Kannada NewsLatestNational

*ಮುಂಬೈನಲ್ಲಿ 57ನೇ ರಾಷ್ಟ್ರೀಯ ನೃತ್ಯೋತ್ಸವ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ; ಮುಂಬೈ: ನ್ಯಾಷನಲ್ ಕ್ಲಾಸಿಕಲ್ ಅಕಾಡೆಮಿ(ಎನ್‌ಸಿಡಿಎ) ಹಾಗೂ ಮೈಸೂರು ಅಸೋಸಿಯೇಟ್ಸ್ ಸಂಯುಕ್ತಾಶ್ರಯದಲ್ಲಿ ಮುಂಬೈನ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 58ನೇ ರಾಷ್ಟ್ರೀಯ ನೃತ್ಯೋತ್ಸವವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟಿಸಿದರು.


ಅವರು ಮಾತನಾಡಿ, ಪ್ರತಿಭೆ ಯಾರ ಸ್ವತ್ತು ಅಲ್ಲ. ಅದು ಸಾಧಕರ ಸ್ವತ್ತು. ನಾವು ಸಾಧಕರಾಗಬೇಕೆ ಹೊರತು ನಿಂದಕರಾಗಬಾರದು ಎಂದರು.
ಈ ನೆಲೆದ ಸೊಗಡಿನ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಕಲೆಗಳ ಕಂಪನ್ನು ವಿಶ್ವದಾದ್ಯಂತ ಪಸರಿಸಲು ವಿದುಷಿ ಸ್ವಾತಿ ಪಿ ಭಾರದ್ವಾಜ್ ನಿರಂತರ ಪ್ರಯತ್ನಶೀಲರಾಗಿರುವುದು ಪ್ರಶಂಸನೀಯ ಎಂದು ಶ್ಲಾಸಿದರು.


ಕಲೆ ಯಾರ ಸ್ವತ್ತಲ್ಲ ಪೋಷಕರಲ್ಲಿ ಶ್ರದ್ಧೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸ್ವಾತಿ ಉದಾಹರಣೆ. ಸ್ವಾತಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ಬಲ್ಲೆ. ತನ್ನ ಸಾಧನೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ವಿಶ್ವದಾದ್ಯಂತಿರುವ ಕಲಾವಿದರನ್ನು ಬೆಳಸುವ ನಿಟ್ಟಿನಲ್ಲಿ ತನ್ನದೇ ಆದಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದರು.


ತಾನು ಕಲಿತಿರುವ ವಿಧ್ಯೆಯನ್ನು ಧಾರೆ ಎರೆದು, ಅವರಿಗೊಂದು ವೇದಿಕೆಯನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅಕಾಡೆಮಿ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದರು.


ಚಿಕ್ಕ ವಯಸ್ಸಿನಲ್ಲಿಯೇ ಸಾಧಕಿಯಾಗಿರುವ ಸ್ವಾತಿ, ಜಿಲ್ಲೆ, ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರವೆಂದರು, ನೃತ್ಯೋತ್ಸವದಲ್ಲಿ ಜರ್ಮನ್, ಚೆನ್ನೈ ,ಆಂಧ್ರ ಪ್ರದೇಶ, ಮುಂಬೈ ಕರ್ನಾಟಕ ಭಾಗದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಜರ್ಮನ್ ದೇಶದ ಕಲಾವಿದೆಯ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಎಲ್ಲಾ ಕಲಾವಿದರಿಗೆ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.


ಹಿರಿಯ ಭರತನಾಟ್ಯ ಕಲಾವಿದೆ ಮಾಧುರಿ ಪ್ರತಾಪ್ ಮಾತನಾಡಿ, ನಾನು 2017ರಲ್ಲಿ ಹಾಸನದಲ್ಲಿ ನಡೆದ ನೃತ್ಯೋತ್ಸವಲ್ಲಿ ಭಾಗವಹಿಸಿದ್ದೆ. ಹಾಸನದಲ್ಲಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಡಾ. ಸ್ವಾತಿ ದೇಶದ ಒಂದು ಆಸ್ತಿ ಎಂದರು.


ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಾನಂದ ತಗಡೂರು ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಆಯೋಜನ ಕಾರ್ಯದರ್ಶಿ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಂ, ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯ ರಾಷ್ಟ್ರೀಯ ಸಂಚಾಲಕ ಚಿನ್ಮಯ ಹೆಗಡೆ, ಅಕಾಡೆಮಿ ಅಧ್ಯಕ್ಷರಾದ ಅನಿತಾ ಪ್ರಕಾಶ್ ಇತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button