Kannada NewsKarnataka NewsLatestPolitics

*ಭೂ ಒಳವ್ಯವಹಾರ ಸಚಿವ ಪ್ರಲ್ಹಾದ್‌ ಜೋಷಿಗೆ ತಿಳಿದಿಲ್ಲವೇ?*

*ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ನಾಯಕ ರಜತ್‌ ಉಳ್ಳಾಗಡ್ಡಿ ಮಠ ಆಗ್ರಹ*

*ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ :* ಹುಬ್ಬಳ್ಳಿಯ ಪ್ರತಿಷ್ಠಿತ ಎಂಟಿಎಸ್‌ ಕಾಲೋನಿಯ ನೂರಾರು ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಆಸ್ತಿ ಬಿಡಿಗಾಸಿಗೆ ಪರಭಾರೆ ಆಗುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಅನುಮಾನದ ನಡೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆ ಆಗಬೇಕೆಂದು ಎಂದು ರಾಜ್ಯ ಕಾಂಗ್ರೆಸ್‌ ಯುವ ನಾಯಕ ರಜತ್‌ ಉಳ್ಳಾಗಡ್ಡಿ ಮಠ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಎಂಟಿಎಸ್‌ ಕಾಲೋನಿಯಲ್ಲಿ ರೈಲ್ವೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 13 ಎಕರೆ ಜಾಗವಿದೆ. ಇಲ್ಲಿ ರೈಲ್ವೆ ಸಿಬ್ಬಂದಿಯ ವಸತಿಗೃಹ ಮತ್ತಿತರ ಕಟ್ಟಡಗಳಿವೆ. ಈ ಭೂಮಿಗೆ ಈಗ ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಇದೆ. ಇಲ್ಲಿ ಪ್ರತಿ ಚದರ ಮೀಟರ್‌ ಗೆ 25 ಸಾವಿರ ರೂಪಾಯಿಗಿಂತಲೂ ಅಧಿಕ ಮೌಲ್ಯವಿದೆ. ಆದರೆ, ಈ ಜಾಗವನ್ನು ಅತ್ಯಂತ  ಕಡಿಮೆ ದರಕ್ಕೆ ಬಿಲ್ಡರ್‌ ಗಳಿಗೆ 99 ವರ್ಷ ಲೀಸ್‌ ಕೊಡುತ್ತಿರುವುದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತೀಯ ರೈಲ್ವೆ ಅಭಿವೃದ್ಧಿ ಪ್ರಾಧಿಕಾರದ ಈ 13 ಎಕರೆ ಜಾಗವು ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ. ಆದರೆ, ಈ ಭೂಮಿಯನ್ನು ಕೇವಲ 83 ಕೋಟಿ ರೂಪಾಯಿಗಳಿಗೆ ರಿಯಲ್‌ ಎಸ್ಟೇಟ್‌ ಬಿಲ್ಡರ್‌ ಗಳಿಗೆ ಹರಾಜು ಮಾಡಲು ಮುಂದಾಗಿರುವುದು ಹುಬ್ಬಳ್ಳಿಯ ಜನರಲ್ಲಿ ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಅಷ್ಟೇ ಅಲ್ಲ; ಹುಬ್ಬಳ್ಳಿಯಲ್ಲೇ ನೈಋತ್ಯ ವಲಯದ ಕೇಂದ್ರ ಕಚೇರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಇನ್ನೂ ಇಲಾಖೆಗೆಯೇ ನಾನಾ ರೀತಿಗೆ ಭೂಮಿಯ ಅವಶ್ಯಕತೆಯೂ ಇದೆ. ಆದರೂ, 99 ವರ್ಷಗಳಿಗೆ ಈ ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್‌ ಕುಳಗಳಿಗೆ ಒಪ್ಪಿಸುತ್ತಿರುವುದು ಕಾರಣ ತಿಳಿಯದು..!? ? ಇಲ್ಲಿರುವ ಕಾಣದ ಕೈಗಳು, ಕುಳಗಳು ಕೂಡಲೇ ಮುನ್ನಲೆಗೆ ಬರಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ. 

ಮುಖ್ಯವಾಗಿ, ಲೋಕಸಭಾ ಚುನಾವಣೆ ಎದುರಾಗುತ್ತಿರುವ ವೇಳೆಯಲ್ಲಿ ತರಾತುರಿಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ಖಾಸಗಿಯವರ ಪಾಲಾಗುತ್ತಿರುವುದಕ್ಕೆ ಕಾರಣವೇನು? ರೈಲ್ವೆ ಇಲಾಖೆಯೇನು ನಷ್ಟದಲ್ಲಿ ಇದೆಯೇ..!? ಈ ಭೂಮಿಯ  ಹಿಂದಿರುವ ಒಳ ವ್ಯವಹಾರವಾದರೂ ಏನು? ಇಲ್ಲಿ ಭಾರೀ ಪ್ರಭಾವಿಗಳ ಕೈವಾಡ ಇದೆ? ರಿಯಲ್‌ ಎಸ್ಟೇಟ್‌ ಕುಳಗಳಿಗೂ ಅಧಿಕಾರಿಗಳಿಗೂ ಬಹಳ ನಂಟಿದೆಯೇ? ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಕ್ಷೇತ್ರದ ಸಂಸದರು ಹಾಗೂ ಸಚಿವರು ಜಾಣಕುರುಡರಂತೆ ಇರಲು ಕಾರಣವಾದರೂ ಏನು? ಎನ್ನುವುದು ಸಾರ್ವಜನಿಕವಾಗಿ ಬಹಿರಂಗವಾಗಬೇಕು ಎಂದು  ರಜತ್‌ ಉಳ್ಳಾಗಡ್ಡಿ ಮಠ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button