದು ನಿಗದಿತ ಅವಧಿಯಲ್ಲಿ ಸೇವೆಗಳನ್ನು ಪಡೆಯುವಂತೆ ಅವರಿಗೆ ಉತ್ತಮ ಸೇವೆ ನೀಡಬೇಕು. ಸಾರ್ವಜನಿಕರು ಸಹ ಇಂತಹ ಅಧಿಕಾರಿಗಳಿಗೆ ಮಣೆ ಹಾಕಬಾರದು ತಮ್ಮ ಸೇವೆಗಳನ್ನು ಪಡೆಯಲು ಯಾವುದೇ ಲಂಚ ನೀಡದೆ ಸೂಕ್ತ ಮಾಹಿತಿ ಹಾಗೂ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.


ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ:
ಕಾನೂನಿನ ಮೂಲಕ ನ್ಯಾಯ ತಡವಾಗಿ ಸಿಕ್ಕರೂ ಸಹ ಜನರಿಗೆ ನ್ಯಾಯ ದೊರೆಯಲಿದೆ ಎಂಬ ಭರವಸೆ ಜನರಲ್ಲಿದೆ. ಇತರೆ ದೇಶಗಳಿಗೆ ಮಾದರಿಯಾಗುವಂತೆ ಭಾರತ ದೇಶ ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ್ ರೆಡ್ಡಿ ಅವರು ತಿಳಿಸಿದರು.


ಈ ವೇಳೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಹನುಮಂತ ರಾಯ್ ಅವರು ಮಾತನಾಡಿ, ಕೇಂದ್ರದಲ್ಲಿ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ರಾಜ್ಯದಲ್ಲಿ ಲೋಕಾಯುಕ್ತ ಭ್ರಷ್ಟಾಚಾರದ ವಿರುದ್ಧ ಕಾರ್ಯ ನಿರ್ವಹಿಸುತ್ತಿವೆ. “ಭ್ರಷ್ಟಾಚಾರ ವಿರೋಧಿಸಿ; ರಾಷ್ಟ್ರಕ್ಕೆ ಸಮರ್ಪಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮುಕ್ತ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.


ಹೆಚ್ಚಿನ ಕಾರ್ಯಕ್ರಮಗಳು ಅವಶ್ಯಕ:
ಕೇವಲ ಕಾಯ್ದೆ ಕಾನೂನಿನಡಿ ಪ್ರಕರಣಗಳು ದಾಖಲಿಸುವುದು ಮಾತ್ರ ಲೋಕಾಯುಕ್ತ ಕೆಲಸವಲ್ಲ. ಭ್ರಷ್ಟಾಚಾರ ತಡೆಗೆ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ಮುಖ್ಯವಾಗಿ ಅರಿವು ಕಾರ್ಯಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.


ಭ್ರಷ್ಟಾಚಾರ ನಿರ್ಮೂಲನೆಗೆ ಸಹಾಯ ಮಾಡಿದ ಸಾರ್ವಜನಿಕರ ಮಾಹಿತಿ ಗೌಪ್ಯವಾಗಿರಿಸಿ ಅವರಿಗೆ ರಕ್ಷಣೆ ಸಹ ನೀಡಲಾಗುವುದು. ಇದರಿಂದ ಇತ್ತೀಚಿಗೆ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಮಟ್ಟದಲ್ಲಿ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತ ರಾಯ್ ಅವರು ತಿಳಿಸಿದರು.


ಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸಿ:
ಜಿಲ್ಲೆಯಲ್ಲಿ ಇನ್ನಷ್ಟು ಅರಿವು ಕಾರ್ಯಕ್ರಮಗಳ ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಇಂತಹ ಹೆಚ್ಚಿನ ಕಾರ್ಯಕ್ರಮಗಳು ಆಗಬೇಕಿದೆ. ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೇ ತಲುಪಿಸಬೇಕು. ಸಾರ್ವಜನಿಕರಿಂದ ಯಾವುದೇ ಬೇಡಿಕೆ ಇರಿಸದೆ, ಸೇವೆಗಳ ಒದಗಿಸುವಲ್ಲಿ ವಿಳಂಬ ತೋರಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.


ಸಮಾಜದಲ್ಲಿ ಸರ್ಕಾರಿ ಕಚೇರಿಗಳ ಕುರಿತು ಸಾರ್ವಜನಿಕರಿಗೆ ಇರುವ ಚಿಂತನೆ ಬದಲಾಗುವಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಭರವಸೆ ಮೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.


ಪ್ರತಿಜ್ಞಾ ವಿಧಿ ಸ್ವೀಕಾರ:
ಇದಕ್ಕೂ ಮುಂಚೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತ ರಾಯ್ ಅವರು ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.


ನಗರ ಪೊಲೀಸ್ ಉಪ ಆಯುಕ್ತೆ (ಡಿಸಿಪಿ) ಸ್ನೇಹ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ್ ಕೂಲೇರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Bottom Add3
Bottom Ad 2

You cannot copy content of this page