*ಅಯೋಧ್ಯೆ ರಾಮ ಮಂದಿರ: ಮೈಸೂರಿನ ಶಿಲ್ಪಿ ಕೆತ್ತಿದ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆ*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 22ರಂದು ಐತಿಹಾಸಿಕ, ಅದ್ಭುತ ಕ್ಷಣಕ್ಕೆ ಇಡೀ ದೇಶವೇ ಸಾಕ್ಷಿಯಾಗಲಿದೆ.
ಅಯೋಧ್ಯೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎಂದು ತಿಳಿದುಬಂದಿದೆ.
ರಾಮಲಲ್ಲಾ ವಿಗ್ರಹಕ್ಕೆ ಹೆಚ್.ಡಿ.ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆಯ ಕಲ್ಲನ್ನು ಬಳಕೆ ಮಾಡಲಾಗಿದೆ. ಕರ್ನಾಟಕ ಹಾಗೂ ರಾಜಸ್ಥಾನದಿಂದ ತಂದ ಶಿಲೆಯಿಂದ ಒಟ್ಟು ಮೂರು ಶಿಲ್ಪಿಗಳಿಂದ ಮೂರು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲಾಗಿತ್ತು. ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಗಣೇಶ್ ಭಟ್ ಹಾಗೂ ರಾಜಸ್ಥಾನದ ಶಿಲ್ಪಿಯೊಬ್ಬರಿಂದ ಪ್ರತ್ಯೇಕ ಮೂರ್ತಿಗಳನ್ನು ಕೆತ್ತಲಾಗಿತ್ತು. ಈ ಮೂರು ಬಾಲರಾಮನ ಮೂರ್ತಿಗಳಲ್ಲಿ ಇದೀಗ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯನ್ನು ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ.
ಅರುಣ್ ಯೋಗಿರಾಜ್ 5 ವರ್ಷ ವಯಸ್ಸಿನ ಬಾಲರಾಮನ ಮೂರ್ತಿಯನ್ನು ಕೆತ್ತಿದ್ದು, ರಾಮನ ವಿಗ್ರಹದಲ್ಲಿ ದೈವತ್ವದ ಕಳೆ ಎದ್ದು ಕಾಣುವಂತಿದೆ. ಈ ಹಿನ್ನೆಲೆಯಲ್ಲಿ ಈ ಮೂರ್ತಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ