ಹುಶಾರ್! ಒಂದೊಂದಾಗಿ ಉರುಳುತ್ತಿವೆ ಶಾಲಾ ಕೊಠಡಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಜಿಲ್ಲೆಯಾದ್ಯಂತ ಈ ಬಾರಿ ಪ್ರವಾಹ ನಿರೀಕ್ಷೆಗೂ ಮೀರಿ ಜನರನ್ನು ಸಂಕಷ್ಟಕ್ಕೆ ನೂಕಿದೆ. ಪ್ರವಾಹ ಇಳಿದರೂ ಅದರ ದುಷ್ಪರಿಣಾಮ ಮಾತ್ರ ಕಡಿಮೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಎಷ್ಟು ಅನಾಹುತ ಸಂಭವಿಸುತ್ತವೆಯೋ ಎನ್ನುವ ಆತಂಕ ಎಲ್ಲರಲ್ಲೂ ಕಾಡುವಂತಾಗಿದೆ.
ಪ್ರವಾಹದಿಂದ ಸಾವಿರಾರು ಕಟ್ಟಡಗಳು ಉರುಳಿಬಿದ್ದಿವೆ. ಇದಲ್ಲದೆ ಇನ್ನೂ ಸಾವಿರಾರು ಮನೆಗಳು, ಕಟ್ಟಡಗಳು ಸುಮಾರು 15 ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದವು. ಇದರಿಂದಾಗಿ ಈ ಕಟ್ಟಡಗಳು ಶಿಥಿಲಗೊಂಡಿವೆ. ಇವೆಲ್ಲ ವಾಸಿಸಲು ಯೋಗ್ಯವೇ ಎನ್ನುವ ಕುರಿತು ತಪಾಸಣೆ ಮಾಡಬೇಕಾಗಿದೆ.
ಇದು ಶಾಲಾ ಕಟ್ಟಡಗಳಿಗೂ ಅನ್ವಯ. ಜಿಲ್ಲೆಯ ನೂರಾರು ಶಾಲ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಕೊಠಡಿಗಳು ಈಗಾಗಲೆ ಬಿದ್ದಿವೆ. ಈಗಲೂ ದಿನಕ್ಕೊಂದು ಎರಡು ಕೊಠಡಿಗಳು, ಕಟ್ಟಡಗಳು ಬೀಳುತ್ತಿವೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೆ 2 ಶಾಲಾ ಕಟ್ಟಡಗಳು ಬಿದ್ದಿವೆ.
ಶನಿವಾರ ಖಾನಾಪುರ ತಾಲೂಕಿನ ಚಿಕ್ಕದಿನಕೊಪ್ಪದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದು ಬಿದ್ದಿದೆ. ಮಧ್ಯಾಹ್ನ 12.30ರ ವೇಳೆಗೆ ಈ ಕೊಠಡಿ ಬಿದ್ದಿದೆ.
ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಂಡೇ ಶಾಲೆಗಳಲ್ಲಿ ಮಕ್ಕಳನ್ನು ಕೂಡ್ರಿಸುವುದು ವಿಹಿತ. ಇಲ್ಲವಾದಲ್ಲಿ ಅಪಾಯವಾಗುವ ಸಾಧ್ಯತೆ ಇಉದೆ. ಇನ್ನೂ 6 ತಿಂಗಳವರೆಗೆ ಶಿಥಿಲ ಕಟ್ಟಡಗಳಿಗೆ ಅಪಾಯವಾಗುವ ಸಾಧ್ಯತೆ ಇಲ್ಲದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ