Kannada NewsKarnataka News

ನಗರದ ತ್ಯಾಜ್ಯಕ್ಕೆ ಹಳ್ಳಿಗಳು ಕಸದ ತೊಟ್ಟಿ

ನಗರದ ತ್ಯಾಜ್ಯಕ್ಕೆ ಹಳ್ಳಿಗಳು ಕಸದ ತೊಟ್ಟಿ

ಪ್ರಗತಿವಾಹಿನಿ ಸುದ್ದಿ, ಅಗಸಗಿ:
ಬೆಳಗಾವಿ ತಾಲೂಕಿನ ದೇವಗಿರಿ ಮತ್ತು ಬಂಬರಗೆ ಗ್ರಾಮಗಳ ಸಂಪರ್ಕ ರಸ್ತೆಗಳ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಯವರು ರಾತ್ರಿವೇಳೆ ಬಂದು ಕಸ ತುಂಬಿದ ವಾಹನಗಳನ್ನು  ನಡು ರಸ್ತೆ ಮತ್ತು ಕೆರೆಯಲ್ಲಿ ಖಾಲಿ ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ದೇವಗಿರಿ ಮತ್ತು ಬಂಬರಗೆ ಗ್ರಾಮಸ್ಥರು ದೂರಿದರು.
ಬೆಳಗಾವಿ ಕೃಷಿ ಮಾರುಕಟ್ಟೆಗೆ ಇತ್ತೀಚೆಗೆ ಸ್ಥಳಾಂತರಗೊಂಡಿರುವ ತರಕಾರಿ ಮಾರುಕಟ್ಟೆಯಲ್ಲಿ ದಿನಂಪ್ರತಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ಹೆಚ್ಚಾಗುತ್ತಿದೆ.  ಇದನ್ನು ಸರಿಯಾಗಿ ನಿರ್ವಹಣೆ  ಮಾಡಬೇಕಾಗಿರುವ  ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಸಿಕ್ಕಕಡೆಗಳಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ.
ಅದರಲ್ಲೂ ಮಾರುಕಟ್ಟೆಗೆ ಹತ್ತಿರವಾಗಿರುವ ಈ ಗ್ರಾಮಗಳು ಅವರಿಗೆ ಇನ್ನೂ ಅನುಕೂಲಕರವಾಗಿವೆ. ಹೀಗಾಗಿ ಈ ಹಿಂದೆ ಹಲವು ಬಾರಿ ಈ ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡಿದ್ದರು. ಇದನ್ನು ಕಂಡ ಗ್ರಾಮಸ್ಥರು ಕಸ ವಿಲೇವಾರಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ನಂತರ ಸ್ವಲ್ಪ ದಿನಗಳ ಮಟ್ಟಿಗೆ ನಿಲ್ಲಿಸಿದ್ದ ಗುತ್ತಿಗೆದಾರರು ಈಗ ಮತ್ತೆ  ರಾತ್ರಿ ವೇಳೆ ಬಂದು ಕಸ ತುಂಬಿದ ವಾಹನಗಳನ್ನು ಗಡಿಬಿಡಿಯಲ್ಲಿ ನಡು ರಸ್ತೆಯಲ್ಲಿ ಮತ್ತು ಪಕ್ಕದಲ್ಲಿರುವ ಸಣ್ಣ ಕೆರೆಯಲ್ಲಿ  ಖಾಲಿ ಮಾಡಿ ಹೋಗಿದ್ದಾರೆ.
ಇದರಿಂದಾಗಿ ಕೆರೆಯ ನೀರು ಕಲುಷಿತಗೊಂಡು ದನಕರುಗಳ ಜೀವಕ್ಕೆ ಅಪಾಯ ಎದುರಾದರೆ, ನಮಗೆ ಕೆಟ್ಟ ವಾಸನೆ ಬರುವುದಷ್ಟೇ ಅಲ್ಲದೆ  ಗ್ರಾಮಕ್ಕೆ ಮತ್ತು ಹೊಲಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು  ಗ್ರಾಮಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ  ಗಮನಕ್ಕೆ ತಂದಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಅವರಲ್ಲಿ ವಿನಂತಿಸಿದ್ದೇವೆ. ಇಲ್ಲವಾದಲ್ಲಿ ಎರಡೂ ಗ್ರಾಮಗಳ ಗ್ರಾಮಸ್ಥರು ಸೇರಿ ಹೋರಾಟ ನಡೆಸಲಾಗುವುದು ಎಂದು ದೇವಗಿರಿಯ ಗ್ರಾಂ ಪಂ ಸದಸ್ಯ ಗೌಡಪ್ಪಾ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ದೇವಗಿರಿ ಮತ್ತು ಬಂಬರಗಾ ಗ್ರಾಮದ ಮುಖಂಡರು ಮತ್ತು ರೈತರಾದ ಜೋಮಾ ಅಂಬೇವಾಡಿ,  ರಾಜು ಸಿದ್ದನ್ನವರ, ಜೋಮಾ ಸದಾವರ, ಅರ್ಜುನ ದಾವತಾರ, ಮಾರುತಿ ಪಾಟೀಲ, ಮಂಜು ಅಂಬೇವಾಡಿ, ಮಾಳೇಶ್ವರ ವೀರಾಪೂರ, ಬಸ್ಸು ಕುಂದರಗಿ, ಸಂತೋಷ ದಾವತಾರ, ಬಸ್ಸು ಅಂಬೇವಾಡಿ ಮತ್ತಿತರರು  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button