ಜ.21 ರಂದು ರಾಜ್ಯದ ಕಾರ್ಯಕರ್ತರ ಸಮಾವೇಶ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:“ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶ, ನಮ್ಮ ಪಕ್ಷ ಕರ್ನಾಟಕದ ಮೇಲೆ ಬಹಳ ವಿಶ್ವಾಸ ಇಟ್ಟುಕೊಂಡಿದ್ದು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ತಿ ಳಿಸಿದರು.
ಇಂದಿರಾಭವನದಲ್ಲಿ ನಡೆದ ಪಕ್ಷದ ಸಭೆ, ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಜನರಿಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನಮ್ಮ ಕಾರ್ಯಕರ್ತರು ಮತ್ತೆ ಜನರ ಬಳಿಗೆ ಹೋಗಲು ಆತ್ಮವಿಶ್ವಾಸ ತುಂಬಿದ್ದೇವೆ. ಈ ಹಿಂದೆ ದೇಶದಲ್ಲಿ ಯಾವ ಸರ್ಕಾರವೂ ಕೊಟ್ಟ ಮಾತನ್ನು ಏಳೇ ತಿಂಗಳಲ್ಲಿ ಪೂರ್ಣಗೊಳಿಸಿರಲಿಲ್ಲ. ನಾಲ್ಕು ಗ್ಯಾರಂಟಿ ಜನರನ್ನು ತಲುಪಿದ್ದು, ಐದನೇ ಗ್ಯಾರಂಟಿ ಯುವನಿಧಿಗೆ ಇದೇ 12 ರಂದು ವಿವೇಕಾನಂದರ ಜಯಂತಿ ದಿನ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದೇವೆ.
ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಹೊಸ ಸ್ವರೂಪದ ಕಾರ್ಯಕ್ರಮ ರೂಪಿಸಿದ್ದೇವೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಿ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ರಾಜ್ಯದ ಶೇ.80 ರಷ್ಟು ಕುಟುಂಬಗಳಿಗೆ ಈ ಯೋಜನೆ ತಲುಪಿದ್ದು, 3 ಕೋಟಿಗೂ ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ ಎಂದರು.
ಇದೇ 21 ರಂದು ರಾಜ್ಯದ ಕಾರ್ಯಕರ್ತರ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಶಾಸಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದವರು, ಸೋತವರು, ಬೂತ್ ಮಟ್ಟದ ಪ್ರತಿನಿಧಿಗಳನ್ನು ಸೇರಿಸಿ ಈ ಸಮಾವೇಶ ಮಾಡಲು ತಿಳಿಸಿದ್ದು, ಕಾರ್ಯಕ್ರಮ ಸ್ಥಳದ ಬಗ್ಗೆ ಎರಡು ದಿನಗಳಲ್ಲಿ ತಿಳಿಸುತ್ತೇವೆ.
ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಪಕ್ಷ ಶಾಸಕರು ಹಾಗೂ ಸಚಿವರಿಗೆ ಕೆಲವು ಸೂಚನೆ ನೀಡಿದ್ದೇವೆ. ಈ ತಿಂಗಳ ಒಳಗಾಗಿ ಆಶ್ರಯ ಸಮಿತಿ, ಆರಾಧನಾ ಸಮಿತಿ, ಇಂಧನ ಇಲಾಖೆ ಉಪಸಮಿತಿ, ನೀರಾವರಿ ಇಲಾಖೆ ಕೆರೆಗಳ ಸಮಿತಿ, ಕೆಡಿಪಿ ಸೇರಿದಂತೆ ಎಲ್ಲ ಸಮಿತಿಗಳಿಗೆ ನಾಮನಿರ್ದೇಶನ ಮಾಡಬೇಕು. ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ತಿಂಗಳ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಸೂಚಿಸಿದರು.
ಸಂಸತ್ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಓರ್ವ ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ. ಅವರ ಕೈಕೆಳಗೆ ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನಿಯೋಜಿಸಿದ್ದೇವೆ. ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ, ಬಿಎಲ್ಎಗಳ ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಸಂಘಟನೆಗಳು, ಬ್ಲಾಕ್ ಮಟ್ಟದಲ್ಲಿ ಬದಲಾವಣೆ ಮಾಡಿ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇವೆ.
ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಲು ತೀರ್ಮಾನಿಲಾಗಿದೆ. ಫೆ.12 ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ತಿಂಗಳ 12ರ ಒಳಗಾಗಿ ಈ ಸಮಾವೇಶಗಳನ್ನು ನಡೆಸಬೇಕಿದೆ. ಜಿಲ್ಲಾ ಮಂತ್ರಿಗಳು ಈ ಸಮಾವೇಶಗಳ ಜವಾಬ್ದಾರಿ ತೆಗೆದುಕೊಳ್ಳಬೇಕು.
ಮನೆ, ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ಇನ್ನು ಕಾರ್ಯಕರ್ತರಿಗೆ ಶಕ್ತಿ ತುಂಬಲು ನಿಗಮ ಮಂಡಳಿಗಳ ನೇಮಕದ ಮೊದಲ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ. ಈ ಹುದ್ದೆಗಳ ಕಾಲವಧಿ 2 ವರ್ಷ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಈ ಕಾಲಮಿತಿ ಮಾಡಿದ್ದೇವೆ.”
ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಎಐಸಿಸಿ ನಾಯಕರು ನಮಗೆ ಅಜೆಂಡಾ ನಿಗದಿ ಮಾಡಿದ್ದಾರೆ. 28 ಕ್ಷೇತ್ರಗಳಿಗೆ ಮಂತ್ರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದು, ನಾಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರುಗಳ ಸಭೆ ಕರೆಯಲಾಗಿದೆ. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಾರೆ.
ನಮ್ಮ ಬಳಿ ಹೆಚ್ಚಿನ ಕಾಲಾವಕಾಶವಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಬೇಕಿದೆ. ಕಳೆದ ಚುನಾವಣೆಯಲ್ಲಿ ತೋರಿದ ಒಗ್ಗಟ್ಟನ್ನು ಈ ಬಾರಿಯ ಚುನಾವಣೆಯಲ್ಲಿ ಇನ್ನೂ ದೊಡ್ಡದಾಗಿ ಪ್ರದರ್ಶಿಸಬೇಕಿದೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಬಗ್ಗೆ ಗಮನಹರಿಸಬೇಕು. ಪಕ್ಷ ನಮ್ಮ ಮೇಲೆ ಭರವಸೆ ಇಟ್ಟುಕೊಂಡಿದ್ದು, ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನನಗೆ ಬಂದಿರುವ ವರದಿಗಳು ತೃಪ್ತಿಕರವಾಗಿಲ್ಲ. ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಗಳು, ನಾನು ಹಾಗೂ ಎಐಸಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ನಾವು ಚರ್ಚೆ ಮಾಡಿದ್ದು, ಅದನ್ನು ಕಾರ್ಯಕರ್ತರ ಕೈಯಲ್ಲಿ ಹಂಚಿಕೆ ಮಾಡಿಸಲು ತೀರ್ಮಾನಿಸಿದ್ದೇವೆ.
ಕಾರ್ಯಕರ್ತರ ಬಲವರ್ಧನೆಗಾಗಿ ಕಳೆದ ಒಂದು ವಾರದಿಂದ ಎಐಸಿಸಿ ನಾಯಕರ ಜತೆ ಚರ್ಚೆ ಮಾಡಿ ಕೆಲವು ನಿರ್ಧಾರಗಳನ್ನು ಮಾಡಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಕುಟುಂಬದ ಅಭಿವೃದ್ಧಿಗೆ ಪೂರಕವಾಗಿರುವ ವಿಚಾರವನ್ನು ನೀವು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ