ಜೊಲ್ಲೆ ಗ್ರೂಪ್ ವತಿಯಿಂದ ಪ್ರಕಾಶ ಶೆಟ್ಟಿಗಾರ ಅವರಿಗೆ ಪ್ರೇರಣಾ ಪುರಸ್ಕಾರ ಪ್ರಶಸ್ತಿ ಪ್ರಧಾನ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-“ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿದರೆ ಸನ್ಮಾನ ಒಲಿದು ಬರುತ್ತದೆ. ಸಮಾಜದ ನಿಂದನೆಗೆ ಹೆದರಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಂದು ಇಂತಹ ಬಿರುದು ಸನ್ಮಾನಗಳಿಂದ ವಂಚಿತನಾಗುತ್ತಿದ್ದೆ” ಎಂದು 2023 ನೇ ಸಾಲಿನ ಪ್ರೇರಣಾ ಪುರಸ್ಕಾರ ವಿಜೇತ ಮೂಡಬಿದರೆಯ ಸ್ಪೂರ್ತಿ ವಿಶೇಷ ಮಕ್ಕಳ ವಸತಿ ಶಾಲೆಯ ಸಂಸ್ಥಾಪಕ ಪ್ರಕಾಶ ಶೆಟ್ಟಿಗಾರ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ನಣದಿ ಕ್ಯಾಂಪಸ್ ನಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ್ದ ಪ್ರೇರಣಾ ಉತ್ಸವ-2023 ರ “ಪ್ರೇರಣಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, “ಪಾರ್ಶ್ವವಾಯುನಿಂದ ತನ್ನದೊಂದು ಕಾಲು ಶಕ್ತಿಹೀನವಾಗಿದ್ದ ಸಮಾಜ ಕೆಲವರು ಕುಂಟ, ಹೆಳವ ಎಂದು ಕುಹದ ಮಾತುಗಳನ್ನು ಆಡುತ್ತಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿ ಇದೀಗ ತನ್ನಂತೆ ವಿಕಲಚೇತನರಾಗಿರುವ ನೂರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದರಿಂದಲೇ ಜೊಲ್ಲೆ ಗ್ರುಪ್ ನೀಡುವ ಪ್ರೇರಣಾ ಪುರಸ್ಕಾರ ಒಲಿದು ಬಂದಿದ್ದು ಹೆಮ್ಮೆ ತಂದಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, “ವಿಶೇಷ ಚೇತನ ಮಕ್ಕಳಿಗಾಗಿ ಸೇವೆ ಸಲ್ಲಿಸಿದ ವಿಶೇಷ ವ್ಯಕ್ತಿಗಳಿಗೆ ಪ್ರೇರಣಾ ಪುರಸ್ಕಾರ ಪ್ರಶಸ್ತಿಯನ್ನು ಕಳೆದ 12 ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು, ತಾನು ಭಾರತ ವಿಶೇಷ ಓಲಂಪಿಕ್ ನ ಕರ್ನಾಟಕದ ಅಧ್ಯಕ್ಷೆಯಾಗಿದ್ದು, ಇಲ್ಲಿನ ವಿಶೇಷ ಚೇತನ ಮಕ್ಕಳಿಗೆ 2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಓಲಂಪಿಕ್ ನಲ್ಲಿ ಕರ್ನಾಟಕ ರಾಜ್ಯದ ವಿಶೇಷ ಚೇತನ ಮಕ್ಕಳು ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಕರಿಗೆ, ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಜೊಲ್ಲೆ ಗ್ರುಪ್ ನಿಂದ ಮುಂಬರುವ ದಿನಗಳಲ್ಲಿ ಜೀವನದ ಸಂಧ್ಯಾಕಾಲದ ಜೀವಿಗಳಿಗಾಗಿ ಆಶಾಜ್ಯೋತಿ ವೃದ್ಧಾಶ್ರಮವನ್ನು ತೆರೆಯಲಾಗುವುದು “ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರು ಮಾತನಾಡಿ, ಹಿಂದಿನ ಕಾಲದಲ್ಲಿ ಶಿಕ್ಷಣ ಎಂಬುವುದು ಸಾಮಾನ್ಯ ಜನರಿಗೆ ನೆಲುಕದಂತಿತ್ತು. ಇದೀಗ ಜೊಲ್ಲೆ ಗ್ರುಪ್ ನಂತಹ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರದ ಕ್ರಮದಿಂದಾಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ” ಎಂದರು.
ಸಮಾರಂಭವನ್ನು ಉದ್ದೇಶಿಸಿ ಹುಕ್ಕೇರಿಯ ಖ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮುಂತಾದವರು ಮಾತನಾಡಿದರು.
ಕನ್ಹೇರಿಯ ಸಿದ್ದ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಡಕಲಾಟದ ಶಿವಬಸವ ಸ್ವಾಮೀಜಿ, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಸವದತ್ತಿಯ ಭೃಮರಾಂಭಾದೇವಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಭಜರಂಗದಳದ ಉತ್ತರ ಪ್ರಾಂತ ವಿಭಾಗ ಪ್ರಮುಖ ವಿಠ್ಠಲಜೀ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಂ ಪಿ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಪ್ರಣವ ಮಾನವಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ ಮುಂತಾದವರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಜೊಲ್ಲೆ ಗ್ರುಪ್ ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಮಹೋದರಯನ್ನು ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿ, ವಂದಿಸಿದರು.
ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಜೊಲ್ಲೆ ಗ್ರುಪ್ ಅಂಗ ಸಂಸ್ಥೆಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ರಾಬರ್ಟ್ ಸಿನಿಮಾದಲ್ಲಿನ “ರಾಮ ರಾಮ ರಾಮನು…ರಾಮ ಭಕ್ತ ಹನುಮನೋ…ಹಾಡಿಗೆ ನೃತ್ಯ ಮಾಡಿದ್ದು ಸಭಿಕರ ಮನಸೂರೆಗೊಂಡಿತು. ಅದರಲ್ಲೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರೂ ಆಗಿರುವ ಜ್ಯೋತಿಪ್ರಸಾದ ಜೊಲ್ಲೆ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಜೈ ರಾಮ್. ಶ್ರೀ ರಾಮ್. ಜೈ ಜೈ ರಾಮ್ ಎಂಬ ಉದ್ಘೋಷ ಸಭಾಂಗಣದಲ್ಲಿ ಅನುರಣನಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ