*ಬೆಳಗಾವಿಯಲ್ಲಿ ಮಹಾರಾಷ್ಟ್ರದ ವಿಮೆ ಯೋಜನೆ ಜಾರಿಗೆ ಜಿಲ್ಲಾಡಳಿತದಿಂದ ಕಡಿವಾಣ; MES ನಾಲ್ಕು ಕೇಂದ್ರಗಳಿಗೆ ಬೀಗ*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಮಹಾರಾಷ್ಟ್ರದ ವಿಮೆ ಯೋಜನೆ ಜಾರಿಗೆ ಬೆಳಗಾವಿ ಜಿಲ್ಲಾಡಳಿತದ ಲಗಾಮು ಹಾಗಿದ್ದು, ನಾಲ್ಕು ಎಮ್ ಈ ಎಸ್ ಕೇಂದ್ರಗಳಿಗೆ ಬೀಗ ಜಡಿದಿರುವ ಬೆಳಗಾವಿ ಜಿಲ್ಲಾಡಳಿತದ ಕ್ರಮ ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚದರಂಗಿ ತಿಳಿಸಿದ್ದಾರೆ.
ಕರ್ನಾಟಕದ ಬೆಳಗಾವಿ, ಕಾರವಾರ, ಕಲಬುರ್ಗಿ ಹಾಗೂ ಬೀದರ ಜಿಲ್ಲೆಗಳ 865 ಹಳ್ಳಿ ಪಟ್ಟಣಗಳ ಮರಾಠಿ ಭಾಷಿಕರಿಗಾಗಿ ತನ್ನ ಮಹಾತ್ಮಾ ಫುಲೆ ಜನಾರೋಗ್ಯ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದ ಮಹಾರಾಷ್ಟ್ರದ ಯೋಜನೆಗೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹಾಕಿದೆ.
“ನಾನು ಮರಾಠಿ ಭಾಷಿಕ”ಎಂದು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿಫಾರಸು ಪತ್ರ ಪಡೆಯುವ ಮರಾಠಿ ಭಾಷಿಕರಿಗೆ ಮಾತ್ರ ಈ ಯೋಜನೆಯು ಸೀಮಿತವಾಗಿತ್ತು.2023 ರ ಮಾರ್ಚ 2 ರಂದು ಮಹಾರಾಷ್ಟ್ರದ ಏಕನಾಥ ಶಿಂದೆ ಸರಕಾರ ತೀರ್ಮಾನ ಕೈಕೊಂಡಿತ್ತಲ್ಲದೇ ಎಪ್ರಿಲ್ ನಲ್ಲಿ ಅಧಿಕೃತ ಆದೇಶ ಹೊರಡಿಸಿತ್ತು. ಒಂಭತ್ತು ತಿಂಗಳ ನಂತರ ಇದೇ ಜನೇವರಿಯಲ್ಲಿ ಬೆಳಗಾವಿಯಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನು ಆರಂಭಿಸಿದ್ದ ಎಮ್ ಇ ಎಸ್ ಘಟಕವು ಶಿಫಾರಸು ಪತ್ರಗಳನ್ನು ನೀಡಲು ಆರಂಭಿಸಿತ್ತು.
ಕರ್ನಾಟಕದ ಹಿತಾಸಕ್ತಿಗೆ ಮಾರಕವಾಗುವ ಯೋಜನೆ ಜಾರಿಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ತೀವ್ರವಾಗಿ ವಿರೋಧಿಸಿ ಕಳೆದ ಗುರುವಾರ ಜನೇವರಿ 11 ರಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿನ್ನೆ
ಶನಿವಾರ ನಾಲ್ಕು ಸೇವಾ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಕ್ರಮವನ್ನು ರಾಜ್ಯದಾದ್ಯಂತದ ಕನ್ನಡ ಸಂಘಟನೆಗಳು ಸ್ವಾಗತಿಸಿ ಅಭಿನಂದಿಸಿವೆ. ಅಲ್ಲದೇ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲರೂ ಸಹ ಜಿಲ್ಲಾಧಿಕಾರಿಗಳ ಕ್ರಮವನ್ನು ಶ್ಲಾಘಿಸಿದ್ದು ಶೀಘ್ರವೇ ಬೆಳಗಾವಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಭೆ ನಡೆಸುವದಾಗಿ ಕ್ರಿಯಾ ಸಮಿತಿಯ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ