ಪ್ರಗತಿವಾಹಿನಿ ಸುದ್ದಿ: ಮಹಾಮಾರಿ ಕೊವಿಡ್ ಮೊದಲ ಹಾಗೂ ಎರಡನೇ ಹಂತದ ಬಳಿಕ ಜನರಲ್ಲಿ ಕಾಡುತ್ತಿರುವ ಸಮಸ್ಯೆಗಳು, ಹೊಸ ರೀತಿಯ ರೋಗಗಳು ಒಂದೆರಡಲ್ಲ. ಅದರಲ್ಲಿಯೂ ಪುಟ್ಟ ಮಕ್ಕಳು ವಿವಿಧ ರೀತಿಯ ಸಮಸ್ಯೆ, ರೋಗಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ಮಕ್ಕಳು ಉತ್ತಮ ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ.
ಡೆಂಘಿ, ಮಲೇರಿಯಾ, ಅಡಿನೋ ವೈರಸ್, ನ್ಯೂಮೋನಿಯಾ, ಅಪೌಷ್ಠಿಕತೆ, ಉಸಿರಾಟದ ಸಮಸ್ಯೆಯಿಂದಾಗಿ ಬಳಲುತ್ತಿರುವ ಮಕ್ಕಳು ತೀವ್ರ ಅನಾರೋಗ್ಯದಿಂದಾಗಿ ಸಾವನ್ನಪ್ಪುತ್ತಿರುವ ಪ್ರಕರಣ ಈ ಬಾರಿ ತೀವ್ರಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಂತಹ ವ್ಯವಸ್ಥಿತ ಆಸ್ಪತ್ರೆ ಇಲ್ಲದಿರುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಅಲ್ಲಿನ ಆಸ್ಪತ್ರೆಗಳಿಗೆ ತೋರಿಸಿ ಕೊನೇ ಗಳಿಗೆಯಲ್ಲಿ ದೂರದ ಬೆಂಗಳೂರು ಇಂದಿರಾಗಾಂಧಿ ಆಸ್ಪತ್ರೆಗೆ ಬರುತ್ತಾರೆ. ಕೊನೇ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವುದರಿಂದ ಅನಾರೋಗ್ಯಕ್ಕೀಡಾದ ಮಕ್ಕಳ ಜೀವ ಉಳಿಸುವುದು ಕಷ್ಟಸಾಧ್ಯ.
ವರದಿಯೊಂದರ ಪ್ರಕಾರ ಕಳೆದ 9 ತಿಂಗಳಲ್ಲಿ 380 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇಂದಿರಾಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಸಂಜಯ್ ತಿಳಿಸಿದ್ದಾರೆ.
ಪ್ರತಿ ತಿಂಗಳು 40-50 ಪುಟಾಣಿ ಮಕ್ಕಳು ಮೃತಪಟ್ಟಿದ್ದಾರೆ. ನಗರದ ಬೇ ಬೇರೆ ಆಸ್ಪತ್ರೆಗಳಲ್ಲಿ ಹಾಗೂ ಬೇರೆ ಊರುಗಳಲ್ಲಿನ ಆಸ್ಪತ್ರೆಗಳು ಮಗು ಗಂಭೀರ ಹಂತ ತಲುಪಿದ ಬಳಿಕ ಇಂದಿರಾಗಾಂಧಿ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ. ಈ ಹಂತದಲ್ಲಿ ಮಕ್ಕಳಿಗೆ ಬೇರೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿರುವುದಿಲ್ಲ. ಕೊನೇ ಹಂತದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಕರೆತರುವುದರಿಂದ ಅಂತಹ ಮಕ್ಕಳನ್ನು ಉಳಿಸುವುದು ಸಾಧ್ಯವಾಗುವುದಿಲ್ಲ.
ಇಂದಿರಾ ಗಾಂಧಿ ಆಸ್ಪತ್ರೆಗೆ ಪ್ರತಿ ತಿಂಗಳು 1400-1500 ಮಕ್ಕಳು ದಾಖಲಾಗುತ್ತಾರೆ. ಈ ಬಾರಿ ಡೆಂಗ್ಯೂ, ನ್ಯುಮೋನಿಯಾ ಕೂಡ ಹೆಚ್ಚಾಗಿರುವುದರಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಇಂದಿರಾ ಗಾಂಧಿ ಆಸ್ಪತ್ರೆ ಏಕೈಕ ಮಕ್ಕಳ ಆಸ್ಪತ್ರೆಯಾಗಿದ್ದು, ಅನಾರೋಗ್ಯಕ್ಕೀಡಾದ ಮಕ್ಕಳಿಗೆ ಗೋಲ್ಡನ್ ಟೈಮ್ ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವು ಸಂಭವಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ