*ನಾನೇನೂ ತಪ್ಪು ಮಾಡಿಲ್ಲ, ದೇವರಿದ್ದಾನೆ: ಹೈಕೋರ್ಟ್ ಆದೇಶದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: “ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿರುವ ಕಾರಣ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನ್ಯಾಯಾಲಯದ ವಿಚಾರದಲ್ಲಿ ವಕೀಲರಿಂದ ಸರಿಯಾದ ಮಾಹಿತಿ ಇಲ್ಲದೆ ಈ ವಿಚಾರವಾಗಿ ಮಾತನಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ಮೈದಾನದಲ್ಲಿ ನಡೆದ ಟೆಕ್ ಸಮಿಟ್ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.
ನಿಮ್ಮ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ನೀಡುವ ಆದೇಶ ನೀಡಿದೆ ಎಂದು ಮಾಧ್ಯಮಗಳು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
“ಈ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯಕ್ಕೆ ನಾನು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ಬಂದಿದ್ದೇನೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ ಪಾಟೀಲ್ ಅವರು ರಾಜ್ಯದಲ್ಲಿ ಬಂಡವಾಳ ಆಕರ್ಷಿಸಿ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಲು, ರಾಜ್ಯವನ್ನು ಸಮೃದ್ಧಿಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅವರಿಗೆ ಬೆಂಬಲವಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸರ್ಕಾರ ನೂತನ ಬಿಟಿ ನೀತಿ ಹಾಗೂ ಅನ್ವೇಷಣಾ ನೀತಿಗಳನ್ನು ಇಂದು ಪರಿಚಯಿಸಿದೆ. ಇಂದು ಸಾವಿರಾರು ಮಂದಿ ವಿದೇಶಿ ಬಂಡವಾಳ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನ್ಯಾಯಾಲಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ವಕೀಲರು ನಮಗೆ ಮಾಹಿತಿ ನೀಡದ ಹೊರತಾಗಿ ನಾನು ಮಾತನಾಡುವುದಿಲ್ಲ.
ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿದ್ದಾನೆ, ಈ ನಾಡಿನ ಜನರಿದ್ದಾರೆ. ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ” ಎಂದು ಹೇಳಿದರು.
ಯತ್ನಾಳ್ ಅವರು ನಿಮ್ಮ ವಿರುದ್ದ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಕೇಳಿದಾಗ “ ಎಲ್ಲರ ಆಚಾರ ವಿಚಾರ, ಭಾವನೆ ಮತ್ತು ಅವರುಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಹಳ ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ