ಪ್ರಗತಿವಾಹಿನಿ ಸುದ್ದಿ,*ಹೈದರಾಬಾದ್* : ಆರಂಭಿಕ ಹಂತದಿಂದಲೂ ಪಂದ್ಯದಲ್ಲಿ ಹಿಡಿದ ಸಾಧಿಸಿದ ಕನ್ನಡಿಗ ಬಿ.ಸಿ.ರಮೇಶ್ ಮಾರ್ಗದರ್ಶನದ ಪುಣೇರಿ ಪಲ್ಟನ್ ತಂಡ 10ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ನಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿತು. ಕಳೆದ ಬಾರಿ ಫೈನಲ್ನಲ್ಲಿ ಎಡವಿದ್ದ ಪುಣೇರಿ ತಂಡ ಪಿಕೆಎಲ್ನಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ 28-25 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ತಂಡದ ಎದುರು ರೋಚಕ ಜಯ ದಾಖಲಿಸಿತು. ಈ ಮೂಲಕ ಲೀಗ್ನುದ್ದಕ್ಕೂ ಪ್ರಭುತ್ವ ಸಾಧಿಸಿದ್ದ ಪುಣೇರಿ ತಂಡ ಪ್ರಶಸ್ತಿ ಗೆಲುವಿನ ನಗೆ ಬೀರಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಹಣಾಹಣಿಯಲ್ಲಿ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದ ಪುಣೇರಿ ತಂಡ ಮೊದಲಾರ್ಧದಲ್ಲಿ 13-10 ರಿಂದ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದ ಆರಂಭಿಕ ಹಂತದಲ್ಲೇ ಹರಿಯಾಣ ತಂಡವನ್ನು ಆಲೌಟ್ ಖೆಡ್ಡಾಗೆ ಬೀಳಿಸಿದ ಪುಣೇರಿ ಪಲ್ಟಾನ್ ತಂಡ 7 ಅಂಕಗಳ ಮುನ್ನಡೆ ಸಾಧಿಸಿತು. ಬಳಿಕ ಸರಾಸರಿ 7 ಅಂಕಗಳ ಮುನ್ನಡೆ ಕಾಯ್ದುಕೊಂಡ ಪುಣೇರಿ, ಹರಿಯಾಣ ತಂಡ ಯಾವುದೇ ಹಂತದಲ್ಲೂ ತಿರುಗೇಟು ನೀಡಿದಂತೆ ನೋಡಿಕೊಂಡಿತು. ರೈಡರ್ಗಳಾದ ಪಂಕಜ್ ಮೋಹಿತೆ (9 ಅಂಕ), ಮೋಯಿತ್ ಗೊಯತ್ (5 ಅಂಕ) ಹಾಗೂ ನಾಯಕ ಅಸ್ಲಾಂ ಮುಸ್ತಾಫ (4 ಅಂಕ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
* *ಕನ್ನಡಿಗ ಬಿ.ಸಿ.ರಮೇಶ್ಗೆ ೩ನೇ ಪ್ರಶಸ್ತಿ ಗರಿ*
ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್ಗೆ ಪಿಕೆಎಲ್ನಲ್ಲಿ 3ನೇ ಪ್ರಶಸ್ತಿ ಇದಾಗಿದೆ. ಇದಕ್ಕೂ ಮೊದಲು ರಮೇಶ್ ಮಾರ್ಗದರ್ಶನದಲ್ಲಿ 2018ರಲ್ಲಿ ಬೆಂಗಳೂರು ಬುಲ್ಸ್, 2019ರಲ್ಲಿ ಬೆಂಗಾಲ್ ವಾರಿಯರ್ಸ್ ತಂಡಗಳು ಚಾಂಪಿಯನ್ ಆಗಿತ್ತು. ಈ ಮೂಲಕ ಬಿ.ಸಿ.ರಮೇಶ್ ಪಿಕೆಎಲ್ನಲ್ಲಿ ಚಾಂಪಿಯನ್ ಮೇಕರ್ ಎನಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ