Kannada NewsKarnataka NewsLatestPolitics

*48ನೇ ವಯಸ್ಸಿಗೆ ನಾನು ಪದವಿಧರನಾದೆ; ಮಂತ್ರಿಯಾಗಿದ್ದಕ್ಕಿಂತ ಪದವಿಧರನಾಗಿದ್ದೇ ಸಂತೋಷವಾಯ್ತು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡಲಿಲ್ಲ. ನನ್ನ 48ನೇ ವಯಸ್ಸಿಗೆ ನಾನು ಪದವಿಧರನಾದೆ. ಮಂತ್ರಿಯಾಗಿದಕ್ಕಿಂತ ನನಗೆ ಪದವಿಧರನಾದಾಗ ಹೆಚ್ಚು ಸಂತೋಷವಾಯಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಾವು ಪದವಿ ಪಡೆದ ಬಗ್ಗೆ ಮೆಲುಕು ಹಾಕಿದ್ದಾರೆ.

ವಿಜಯ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೀವುಗಳು ರಾಷ್ಟ್ರ ಮಟ್ಟದಲ್ಲಿ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವವರು. ಕೆಲವು ಶಾಲೆಗಳಲ್ಲಿ ಕೇವಲ ಹೆಚ್ಚು ಅಂಕಗಳಿಸಿದವರನ್ನು ಮಾತ್ರ ಸೇರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲರನ್ನು ಸೇರಿಸಿಕೊಳ್ಳುತ್ತಾರೆ. ಕುದುರೆಯನ್ನು ರೇಸ್ ನಲ್ಲಿ ಓಡುವಂತೆ ಮಾಡುವುದಲ್ಲ, ಕತ್ತೆಯನ್ನು ರೇಸ್ ನಲ್ಲಿ ಓಡುವಂತೆ ಮಾಡುವುದು ನಿಜವಾದ ಶಿಕ್ಷಣ. ಈ ಸಂಸ್ಥೆ ಈ ಪ್ರಯತ್ನ ಮಾಡುತ್ತಿದೆ ಎಂದರು

ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಲ್ಲಿ ಒಂದು ಮನವಿ ಇದೆ. ಈ ಕಾರ್ಯಕ್ರಮ ಸ್ವಾಗತ, ಪರಿಚಯವನ್ನು ಶಿಕ್ಷಕರ ಬದಲಿಗೆ ಮಕ್ಕಳಿಂದ ಮಾಡಿಸಿ. ಅವರು ಭವಿಷ್ಯದ ನಾಯಕರು. ನಾಯಕನಾದವನು ಮತ್ತೊಬ್ಬ ನಾಯಕನನ್ನು ತಯಾರು ಮಾಡಬೇಕು. ನಮ್ಮ ಮಕ್ಕಳಲ್ಲಿ ಪ್ರತಿಭೆ ಇದೆ ಎಂದು ಸಲಹೆ ನೀಡಿದರು.

ಈ ಹಿಂದೆ ಇದ್ದ ಗುರು ಶಿಷ್ಯರ ಸಂಬಂಧವೇ ಬೇರೆ, ಈಗಿರುವ ಗುರು ಶಿಷ್ಯರ ಸಂಬಂಧವೇ ಬೇರೆ. “ತ್ರೇತದೊಳ ಗುರುವು ಶಿಷ್ಯಗೆ ಜಂಗಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ದ್ವಾಪರದೊಳ್ ಗುರುವು ಶಿಷ್ಯಗೆ ದಂಡಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ಆದರೆ ಕಲಿಯುಗದೊಳ್ ಗುರುವು ಶಿಷ್ಯಂಗೆ ವಂದಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ” ಎಂಬ ಮಾತಿದೆ.

ಅಂದರೆ, ತ್ರೇತಾಯುಗದಲ್ಲಿ ಗುರುಗಳು ಶಿಷ್ಯರನ್ನು ಚಚ್ಚಿ ಪಾಠ ಕಲಿಸಿದರೂ ಅದನ್ನು ಪ್ರಸಾದವೆಂದು ಸ್ವೀಕಾರ ಮಾಡುತ್ತಿದ್ದರು. ದ್ವಾಪರ ಯುಗದಲ್ಲಿ ಗುರುಗಳು ದಂಡಿಸಿದರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಆದರೆ ಈಗ ಕಲಿಯುಗದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಮನವಿ ಮಾಡಿ ಕಲಿಸಬೇಕಾದ ಪರಿಸ್ಥಿತಿ ಇದೆ. ನಾವು ಈ ಸಂದರ್ಭದಲ್ಲಿ ಇದ್ದೇವೆ ಎಂದರು.

ಶಾಲೆಯಲ್ಲಿ ವಿದ್ಯೆ ಕಲಿಸುವವರು ಮಾತ್ರ ಶಿಕ್ಷಕರಲ್ಲ. ನಮ್ಮ ತಪ್ಪುಗಳನ್ನು ಗುರುತಿಸಿ ಬುದ್ಧಿ ಹೇಳುವವರು ಶಿಕ್ಷಕರು. ಹೀಗಾಗಿ ನಮಗೆ ಸಹಾಯ ಮಾಡುವವರನ್ನು ನಾವು ಮರೆಯಬಾರದು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸಲು ಆಗುವುದಿಲ್ಲ. ತಾಯಿಯೆ ನಮಗೆ ಮೊದಲ ಗುರು. ಹೀಗಾಗಿ ನಾವು ಸದಾ ಅವಳನ್ನು ನೆನೆಯುತ್ತೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ನೀವು ಇವರನ್ನು ನೆನೆದು ಬದುಕಬೇಕು.

ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿದ್ದಾರೆ. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. “By Birth I am an Agriculturist, By Profession I am a Businessman, By Choice I am an Educationist, By Passion I am a Politician, ಕಳೆದ ನಾಲ್ಕೈದು ವರ್ಷಗಳಿಂದ ನಾನು ನಡೆಸುತ್ತಿರುವ ಶಿಕ್ಷಣ ಸಂಸ್ಥಎಗೆ ನಾನು ಹೋಗಲು ಆಗಿಲ್ಲ. ನಿಮ್ಮ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ನಾನು ಸಂತೋಷದಿಂದ ಒಪ್ಪಿ ನಿಮ್ಮನ್ನು ನೋಡಲು ಬಂದಿದ್ದೇನೆ.

ಇಲ್ಲಿ ನನ್ನಿಂದ ದೀಪ ಹಚ್ಚಿಸಲಾಗಿದೆ. ನಮಗೆ ದೀಪದ ಬೆಳಕು ಕಾಣುತ್ತಿದೆ. “ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ. ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ!”” ಎಂಬ ಶ್ಲೋಕದಂತೆ ನಿಮಗೆ ಮಂಗಳವಾಗಲಿ. ವಿದ್ಯೆ, ಜ್ಞಾನ, ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಈ ದೀಪ ಬೆಳಗಿಸಿದ್ದೇವೆ.

ತೇಜಸ್ವಿ ಸೂರ್ಯ ಅವರು ಮಾತನಾಡುತ್ತಾ ಈಗಿನ ಕಟುಸತ್ಯ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಿಮ್ಮನ್ನು ಹೇಗೆ ತಯಾರು ಮಾಡಬೇಕು ಎಂಬ ವಿಚಾರ ಪ್ರಸ್ತಾಪಿಸಿದರು. ನಿಮ್ಮ ಕೈಗೆ ಮೊಬೈಲ್ ಮತ್ತು ಇಂಟರ್ ನೆಟ್ ಸಿಕ್ಕಿದ್ದು, ನಿಮ್ಮ ಶಿಕ್ಷಕರಿಗೆ ನೀವು ಪಾಠ ಮಾಡುವ ಶಕ್ತಿ ಬಂದಿದೆ.

ಕೃಷ್ಣ ಅವರ ಕಾಲದಲ್ಲಿ ಸಚಿವನಾಗಿದ್ದಾಗ, ಪ್ಯಾರೀಸ್ ನಲ್ಲಿ ಸಮಾವೇಶಕ್ಕೆ ಅತಿಥಿಯಾಗಿ ಹೋಗಿದ್ದೆ. ಅಂದು ನನ್ನ ಹುಟ್ಟುಹಬ್ಬದ ದಿನವಾಗಿದ್ದೆ. ಅದನ್ನು ತಿಳಿದ ಅವರು ವೇದಿಕೆ ಮೇಲೆ ಕರೆದು ಕೇಕ್ ಕತ್ತರಿಸಲು ಹೇಳಿದರು. ಈ ಸಂದರ್ಭದಲ್ಲಿ ಮೇಣದಬತ್ತಿ ಆರಿಸಲು ಹೇಳಿದರು. ಆಗ ಆ ಸಮಾವೇಶದಲ್ಲಿದ್ದ ವ್ಯಕ್ತಿಯೊಬ್ಬ ಆತ ಭಾರತದಿಂದ ಬಂದಿದ್ದು, ಭಾರತೀಯರ ಸಂಸ್ಕೃತಿ ದೀಪ ಬೆಳಗುವುದೇ ಹೊರತು ದೀಪ ಆರಿಸುವುದಲ್ಲ ಎಂದು ಹೇಳಿದರು.

ಈ ರೀತಿ ದೀಪ ಬೆಳಗುವುದು ನಮ್ಮ ದೇಶದ ಸಂಸ್ಕೃತಿ. ನಿಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಿಸುವಾಗಲೂ ಈ ದೇಶದ ಆಸ್ತಿಯಾದ ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಿ ಎಂದು ಮನವಿ ಮಾಡುತ್ತೇವೆ. ನಾವು ದೀಪ ಹಚ್ಚಿದಾಗ ಕೇವಲ ಬೆಳಕು ಕಾಣುತ್ತದೆ. ಅದರಲ್ಲಿ ಉರಿಯುವ ಬತ್ತಿಯಾಗಲಿ, ಎಣ್ಣೆಯಾಗಲಿ ಕಾಣುವುದಿಲ್ಲ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಿಮ್ಮ ಶಿಕ್ಷಕರು ಹಾಗೂ ಪೋಷಕರ ಶ್ರಮವನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಭವಿಷ್ಯದಲ್ಲಿ ದೊಡ್ಡ ನಾಯಕರಾಗಿ ಬೆಳೆಯಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಎಂಬ ಆಧಆರಸ್ತಂಭಗಳಿವೆ. ಅದೇ ರೀತಿ ನಮ್ಮ ಸಮಾಜದಲ್ಲಿ ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಶ್ರಮಿಕ ಬಹಳ ಮುಖ್ಯವಾದ ಅಂಗಗಳು. ನೀವು ನಿಮ್ಮ ಜೀವನದಲ್ಲಿ ನಾಲ್ಕು ಡಿ ಗಳನ್ನು ಅಳವಡಿಸಿಕೊಳ್ಳಬೇಕು. ನೀವು ಕನಸು ಕಾಣಬೇಕು (Dream), ಕನಸು ಸಾಕಾರಗೊಳಿಸಲು ಆಸೆ (Desire)ಪಡಬೇಕು. ಆ ಕನಸಿಗಾಗಿ ಬದ್ಧತೆ (Dedicate) ಇರಬೇಕು. ಆ ಕನಸಿನ ಸಾಕಾರಕ್ಕೆ ಶಿಸ್ತು (Discipline) ಹೊಂದಿರಬೇಕು. ಆಗ ನೀವು ದೇಶಕ್ಕೆ ಆಸ್ತಿಯಾಗಿ ಬೆಳೆಯಲು ಸಾಧ್ಯ.

ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಎಂಬ ಪುರಂದರ ದಾಸರ ಕೀರ್ತನೆಯಂತೆ ನಿಮ್ಮಂತಹ ಮಕ್ಕಳ ಭೇಟಿ ಮಾಡುವ ಅವಕಾಶ ಸಿಕ್ಕಿದ್ದೆ ನನ್ನ ಭಾಗ್ಯ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button