ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಅತಿ ಶೀಘ್ರದಲ್ಲಿಯೆ ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಪುನಾರಂಭವಾಗಲಿದೆ ಎಂದು ಅದರ ಸಂಪಾದಕಿಯಾಗಿ ಕೆಲಸ ನಿರ್ವಹಿಸಲಿರುವ ಭಾವನಾ ಬೆಳಗೆರೆ ಹೇಳಿದರು.
ಬೆಂಗಳೂರಿನ “ಹಾಯ್ ಬೆಂಗಳೂರು” ಪತ್ರಿಕೆ ಕಚೇರಿಯಲ್ಲಿ ಶನಿವಾರ ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ ರವಿ ಬೆಳೆಗೆರೆ ಅವರ ಎರಡು ಪುಸ್ತಕಗಳಾದ ರಜನೀಶನ ಹುಡುಗಿಯರು, ಅರ್ತಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದರು.
ಅನೇಕ ದಿನಗಳಿಂದ ಓದುಗರ ಒತ್ತಡವಿದೆ. ಹಾಯ್ ಬೆಂಗಳೂರು ಮತ್ತು ಓ ಮನಸೆ ಎರಡು ಪತ್ರಿಕೆಗಳ ಆರಂಭಕ್ಕೆ ರಾಜ್ಯದ 33 ಜಿಲ್ಲೆಗಳಿಂದಲೂ ಒತ್ತಡವಿದೆ. ಕಾರಣ ಈಗ ಬೆಳಗೆರೆ ಕುಟುಂಬ ಮತ್ತು ಪತ್ರಿಕೆಯ ವರದಿಗಾರರು ಸಿದ್ದರಾಗಿದ್ದು, ಶೀಘ್ರದಲ್ಲಿ ಪತ್ರಿಕೆ ಆರಂಭಿಸಿ ಓದುಗರ ಕೈಗೆ ನೀಡಲಾಗುವುದೆಂದು ಭಾವನಾ ಬೆಳಗೆರೆ ಹೇಳಿದರು.
ಲಲಿತಾ ರವಿ ಬೆಳಗೆರೆ ಅವರು ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಪತ್ರಕರ್ತೆ ಭಾವನಾ, ಚೇತನಾ, ನಟ ಶ್ರೀನಗರ ಕಿಟ್ಟಿ, ಉಮೇಶ ಭಟ್, ವಿದ್ಯಾ ಭಟ್ ಅವರಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ಎರಡು ಪುಸ್ತಕಗಳ ಲೋಕಾರ್ಪಣೆ ನಡೆದು ಪುಸ್ತಕಗಳ ಬಗ್ಗೆ ಹಾಗೂ ಬರಹಗಾರ ರವಿ ಬೆಳಗೆರೆ ಅವರ ಬಗ್ಗೆ ಭಾವನಾ ಬೆಳಗೆರೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಕುಮಾರಿ ಅವರು, ರವಿ ಬೆಳಗೆರೆ ಅವರ ಅಕ್ಷರ ಲೋಕದ ನಂಟು, ಅವರ ಬರಹದ ಬಗ್ಗೆ ವಿವರಿಸಿದರು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಹಾಯ್ ಬೆಂಗಳೂರು ಪತ್ರಿಕೆ ಓದುಗರು ಮಾತನಾಡಿ, ಪತ್ರಿಕೆ ಆರಂಭಿಸಬೇಕೆಂದು ಒತ್ತಾಯದ ಮನವಿ ಮಾಡಿದರು. ಕರ್ಣ ರವಿ ಬೆಳಗೆರೆ ಇತರರು ವೇದಿಕೆಯಲ್ಲಿ ಇದ್ದರು. ರವಿ ಬೆಳಗೆರೆ, ಅಭಿಮಾನಿಗಳು, ಓದುಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ಹಿರಿಯ ಪತ್ರಕರ್ತರಾದ ರವಿ ಕುಲಕರ್ಣಿ, ಸತೀಶ ಬಿಲ್ಲಾಡಿ, ಕಾಂತರಾಜ್ ಅರಸ್, ಶ್ರೀನಿವಾಸ, ಶರಣು ಗೊಬ್ಬುರ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ