Kannada NewsKarnataka NewsLatestPolitics

*ಬರ ಪರಿಹಾರಕ್ಕೆ ಆಧಾರ್ ಜೋಡಣೆ ಕುಂಟು ನೆಪ: ರೈತರ ಖಾತೆಗೆ ತಕ್ಷಣ 2000 ಹಣ ಹಾಕಿ: ಬಸವರಾಜ ಬೊಮ್ಮಾಯಿ*

ಹರಿಪ್ರಸಾದ್ ಹೇಳಿಕೆ; ಗುಪ್ತಚರ ಇಲಾಖೆಯ ವೈಫಲ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಬರ ಪರಿಹಾರ ನೀಡಲು ಆಧಾರ್ ಜೋಡಣೆಯ ಕುಂಟು ನೆಪ ಹೇಳುತ್ತಿದೆ. ಈಗಾಗಲೇ ಫ್ರುಟ್ ಸಾಫ್ಟವೇರ್ ನಲ್ಲಿ 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದು, ಮುಖ್ಯಮಂತ್ರಿಗಳು ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ಖಾತೆಗಳಿಗೆ 2000. ರೂ. ಹಣ ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೆಕ ತಾಲುಕುಗಳು ಬರ ಅಂತ ಘೊಷಣೆ ಆಗಿದೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿ ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಯಾವುದೇ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಈಗ ಆಧಾರ ಜೋಡಣೆಯ ನೆಪ ಹೇಳಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆ ಕಡೆಮೆಯಾಗಲಿದೆ ಅಂತ ಕೃಷಿ ಇಲಾಖೆ ವರದಿ ಹೇಳುತ್ತಿದೆ. ಹೀಗಿದ್ದಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ. ಹಿಂದೆ ಎಲ್ಲ ಸರ್ಕಾರಗಳು ಕೇಂದ್ರದ ದಾರಿ ಕಾಯದೇ ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸುವ‌ ಕೆಲಸ ಮಾಡುತ್ತಿದ್ದವು. ಬೆಳಗಾವಿ ಅಸೆಂಬ್ಲಿ ಅಧಿವೇಶನಕ್ಕೆ ಮುಂಚೆ ರೈತರ ಬ್ಯಾಂಕ್ ಖಾತೆಗೆ ಪ್ರತಿ ಹೆಕ್ಟೇರ್ ಗೆ 2000 ರೂ. ಹಾಕುವುದಾಗಿ ಹೇಳಿದ್ದೀರಿ, ಈಗ ಆಧಾರ ಲಿಂಕ್ ಮಾಡುವುದಾಗಿ ಹೇಳುತ್ತಿದ್ದೀರಿ. ಈಗಾಗಲೇ ಫ್ರುಟ್ಸ್ ಸಾಪ್ಟ್ ವೇರ್ ನಲ್ಲಿ ಸುಮಾರು 69 ಲಕ್ಷ ರೈತರ ಆಧಾರ ಲಿಂಕ್ ಆಗಿದೆ. ಅದನ್ನು ಮರೆ ಮಾಚಿ ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ಹೇಳುತ್ತಿದ್ದೀರಿ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ‌ ತಕ್ಷಣ 2000 ರೂ. ರೈತರ ಖಾತೆಗೆ ಜಮಾ ಮಾಡಬೇಕು. ರೈತರು ತಿರುಗಿ ಬಿದ್ದರೆ ಯಾವ ಸರ್ಕಾರವೂ ನಡೆಯುವುದು ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.


ಗುಪ್ತಚರ ಇಲಾಖೆ ವೈಫಲ್ಯ
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕರಸೇವಕರ ಕುರಿತು ನೀಡಿರುವ ಹೇಳಿಕೆಯಂತೆ ತಮ್ಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿರುವುದು ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿದೆ.
ಒಬ್ಬ ಎಂ ಎಲ್ ಸಿ ಗೆ ಇರುವ ಮಾಹಿತಿ ಗೃಹ ಇಲಾಖೆಗೆ ಮಾಹಿತಿ ಇಲ್ಲ ಎಂದರೆ ಇಂಟ್ಲಿಜೆನ್ಸ್ ವಿಫಲವಾಗಿದೆ.‌


ಗೃಹ ಸಚಿವರು ಅಗತ್ಯ ಬಿದ್ದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹರಿಪ್ರಸಾದ್ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದು, ಬೇರೆಯವರು ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರ ಅವಧಿಯಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿತ್ರಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಅಕ್ರಮ ಸಾರಾಯಿ ದಂಧೆ, ಇಸ್ಪೀಟ್ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ರಿವೆ. ಈ ವರ್ಷ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಅಪರಾಧ ಪತ್ತೆಹಚ್ಚುವ ಕಾರ್ಯ ಕಡಿಮೆಯಾಗಿದೆ ಎಂಬ ವರದಿ‌ ಇದೆ. ಅಂದರೆ, ಗೃಹ ಇಲಾಖೆ ಅಪರಾಧ ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ವಿಫಲವಾಗಿದೆ. ಗೃಹ ಇಲಾಖೆ ಮುಖ್ಯಸ್ಥರಾಗಿ ಪರಮೇಶ್ವರ್ ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಯಾವುದೇ ಅನುಮಾನದ ಮಾತುಗಳಿಗೆ ಉತ್ತರ ಕೊಡುವುದಿಲ್ಲ ಅಂತ ಹೇಳಿದ್ದಾರೆ. ಹರಿಪ್ರಸಾದ್ ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಅನ್ನುವುದನ್ನು ಕರೆದು ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.


ಇನ್ನು ಕರಸೇವಕ ಶ್ರೀಕಾಂತ ಪೂಜಾರಿ ವಿರುದ್ದ ಎಷ್ಟೇ ಪ್ರಕರಣ ಇರಲಿ ಅವು‌ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿವೆ. ಆದರೆ, ಈ ಸಂದರ್ಭದಲ್ಲಿ 32 ವರ್ಷಗಳ ಹಿಂದಿನ ಕರಸೇವೆಯ ಆರೋಪದ ಪ್ರಕರಣದಲ್ಲಿ ಬಂಧಿಸುವ ಉದ್ದೇಶವೇನಿತ್ತು. ಹುಬ್ಬಳ್ಳಿಯಲ್ಲಿ ಗಡಿ ಪಾರ್ ಆದವರು ಇದ್ದಾರೆ. ಇವರೊಬ್ಬರ ಮೇಲೆ ಏಕೆ ಈ ಸಂದರ್ಭದಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.


ಆರೋಪಿಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಹರಿಪ್ರಸಾದ್ ಮೇಲೆ ನಂಬಿಕೆ ಇಲ್ಲ. ಆದರೆ, ವಿತಂಡ ವಾದ ಮಾಡುವುದೇ ಅವರ ಸ್ವಭಾವ‌ ಎಂದರು.


ಕಾಂಗ್ರೆಸ್ ನಿಂದ ರಾಜಕಾರಣ
ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಹಿಂದೂ ಮುಸ್ಲೀಂಮರು ಸೇರಿದಂತೆ ಯಾವುದೇ ಸಾಮಾನ್ಯ ಜನರು ರಾಜಕಾರಣ ಮಾಡುತ್ತಿಲ್ಲ.‌ ತಲೆ‌ಕೆಡಿಸಿಕೊಂಡಿಲ್ಲ. ಕಾಂಗ್ರೆಸ್ ‌ನವರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಕೇವಲ ಪ್ರಧಾನಿ ಮೋದಿ ಒಬ್ಬರೇ ಹೊಗುತ್ತಿಲ್ಲ. ರಾಮ ಮಂದಿರಕ್ಕಾಗಿ ಯಾರು ಸೇವೆ, ಸಹಾಯ ಮಾಡಿದ್ದಾರೊ ಅವರನ್ನು ರಾಮ ಮಂದಿರ ಸಮಿತಿಯವರು ಕರೆದಿದ್ದಾರೆ. ಕಾಂಗ್ರೆಸ್ ನವರು ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.


ಗುಜರಾತಿನ ಸೋಮನಾಥ ಮಂದಿರ ಉದ್ಘಾಟನೆಗೆ ಅಂತಿನ ಪ್ರಧಾನಿ ಜವಾಹರಲಾಲ್ ನೆಹರು ಭಾಗವಹಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಮನಾಥ ಮಂದಿರ ಅತ್ಯಂತ ಅದ್ಬುತ ಮಂದಿರ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಹೋಗಿರಲಿಲ್ಲ. ಹಾಗಾಗಿ ಗೃಹ ಸಚಿವರಾಗಿದ್ದ ವಲ್ಲಭಬಾಯಿ ಪಟೇಲರು ಹೋಗಿದ್ದರು. ಈಗಿನ ಪ್ರಧಾನಿಗಳು ಆಸ್ತಿಕರಿದ್ದಾರೆ. ರಾಮನ ಭಕ್ತರಿದ್ದಾರೆ‌. ಹೀಗಾಗಿ ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button