*ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಡಿಸಿಎಂ*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಈ ಬಗ್ಗೆ ಬೆಂಗಳೂರುನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಾ. 11ರ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಹೈಕಮಾಂಡ್ ಗೆ ಹೆಸರು ರವಾನೆ ಮಾಡುತ್ತೇವೆ. 11ರಂದು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಟ್ಟಿ ಪ್ರಕಟಿಸುತ್ತಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಜನರಿಗೆ ಹೇಗೆ ಮುಖ ತೋರಿಸುತ್ತಾರೆ?
ಬಿಜೆಪಿಗಿಂತ ಮುನ್ನ ನೀವು ಟಿಕೆಟ್ ಘೋಷಣೆ ಮಾಡಿದ್ದೀರಿ ಎಂದು ಕೇಳಿದಾಗ, “ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರ ಜತೆಗೆ ಈಗ ಅವರು ತಬ್ಬಾಡುತ್ತಿದ್ದಾರೆ. ರಾಜಕಾರಣದಲ್ಲಿ ಯಾರು ಯಾರನ್ನ ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಸಿಎಂ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೇಳಿಸಿದವರ ಜೊತೆ ಈಗ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ. ಇದೆಲ್ಲವನ್ನೂ ನಿರ್ಧರಿಸಲು ಜನರಿಗೆ ಬಿಡುತ್ತೇನೆ” ಎಂದು ತಿಳಿಸಿದರು.
ಸರ್ಕಾರ ಇದ್ದಾಗ ನೀವು ತಬ್ಬಾಡಿದ್ದೀರಿ, ನಿಮಗಿರುವ ನೋವು ಅವರಿಗಿಲ್ಲ ಅಲ್ಲವೇ ಎಂದು ಕೇಳಿದಾಗ, “ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ನಮ್ಮ ಸರ್ಕಾರ ಎಂದೇ ನಾವು ಹೇಳುತ್ತಿದ್ದೇವೆ. ಅವರಿಗೆ ಆ ನೋವು ಇಲ್ಲದಿದ್ದರೂ ಬೇಡ. ಆದರೆ ರಾಜಕೀಯ ಸಿದ್ಧಾಂತ ಮುಖ್ಯ ಅಲ್ಲವೇ? ಕುಮಾರಸ್ವಾಮಿ ಅವರು ಇದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ? ಜನರ ಮುಂದೆ ಹೋಗಿ ಹೇಗೆ ಮುಖ ತೋರಿಸುತ್ತಾರೆ” ಎಂದು ಕೇಳಿದರು.
ಬಿಜೆಪಿ ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಲಿ:
ಬಿಜೆಪಿ ಮೈಸೂರಿನಲ್ಲಿ ಹಾಲಿ ಸಂಸದರ ಜೊತೆಗೆ ಯದುವೀರ್ ಅವರ ಹೆಸರನ್ನು ಶಿಫಾರಸ್ಸು ಮಾಡಿರುವ ಬಗ್ಗೆ ಕೇಳಿದಾಗ, “ಅವರು ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಲಿ. ನಮ್ಮ ಪಕ್ಷದ ನೀತಿ, ಸಿದ್ಧಾಂತದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ. ನಾವು ಅವರ ಪಕ್ಷದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಕಾರ್ಯಕ್ರಮದ ಬಗ್ಗೆ ಆಲೋಚಿಸುತ್ತೇವೆ. ಜನರ ಮಧ್ಯೆ ಇರುವ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸುತ್ತೇವೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ