*ಲೋಕಸಭೆಗೆ ನುಗ್ಗಿ ಅಶ್ರುವಾಯು ದಾಳಿ; ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದ ದುಷ್ಕರ್ಮಿ*
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪವುಂಟಾಗಿರುವ ಘಟನೆ ನಡೆದಿದೆ. ದುಷ್ಕರ್ಮಿಗಳಿಬ್ಬರು ಲೋಕಸಭಾ ಕಲಾಪದ ವೇಳೆ ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣ ಹೊಗೆಭರಿತ ವಸ್ತುವನ್ನು ಎಸೆದಿದ್ದಾರೆ.
ಅಪರಿಚಿತ ವ್ಯಕ್ತಿಗಳಿಂದ ಕಲಾಪದೊಳಗೆ ಏಕಾಏಕಿ ದಾಳಿಯಾಗುತ್ತಿದ್ದಂತೆ ಸಂಸದರು ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ಓರ್ವನನ್ನು ಹಿಡಿದಿದ್ದಾರೆ. ದುಷ್ಕರ್ಮಿ ಕರ್ನಾಟಕ ಮೂಲದವನೆಂದು ತಿಳಿದುಬಂದಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ದುಷ್ಕರ್ಮಿಗಳಿಬ್ಬರು ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದುಕೊಂಡು ಕಲಾಪದ ಗ್ಯಾಲರಿಯಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಓರ್ವ ಮೈಸೂರಿನ ವಿಜಯನಗರದ ಸಾಗರ್ ಶರ್ಮಾ ಎಂದು ತಿಳಿದುಬಂದಿದೆ .
ಇದೇ ವೇಳೆ ಸಂಸತ್ ನ ಹೊರಭಾಗದಲ್ಲಿ ಅಮೋಲ್ ಎಂಬ ಯುವಕ ಹಾಗೂ ನೀಲಮ್ ಎಂಬ ಯುವತಿ ಇಬ್ಬರು ಪ್ರತಿಭಟನೆ ನಡೆಸುತ್ತಿದ್ದರು. ಒಟ್ಟು ನಾಲ್ವರು ದುಷ್ಕರ್ಮಿಗಳು ಪಕ್ಕಾ ಪ್ಲಾನ್ ಮಾಡಿ ಈ ದುಷ್ಕಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಸಂಸತ್ ಒಳಗೆ ವೀಕ್ಷಕರ ಗ್ಯಾಲರಿಯಲ್ಲಿಯೂ ಮೊಬೈಲ್ ಫೋನ್, ಪರ್ಸ್ ಯಾವುದೇ ವಸ್ತು ಕೊಂಡೊಯ್ಯಲು ಬಿಡುವುದಿಲ್ಲ. ಆದರೆ ದುಷ್ಕರ್ಮಿಗಳಿಬ್ಬರೂ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದು ಅಲ್ಲದೇ ಹೊಗೆ ಬರುವಂತಹ ವಸ್ತುವನ್ನು ಕೊಂಡೊಯ್ದಿದ್ದು ಹೇಗೆ ಎಂಬುದು ಚರ್ಚೆಗೆ ಕಾರಣವಾಗಿದೆ. ಲೋಕಸಭೆಯಲ್ಲಿ ಭದ್ರತಾ ಲೋಪ ಎಂಬುದು ಸ್ಪಷ್ಟವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ