ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ್ ಸ್ಫರ್ಧಿಸುತ್ತಾರಾ?
ಲೋಕಸಭೆಯಲ್ಲಿ 20 ಸೀಟು ಗೆಲುವಿಗೆ ಗುರಿ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿಗೆ ಲಿಂಗಾಯತ, ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯರ್ಥಿ ಆಯ್ಕೆಗೆ ಚಿಂತನೆ
ಬೆಳಗಾವಿ: ಲೋಕಸಭೆ ಚುನಾವಣೆಗೆ ಸತೀಶ್ ಜಾರಕಿಹೊಳಿ ಕಾರ್ಯತಂತ್ರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಚಿಂತನೆ ನಡೆದಿದ್ದು, ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ದರಾಗಿದ್ದು, ಎಲ್ಲಾ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಿಸಿದ ನಂತರ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ ಎಂದು ತಿಳಿಸಿದರು.
ಇಲ್ಲಿವರೆಗೆ ಯಾವುದೇ ಸಚಿವರಿಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಬೇಕೆಂದು ಹೈಕಮಾಂಡ್ ಹೇಳಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಮೊದಲು ಅರ್ಜಿ ಕರೆಯಲಾಗುತ್ತೆ. ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವರು ಅರ್ಜಿ ಸಲ್ಲಿಸಬೇಕು. ಅರ್ಜಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದು ತಿಳಿಸಿದ ಅವರು, ರಾಹುಲ್ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ್ ಎಲ್ಲಿಯೂ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆಂದು ಹೇಳಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಎಚ್.ಡಿ. ಕುಮಾರಸ್ವಾಮಿಯವರು ವಿರೋಧ ಪಕ್ಷದಲ್ಲಿ ಇದ್ದಾರೆ, ಆರೋಪ ಮಾಡಲು ಅವರಿಗೆ ಹಕ್ಕು ಇದೆ. ಮಾತನಾಡುತ್ತಾರೆ, ನಾವು ಮಾತನಾಡಬೇಡ ಅಂತಾ ಹೇಳಲು ಆಗಲ್ಲ. ಎಚ್ಡಿಕೆ ಸೋಫಾ ಗಿಪ್ಟ್ ಆರೋಪಕ್ಕೆ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಸ್ಪಷ್ಟಿಕರಣ ನೀಡುತ್ತಾರೆ. ಅದರ ಬಗ್ಗೆ ನಮಗೆ ಗೊತ್ತಿಲ್ಲ ಎಂದ ಅವರು, ಸಚಿವರಿಗೆ ಹಣ ಸಂಗ್ರಹ ಟಾರ್ಗೆಟ್ ಬಗ್ಗೆ ಪ್ರತಿಕ್ರಿಯಿಸಿ, ಆ ರೀತಿಯ ಕಂಡಿಷನ್ ನಮ್ಮ ಮಂತ್ರಿ ಮಂಡಲದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಸಾಕಷ್ಟು ಯೋಜನೆಗಳನ್ನು ಜನಕ್ಕೆ ನೀಡಿದೆ. ಆದರೆ ಪ್ರಚಾರ ಪಡೆದಿಲ್ಲ. ಪ್ರಚಾರ ಪಡೆಯುವ ಕಾರ್ಯ ಆಗಬೇಕಿದೆ ಎಂದರು. ಇನ್ನು ಜಾತಿ ಜನಗಣತಿ ಬಿಡುಗಡೆ ಬಗ್ಗೆ ಮಾತನಾಡಿ, ಜಾತಿ ಜನಗಣತಿ ವರದಿ ಬಗ್ಗೆ ಗೊತ್ತಿಲ್ಲ. ಅದರಲ್ಲಿ ಏನಿದೆ..? ಏನಿಲ್ಲ ಎನ್ನುವ ಅಂಶಗಳ ಕುರಿತು ಚರ್ಚೆ ನಡೆಯಬೇಕು. ಯಾರಿಗೆ ಜಾತಿ ಜನಗಣತಿ ಬಗ್ಗೆ ಗೊಂದಲ ಇದೆ ಅವರು ಸದನದಲ್ಲಿ ಹೇಳಲಿ, ಹೊರಗಡೆ ಹೇಳಿಕೆ ನೀಡಿದರೆ ಗೊಂದಲಕ್ಕೆ ಪರಿಹಾರ ಸಿಗಲ್ಲ ಎಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ:
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕೆಲವು ಚಿಕ್ಕ ವಯಸ್ಸಿನ ಯುವಕರು ಗುಂಪು ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು, ಅದೇ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕೊಲೆಗಳು ಆಗುತ್ತಿವೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಕಾರಣರಲ್ಲ. ಪೊಲೀಸರ ಗಮನಕ್ಕೆ ಬಂದರೆ ಕೆಲ ಘಟನೆಗಳನ್ನ ತಡೆಯುತ್ತಾರೆ. ಆದರೆ ಆಕಸ್ಮಿಕವಾಗಿ ನಡೆದರೆ ಏನು ಮಾಡುವುದು ಎಂದರು.
ನಾವು ಆಪರೇಶನ್ ಹಸ್ತ ಮಾಡುವುದಿಲ್ಲ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿಗೆ ಸ್ವಾತಂತ್ರ್ಯ ವಾಗಿ ಕೆಲಸ ಮಾಡಲು ಅವರ ನಾಯಕರು ಬಿಡುತ್ತಿಲ್ಲ. ಅದಕ್ಕಾಗಿ ಅವರು ಪದೇ ಪದೇ ಸಭೆ ಮಾಡುತ್ತಿದ್ದಾರೆ. ಜನ ಬಿಜೆಪಿಯವರಿಗೆ ಅಧಿಕಾರ ನೀಡಿದ್ದು, ಅವರು ಆಡಳಿತ ನಡೆಸಲಿ, ನಾವು ಆಪರೇಶನ್ ಹಸ್ತ ಮಾಡುವುದಿಲ್ಲ. ಮಹಾನಗರ ಪಾಲಿಕೆ ಅನುದಾನ ಒಂದೇ ಕಡೆ ಹೋಗಿದ್ದು, ಇದೇ ವಿಚಾರಕ್ಕೆ ಉತ್ತರ ಮತ್ತು ದಕ್ಷಿಣ ಶಾಸಕರಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ್, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯಾದರ್ಶಿ ಸುನೀಲ್ ಹನಮಣ್ಣವರ್, ಕೆಪಿಸಿಸಿ ಸದಸ್ಯ ಕಿರಣ ಸಾಧುನವರ್ ಸೇರಿದಂತೆ ಹಲವು ಮುಖಂಡರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ