ಪ್ರಗತಿವಾಹಿನಿ ಸುದ್ದಿ; ಮುಗಳಖೋಡ: ಸಿದ್ದಲಿಂಗ, ಯಲ್ಲಾಲಿಂಗ, ಸಿದ್ದರಾಮರೆಂಬ ಮೂರು ಶಕ್ತಿಗಳು ಮುಪ್ಪರಿಗೊಂಡ ತ್ರಿಶಕ್ತಿಗಳ ಸಾಕಾರ ಮೂರ್ತಿಗಳು ಹಾಗೂ ಅಭಿನವ ಸ್ವಾಮಿ ವಿವೇಕಾನಂದರಾದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ 39ರ ಸಂಭ್ರಮ.
ಸಮಾಜದಲ್ಲಿನ ಶೋಷಣೆಯನ್ನು ನಿಲ್ಲಿಸಿ, ಸಾಮಾಜಿಕ ಮೌಲ್ಯಗಳನ್ನು ಸದೃಢಗೊಳಿಸಿ ವರ್ಗ, ವರ್ಣ, ಲಿಂಗ ಎಂಬ ಭೇದವಿಲ್ಲದೆ ಸರ್ವರಲ್ಲಿಯೂ ಸಮಾನತೆ ಬೆಳೆಸಿ ಆರೋಗ್ಯಯುತವಾಗಿ ಪ್ರೀತಿ, ಮಮತೆಯನ್ನು ತುಂಬಿ ಭಕ್ತರ ಕಷ್ಟಗಳನ್ನು ದೂರಮಾಡಿ ಅವರ ನಂಬಿಕೆಯನ್ನು ಗಟ್ಟಿಗೊಳಿಸುವುದೇ ತಮ್ಮ ಕಾಯಕವೆಂದು ತಿಳಿದು ದಿವ್ಯಶಕ್ತಿಯ ಭವ್ಯ ಪರಂಪರೆಯ ಪೀಠಾಧ್ಯಕ್ಷರಾದ ಗುರು ಡಾ. ಮುರುಘರಾಜರಿಗೆ ಡಿ. 2 ರಂದು ಜಿಡಗಿಯಲ್ಲಿ ಗುರುವಂದನಾ ಸಮಾರಂಭ.
ಗುರುಗಳ ಜನನ: ತಂದೆ ಚನ್ನವೀರಯ್ಯ ತಾಯಿ ಸುನಂದಾದೇವಿಯ ಪುಣ್ಯ ಉದರದಲ್ಲಿ ಡಿಸೆಂಬರ್ 2-1985 ರಂದು ಶ್ರೀ ಸಿದ್ದರಾಮೇಶ್ವರರ ಆಶೀರ್ವಾದದಿಂದ ಆಳಂದ ತಾಲೂಕಿನ ಜಂಬಗಿ ಗ್ರಾಮದಲ್ಲಿ ಜನಿಸಿದರು.
ಸಾಧನೆ: ಶ್ರೀ ಸಿದ್ದರಾಮ ಶಿವಯೋಗಿಗಳ ಆಶೀರ್ವಾದದಂತೆ ತಮ್ಮ ಶಿಕ್ಷಣ ವಿದ್ಯಾಭ್ಯಾಸದ ಜೊತೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀಮಠದ ಭಕ್ತರನ್ನೆಲ್ಲಾ ಸಂರಕ್ಷಿಸುತ್ತಾ ಇವತ್ತಿಗೆ 365 ಮಠಗಳನ್ನು ನಡೆಸಿಕೊಂಡು ಇಡೀ ವಿಶ್ವವೇ ಮುಗಳಖೋಡದತ್ತ ತಿರುಗಿ ನೋಡುವಂತೆ ಮೂರು ವಿಶ್ವ ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಳ್ಳುವಂತೆ ಮುಗಳಖೋಡದಲ್ಲಿ ಸಮಾಜಮುಖಿ ಕೆಲಸಗಳನ್ನ ಹಮ್ಮಿಕೊಂಡ ಶ್ರೇಯಸ್ಸು ಮುರುಘರಾಜರಿಗೆ ಸಲ್ಲುತ್ತದೆ. ಗುರುಗಳ ವಯಸ್ಸು ಚಿಕ್ಕದಿದ್ದರು ಅನುಭವ ದೊಡ್ಡದು ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆ, ಅವಿಶ್ರಾಂತ ದುಡಿಮೆ, ಸದಾ ಭಕ್ತರ ಏಳಿಗೆಯನ್ನೇ ಬಯಸಿ ಅಭಿವೃದ್ಧಿಗಾಗಿ ಹಗಲಿರಳು ದುಡಿದು, ಸದಾ ಕಾಯಕ ಜೀವಿಗಳಾಗಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾ, ತಮ್ಮ ಗುರುಗಳ ಸಂಕಲ್ಪವನ್ನು ಸಿದ್ಧಿ ಮಾಡುವುದಕ್ಕೆ ನಿತ್ಯ-ನಿರಂತರ ಪರಿಶ್ರಮ ಸಲ್ಲಿಸಿ ಎಲ್ಲರನ್ನು ಏಕತಾಭಾವದ ಪ್ರೀತಿಯಿಂದ ಬಿಗಿದಪ್ಪಿಕೊಂಡು ಭಕ್ತರನ್ನ ಕರೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದಾರೆ.
ಗುರುವಿಗೆ ಸಂದ ಪುರಸ್ಕಾರಗಳು: ತ್ರಿಕಾಲ ದಾಸೋಹಿ, ಜಂಗಮ ಜ್ಯೋತಿ ಜಗದ್ಗುರು, ಬಸವ ಚೇತನ, ಕನ್ನಡ ವೀರ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ವಿವಿಧ ಪುರಸ್ಕಾರಗಳು ಗುರುವಿಗೆ ಲಭಿಸಿವೆ.
ಪೂಜ್ಯರ ಅಮೃತವಾಣಿಯು ಭಕ್ತರನ್ನು ಆಧರದಿಂದ ಆಹ್ವಾನಿಸಿ ಇವರ ಮಮಕಾರದ ಮನವು, ಮುಗುಳುನಗೆಯ ಮೊಗವು, ಎಲ್ಲರನ್ನೂ ಸಮಾನತೆಯಿಂದ ಕಾಣುವ ವಿಶಾಲ ಹೃದಯ ಇವೆಲ್ಲವೂ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಇತ್ಯಾದಿ ರಾಜ್ಯಗಳಿಂದ ಲಕ್ಷ ಲಕ್ಷ ಭಕ್ತ ಸಮೂಹವನ್ನು ಶ್ರೀ ಮಠಕ್ಕೆ ಓಡೋಡಿ ಬರುವಂತೆ ಮಾಡಿದೆ.
ಸಿದ್ಧಶ್ರೀ ಪ್ರಶಸ್ತಿ: ಗುರುಮುರುಘರಾಜರ ಹುಟ್ಟುಹಬ್ಬದ ನಿಮಿತ್ಯವಾಗಿ ಪ್ರತಿ ವರ್ಷ ಡಿಸೆಂಬರ್ 2ರಂದು ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಹೆಸರಿನ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ವಿಶೇಷ ಸೇವೆಯನ್ನ ಸಲ್ಲಿಸಿದ ವ್ಯಕ್ತಿಗಳಿಗೆ ಒಂದು ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡ ‘ಸಿದ್ಧಶ್ರೀ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಇಂದು ಗುರುಗಳಿಗೆ ಗುರುವಂದನೆ:
ಡಿಸೆಂಬರ್ 2 ಶನಿವಾರ ಕಲ್ಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಸುಕ್ಷೇತ್ರ ಜಿಡಗಾ ನವಕಲ್ಯಾಣಮಠದಲ್ಲಿ ಪರಮಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ 39ನೇ ಹುಟ್ಟುಹಬ್ಬ ಕಾರ್ಯಕ್ರಮ ನಡೆಯುತ್ತಿದೆ.
ಶನಿವಾರ ಬೆಳಗ್ಗೆ ಶ್ರೀ ಸಿದ್ದರಾಮೇಶ್ವರ ಕರ್ತೃ ಗದ್ದುಗೆಗೆ ಭಕ್ತರ ಏಳಿಗೆಗಾಗಿ ಡಾ. ಮುರುಘರಾಜೇಂದ್ರ ಶ್ರೀಗಳ ಅಮೃತ ಹಸ್ತದಿಂದ ರುದ್ರಾಭಿಷೇಕ ಹಾಗೂ ವಿಶೇಷವಾಗಿ ಗೋವುಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಭರತನಾಟ್ಯ, ಗ್ರೂಪ್ ಡ್ಯಾನ್ಸ್, ಕೊಳಲುನಾದ, ಸಂಗೀತ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸಾಯಂಕಾಲ 6: ಗಂಟೆಗೆ ನಾಡಿನ ಅನೇಕ ಶರಣರು, ಮಠಾಧೀಶರು, ರಾಜಕಾರಣಿಗಳು, ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಗುರುಗಳ ಗುರುವಂದನಾ (ಹುಟ್ಟುಹಬ್ಬ) ಕಾರ್ಯಕ್ರಮ ಜರುಗುವುದು. ಇದೆ ಸಂದರ್ಭದಲ್ಲಿ ಆಸ್ಥಾನದ ಗವಾಯಿಗಳಿಂದ ಸಂಗೀತ ಗಾನಸುಧೆ ನೆರವೇರುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ