ಯಾವ ಗ್ರಾಮವೂ ಅಭಿವೃದ್ಧಿ ವಂಚಿತವಾಗಲು ಅವಕಾಶವಿಲ್ಲ – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಯಾವೊಂದು ಹಳ್ಳಿಯೂ ಅಭಿವೃದ್ಧಿಯಿಂದ ವಂಚಿತವಾಗಬಾರದೆನ್ನುವ ಗುರಿಯಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಶುಕ್ರವಾರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರು ಶಾಸಕರಾಗುವ ಮುನ್ನವೇ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದರು. ಅಲ್ಲದೆ ಆಗಲೇ ಸರಕಾರದ ಮೇಲೆ ಒತ್ತಡ ತಂದು ಅನೇಕ ಯೋಜನೆಗಳನ್ನು ತಂದಿದ್ದರು. ಶಾಸಕರಾದ ನಂತರ 1,800 ಕೋಟಿ ರೂ.ಗಳಿಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈಗ ಸಚಿವರಾದ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಇಡೀ ರಾಜ್ಯದ ಜವಾಬ್ದಾರಿ ಇದ್ದರೂ ಕ್ಷೇತ್ರವನ್ನು ಅವರು ನಿರ್ಲಕ್ಷಿಸಿದೇ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಚನ್ನರಾಜ ವಿನಂತಿಸಿದರು.
ಕ್ಷೇತ್ರಕ್ಕೆ ತರಬಹುದಾದ ಯೋಜನೆಗಳ ಕುರಿತು ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಭಾಗಗಳಿಂದ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ. ಸಮಗ್ರ ಅಭಿವೃದ್ಧಿಯಾಗಬೇಕಾದರೆ ಎಲ್ಲವೂ ಕೈಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಈವರೆಗಿನ ಕ್ಷೇತ್ರದ ಜನರ ಸಹಕಾರ ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯಲ್ಲಿರಲಿ. ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಮೌನಪ್ಪ ಪಾಟೀಲ, ಜ್ಯೋತಿಬಾ ದೇಸೂರಕರ್, ಬಾಳು ದೇಸೂರಕರ್, ಯಲ್ಲಪ್ಪ ಪಾಟೀಲ, ಕಲ್ಲಪ್ಪ ದೇಸೂರಕರ್, ಆನಂದ ಪಾಟೀಲ, ಮೀನಾಕ್ಷಿ ಪಾಟೀಲ, ಶಿಲ್ಪಾ ಮುಂಗಳೆಕರ್, ಕಲಾವತಿ ದೇಸೂರಕರ್, ಮಹೇಶ್ ಪಾಟೀಲ, ಲಕ್ಷಣ ಖಂಡೇಕರ್, ರಾಹುಲ್ ದೇಸೂರಕರ್, ಮಹೇಶ ಕೋಲಕಾರ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ