ಪ್ರವಾಹದ ಹಾನಿಯ ಮೊತ್ತವನ್ನು ಅಂದಾಜಿಸಲು ಸಾಧ್ಯವಿಲ್ಲ : ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಶುಕ್ರವಾರ ಸಂಜೆ ಮತ್ತೆ ಸಂತ್ರಸ್ಥರ ನೆರವಿಗೆ ಧಾವಿಸಿದರು. ಸುರಿಯುತ್ತಿರುವ ಮಳೆಯಲ್ಲಿಯೇ ತಾಲೂಕಿನ ಬೆಟಗೇರಿ, ಬಿಲಕುಂದಿ, ತಪಸಿ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ಥರನ್ನು ಶಾಸಕರು ಭೇಟಿ ಮಾಡಿದರು. ಪರಿಹಾರ ಕೇಂದ್ರದಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಳೆರಾಯನ ರುದ್ರನರ್ತನಕ್ಕೆ ಸಿಕ್ಕಿರುವ ನಮ್ಮ ಭಾಗದ ಜನರು ಗಾಬರಿಯಾಗಬೇಡಿ. ಹೆಚ್ಚುತ್ತಿರುವ ಸತತ ಮಳೆಯಿಂದಾಗಿ ನಮ್ಮ ತಾಲ್ಲೂಕುಗಳ ನದಿ ತೀರದ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈಗ ನಾವೆಲ್ಲರೂ ಮಳೆ ನಿಲ್ಲಬೇಕೆಂದು ಆ ವರುಣ ದೇವನಲ್ಲಿ ಪ್ರಾರ್ಥಿಸೋಣ. ಮಳೆ ನಿಂತರೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಮಳೆಯ ಅಬ್ಬರದಿಂದಾಗಿ ವಸತಿ ಕಳೆದುಕೊಂಡಿರುವ ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುವುದು. ಬೆಳೆಗಳ ಹಾನಿ, ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಇಷ್ಟೇ ಮೊತ್ತದ ಹಾನಿಯಾಗಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಹಾನಿಯ ಪ್ರಮಾಣ ಹೆಚ್ಚುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಂತ್ರಸ್ಥರಿಗೆ ಎಲ್ಲ ರೀತಿಯ ಪರಿಹಾರ ದೊರಕಿಸಿಕೊಡುವ ಸಂಬಂಧ ಮನವಿ ಮಾಡಿಕೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸಂತ್ರಸ್ಥರಿಗೆ ಭರವಸೆ ನೀಡಿದರು. ಸಂತ್ರಸ್ಥರು ಶಾಸಕರಿಗೆ ತಮ್ಮ ಅಳಲು ತೋಡಿಕೊಂಡರು.
ದಿನಂಪ್ರತಿ ೧೫೦೦ ಸಂತ್ರಸ್ಥರಿಗೆ ಉಪಹಾರ-ಊಟದ ವ್ಯವಸ್ಥೆಗೆ ನೆಲಮಂಗಲ ಮಾಜಿ ಶಾಸಕ ನಾಗರಾಜ್ ತಂಡದ ಆಗಮನ.
ಜಲ ಪ್ರವಾಹಕ್ಕೆ ಒಳಗಾಗಿರುವ ಸಂತ್ರಸ್ಥರ ನೆರವಿಗೆ ನೆಲಮಂಗಲ ಮಾಜಿ ಶಾಸಕ ಎಂ.ವ್ಹಿ. ನಾಗರಾಜ್ ಅವರು ಧಾವಿಸಿದ್ದು, ಅರಭಾವಿ ಕ್ಷೇತ್ರದ ಸಂತ್ರಸ್ಥರ ಪರಿಹಾರ ಕೇಂದ್ರದಲ್ಲಿರುವ ಜನರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲು ನೆಲಮಂಗಲ ಕ್ಷೇತ್ರದಿಂದ ಈಗಾಗಲೇ ನಾಗರಾಜ್ ಅವರ ತಂಡ ಗೋಕಾಕ ತಾಲೂಕಿನ ಬೆಟಗೇರಿಗೆ ಶುಕ್ರವಾರ ಮಧ್ಯಾಹ್ನ ಆಗಮಿಸಿದೆ.
ದಿನೇ ದಿನೇ ಹೆಚ್ಚುತ್ತಿರುವ ಧಾರಾಕಾರ ಮಳೆಯಿಂದಾಗಿ ಕಂಗೆಟ್ಟಿರುವ ನಿರಾಶ್ರಿತರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲು ನೆಲಮಂಗಲದಿಂದ ೧೦ ಬಾಣಿಸಿಗರು ಊಟ ಮತ್ತು ಉಪಹಾರಕ್ಕೆ ಅಗತ್ಯವಿರುವ ಎಲ್ಲ ರೇಷನ್‌ದೊಂದಿಗೆ ಆಗಮಿಸಿದ್ದಾರೆ.
ನಾಳೆಯಿಂದ ಬೆಟಗೇರಿಯಲ್ಲಿ ಆರಂಭವಾಗಲಿರುವ ಊಟದ ವ್ಯವಸ್ಥೆಗಾಗಿ ಈಗಾಗಲೇ ಬೆಟಗೇರಿಯಲ್ಲಿ ಬಾಣಸಿಗರು ಬೀಡು ಬಿಟ್ಟಿದ್ದು, ದಿನನಿತ್ಯ ಅಂದಾಜು ೧೦೦೦-೧೫೦೦ ನಿರಾಶ್ರಿತರಿಗೆ ಊಟವನ್ನು ತಯಾರಿಸಿ ನೀಡಲಿದ್ದಾರೆ. ಅಡುಗೆಗೆ ಬೇಕಾದ ಎಲ್ಲ ಸಾಮಗ್ರಿಗಳೊಂದಿಗೆ (ನೀರನ್ನು ಹೊರತುಪಡಿಸಿ) ಹಾಗೂ ರೇಷನ್‌ದೊಂದಿಗೆ ಆಗಮಿಸಿರುವ ತಂಡ ಅಡುಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾಜಿ ಶಾಸಕ ಎಂ.ವ್ಹಿ. ನಾಗರಾಜ್ ಅವರು ಕಳುಹಿಸಿರುವ ಈ ತಂಡದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಮಲ್ಲಯ್ಯಾ, ವನಲೆಹಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ, ಶಿವಾಜಿ ಶಿಂಧೆ, ಎಂ.ಟಿ.ಬಿ ರುದ್ರಯ್ಯಾ, ವಸಂತ ಅವರು ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿದ್ದಾರೆ.
ಈ ತಂಡ ನಿರಾಶ್ರಿತರಿಗೆ ಬೆಳಗಿನ ಜಾವ ಉಪ್ಪಿಟ್ಟು, ಮಧ್ಯಾಹ್ನ ಹಾಗೂ ರಾತ್ರಿ ಊಟ ತಯಾರಿಸಿ ನೀಡಲಿದ್ದು, ಆ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಊಟ ವಿತರಿಸುವ ಜವಾಬ್ದಾರಿಯನ್ನು ಅಲ್ಲಿನ ಮುಖಂಡರುಗಳು ನೋಡಿಕೊಳ್ಳಲಿದ್ದಾರೆ.
ಅಭಿನಂದನೆ :
ಅರ್ಭಟದ ಮಳೆಯಿಂದಾಗಿ ಜನವಸತಿ ಕಳೆದುಕೊಂಡಿರುವ ನಿರಾಶ್ರಿತರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತುಕೊಂಡಿರುವ ಮಾಜಿ ಶಾಸಕ ಎಂ.ವ್ಹಿ. ನಾಗರಾಜ್ ಹಾಗೂ ಅವರ ಸ್ನೇಹಿತರ ತಂಡಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿ ನಾಗರಾಜ್‌ರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ.
ಜೊತೆಗೆ ನಮ್ಮ ನಿರಾಶ್ರಿತರಿಗೆ ಆಸರೆಯಾಗುತ್ತಿರುವ ಎಲ್ಲ ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳಿಗೂ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲನ್ನವರ, ಮಾಜಿ ತಾಪಂ ಸದಸ್ಯ ಬಸವಂತ ಕೋಣಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಐ. ನೀಲನ್ನವರ, ಲಕ್ಷ್ಮಣ ಚಂದರಗಿ, ಸುಭಾಸ ಜಂಬಗಿ, ಶ್ರೀಧರ ದಯನ್ನವರ, ರಾಯಪ್ಪ ಬಳೋಲದಾರ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ