Kannada NewsKarnataka NewsLatestPolitics

*ಮಕ್ಕಳಿಂದ ಶೌಚಗುಂಡಿ ಸ್ವಚ್ಛತೆ ಪ್ರಕರಣ; ತನಿಖೆ ನ್ಯಾಯಾಧೀಶರಿಗೆ ಒಪ್ಪಿಸಿ; ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ ಅವರು ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದ ಕೋಲಾರ ಜಿಲ್ಲೆಯ ಯಲುವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಅಧಿಕಾರಿಗಳು, ಶಿಕ್ಷಕರು, ಮಕ್ಕಳೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು.


ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆರ್.ಅಶೋಕ್ ಅವರು, ಕರ್ತವ್ಯನಿರತ ನ್ಯಾಯಾಧೀಶರಿಂದ ಈ ದುರ್ಘಟನೆಯ ಕುರಿತು ತನಿಖೆ ನಡೆಸಿ ಎಂದು ಆಗ್ರಹಿಸಿದರು. ಮಕ್ಕಳ ದೂರುಗಳ ವಿಲೇವಾರಿಗೆ ಸಹಾಯವಾಣಿ ಆರಂಭಿಸಬೇಕು. ನ್ಯಾಯಾಧೀಶರು ರಾಜ್ಯದ ಎಲ್ಲ ಕಡೆ ತೆರಳಿ ವರದಿ ನೀಡಿದರೆ ಸರಕಾರದ ಕಾಮಾಲೆ ಕಣ್ಣು ತೆರೆಯಲು ಸಾಧ್ಯ ಎಂದು ನುಡಿದರು.


ಹಾಸ್ಟೆಲ್‍ನಲ್ಲಿ ಅನ್ಯಾಯ, ದೌರ್ಜನ್ಯ ಆಗುತ್ತಿದೆ. ಮ್ಯಾನ್‍ಹೋಲ್‍ಗಳು, ಶೌಚಗುಂಡಿಗೆ ಇಳಿಯುವುದು ಅಪರಾಧ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲದೆ ವ್ಯಕ್ತಿಗೆ ಅವಮಾನ ಮಾಡಿದಂತೆ. ಅಷ್ಟಿದ್ದರೂ 1ರಂದು ಘಟನೆ ನಡೆದಿದ್ದು, ಅದನ್ನು ಮುಚ್ಚಿಹಾಕಿದ್ದಾರೆ ಎಂದು ಟೀಕಿಸಿದರು.
ಅಧಿವೇಶನದ ವೇಳೆ ಬಂದರೆ ಸರಕಾರಕ್ಕೆ ಸಮಸ್ಯೆ ಎಂದು ಅದನ್ನು ಮುಚ್ಚಿಹಾಕಿದ್ದಾರೆ. ಪ್ರಿನ್ಸಿಪಾಲ್ ಅವರ ಸೂಚನೆಯಂತೆ ಹಳ್ಳಿಯಿಂದ ಬಿದಿರು ತಂದು ಶೌಚಗುಂಡಿಗೆ ಇಳಿದು ಶುಚಿ ಮಾಡಿದ್ದೇವೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವೇ? ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಇಲ್ಲಿ ಈ ಥರ ಮಕ್ಕಳಿಂದ ಕಮೋಡ್, ಬಾತ್‍ರೂಂ, ಶೌಚಗುಂಡಿ ಶುಚಿಗೊಳಿಸಿದ್ದಾರೆ. ಇದು ಸರಕಾರಕ್ಕೆ ಕೆಟ್ಟ ಹೆಸರು ತರುವಂತಿದೆ ಎಂದು ತಿಳಿಸಿದರು.


ಕಾನೂನಿನ ಭಯವೇ ಇಲ್ಲ. ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಚಾರ್ಟ್ ಪ್ರಕಾರ ಇಲ್ಲಿ ಸರಬರಾಜು ಮಾಡುತ್ತಿಲ್ಲ. 240 ಮಕ್ಕಳಿಗೆ 4 ಲೀಟರ್ ಹಾಲು ತರಿಸುತ್ತಿದ್ದರು ಎಂದು ವಾಸ್ತವ ಸ್ಥಿತಿಯ ಕುರಿತು ವಿವರ ನೀಡಿದರು. ತರಕಾರಿ ಇಲ್ಲವೇ ಇಲ್ಲ; ಕೆಟ್ಟು ಹೋದ ಮೊಟ್ಟೆ ಕೊಡುತ್ತಿದ್ದರು ಎಂದು ಮಕ್ಕಳು ಹೇಳಿದ ವಿವರವನ್ನು ತಿಳಿಸಿದರು.


ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ:
1ರಂದು ಘಟನೆ ನಡೆದಿದೆ. ಇವತ್ತು ಜಿಲ್ಲಾ ಸಚಿವರು ಬಂದಿದ್ದಾರೆ. ಇದು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ. ಸರಕಾರ ಬದುಕಿದೆಯೇ ಸತ್ತಿದೆಯೇ ಗೊತ್ತಾಗುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸತ್ತು ಹೋದ ಮಗುವಿನ ದೇಹ ಕೇಳಿದರೆ ದುಡ್ಡಿಗಾಗಿ ಪೀಡಿಸಿದ್ದಾರೆ. ಅದರ ವಿಡಿಯೋವನ್ನು ಮಾಧ್ಯಮದವರಿಗೆ ಕಳುಹಿಸುವೆ ಎಂದು ತಿಳಿಸಿದರು.


ನಂಜನಗೂಡಿನಲ್ಲಿ ಹೊಲಕ್ಕೆ ಹೋದ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದೆ. ಸರಕಾರಕ್ಕೆ ತಾಳ, ಮೇಳ ಇಲ್ಲ. ವರ್ಗಾವಣೆ ದಂಧೆಯಲ್ಲಿ ಅದು ತೊಡಗಿದೆ ಎಂದು ದೂರಿದರು. ವಸೂಲಿ ವ್ಯವಹಾರ ನಡೆದಿದೆ. ವಿಡಿಯೋ ಮಾಡಿದ ಘಟನೆಯೂ ಇಲ್ಲಿ ಆಗಿರುವ ದೂರು ಇದೆ. ಹೆಣ್ಮಕ್ಕಳನ್ನು ಹಾಸ್ಟೆಲ್‍ಗೆ ಕಳಿಸುವುದು ಹೇಗೆ? ಇಲ್ಲಿ ಪ್ರಾಂಶುಪಾಲರು ಸೇರಿ 13 ಜನರಿಗೂ ಮನೆ ಕೊಟ್ಟಿದ್ದರೂ 3 ಜನ ಮಾತ್ರ ಇಲ್ಲಿ ಇದ್ದಾರೆ. ಉಳಿದವರು ವಿಸಿಟಿಂಗ್ ಥರ ಇದ್ದಾರೆ ಎಂದು ಆಕ್ಷೇಪಿಸಿದರು.

ಗುಂಪುಗಾರಿಕೆ, ದುಡ್ಡು ವಸೂಲಿ ನಡೆಯುತ್ತಿತ್ತು. ಗಾಜು ಇದ್ದ ಕಾರಣ ಶೌಚಗುಂಡಿಗೆ ಇಳಿದ ಮಕ್ಕಳಲ್ಲಿ ಒಬ್ಬರ ಕಾಲು ಕಟ್ ಆಗಿದೆ. ಶೌಚಗುಂಡಿಗೆ ಇಳಿದ ಈ ಮಕ್ಕಳ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ನುಡಿದರು. ಹಲವು ಮಕ್ಕಳ ಸ್ಕಿನ್ ಅಲರ್ಜಿ ಆಗಿದೆ. ಈ ಸರಕಾರಕ್ಕೆ ಕಣ್ಣು ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಮುಖಂಡರು ಜೊತೆಯಲ್ಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button