Kannada NewsKarnataka News

ಪ್ರವಾಹದ ಮಧ್ಯೆ ಸಿಕ್ಕಿ, ಗಿಡ ಏರಿಕೊಂಡಿರುವ ದಂಪತಿ

ಪ್ರವಾಹದ ಮಧ್ಯೆ ಸಿಕ್ಕಿ, ಗಿಡ ಏರಿಕೊಂಡಿರುವ ದಂಪತಿ

ಪ್ರಗತಿವಾಹನಿ ಸುದ್ದಿ, ಬೆಳಗಾವಿ –

ಸುಳೇಭಾವಿ ಹಾಗೂ ಮುಚ್ಚಂಡಿ ಗ್ರಾಮಗಳ ಮಧ್ಯದಲ್ಲಿರುವ ಕಬಲಾಪೂರ ಗ್ರಾಮದಲ್ಲಿ ಮನೆಯೊಂದು ಜಲಾವೃತವಾಗಿದ್ದು, ಗಂಡ-ಹೆಂಡತಿ ಸಿಲುಕಿಕೊಂಡಿದ್ದಾರೆ.

ಮನೆಯೊಂದರಲ್ಲಿ ದಂಪತಿ ಸಿಕ್ಕುಕೊಂಡಿದ್ದರು. ಆದರೆ ಇದೀಗ ಮನೆಯೂ ಬಿದ್ದುಹೋಗಿದೆ ಎನ್ನುವ ಮಾಹಿತಿ ಬಂದಿದ್ದು, ದಂಪತಿ ಹಗ್ಗ ಕಟ್ಟಿಕೊಂಡು ಗಿಡ ಏರಿ ಕುಳಿತುಕೊಂಡಿದ್ದಾರೆ.

ದಂಪತಿಯ ಹೆಸರು ಕಲ್ಲಪ್ಪ ಮತ್ತು ರತ್ನವ್ವ ಎಂದು ಮಾಹಿತಿ ಬಂದಿದೆ. ಅವರನ್ನು ರಕ್ಷಿಸಲು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್  ಮತ್ತು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಹೆಲಿಕಾಪ್ಟರ್ ನೆರವು ಕೇಳಲಾಗಿದೆ. ಇದೀಗ ಹಿಂಡಾಲ್ಕೊದಿಂದ 120 ಅಡಿ ಉದ್ದದ ಟ್ರೇನ್ ಕ್ರೇನ್ ತರಿಸಲಾಗುತ್ತಿದೆ.

 ಮನೆಯ ಒಳಗಡೆ ಸಿಲುಕಿಕೊಂಡಿರುವುದರಿಂದ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಪಾರು ಮಾಡುವ ಕೆಲಸಗಳು ನಿನ್ನೆಯಿಂದ ನಿರಂತರವಾಗಿ ಸಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಕೇರಳದಿಂದ ಮಿಲಿಟರಿ ಪಡೆ ಸಹ ರಕ್ಷಣೆಗೆ ಬಂದಿತ್ತು. ಆದರೂ ಯಶಸ್ವಿಯಾಗಲಿಲ್ಲ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಶಾಸಕ ಸತೀಶ್ ಜಾರಕಿಹೊಳಿ  ಸ್ಥಳದಲ್ಲೇ ಬಿಡುಬಿಟ್ಟಿದ್ದು, ನಿರಂತರವಾಗಿ ಡಿ.ಸಿ ಹಾಗೂ ತಹಶಿಲ್ದಾರರ ಜೊತೆಯಲ್ಲಿ ಸ್ಥಳದಲ್ಲೇ ನಿಂತು  ಪ್ರಯತ್ನ ನಡೆಸುತ್ತಿದ್ದಾರೆ. ನೀರಿನ ಒಳಹರಿವು ಜಾಸ್ತಿಯಾಗಿದ್ದರಿಂದ ಹಾಗೂ ನಿರಂತರ ಗಾಳಿ, ಮಳೆಯ ಕಾರಣ ಅವರನ್ನು ಸ್ಥಳಾಂತರಿಸುವ ಎಲ್ಲ ಪ್ರಯತ್ನಗಳೂ ಈವರೆಗೆ ಸಫಲವಾಗಿಲ್ಲ. 

ಹೆಲಿಕ್ಯಾಪ್ಟರ್ ಗಳ ಸೇವೆಯ ಸಲುವಾಗಿ ಮಿಲಿಟರಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಹೆಲಿಕಾಪ್ಟರ್ ಅರ್ಧ ದೂರ ಬಂದು ಹವಾಮಾನದಿಂದ ಸಮಸ್ಯೆಯಿಂದ ವಾಪಸ್ಸ್ ಹೋಗಿದೆ. ಇದೀಗ ಕ್ರೇನ್  ತರಿಸಲಾಗುತ್ತಿದೆ. 

ನಿನ್ನೆ ಬೆಳಗ್ಗೆಯಿಂದ ನಾನು ಇಲ್ಲೇ ಇದ್ದೇನೆ. ಹಲವು ರೀತಿಯ ಪ್ರಯತ್ನ ಮಾಡಲಾಗಿದೆ. ಆದರೆ ಯಾವುದೂ ಯಶಸ್ವಿಯಾಗಿಲ್ಲ. ಪ್ರಯತ್ನ ಮುಂದುವರಿಸಲಾಗಿದೆ. ಈಗ ಕ್ರೇನ್ ತರಿಸಲು, ಅದಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

-ಲಕ್ಷ್ಮಿ ಹೆಬ್ಬಾಳಕರ್, ಶಾಸಕಿ

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button