ಕುಮಾರಸ್ವಾಮಿ ಕೊರಳಿಗೆ ಪೋನ್ ಕದ್ದಾಲಿಕೆ ಕುಣಿಕೆ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ರಾಜ್ಯದ ಸಮ್ಮಿಶ್ರ (ಜೆಡಿಎಸ್-ಕಾಂಗ್ರೆಸ್) ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೋನ್ ಕದ್ದಾಲಿಕೆ ನಡೆಸಿದ್ದಾರೆ. ನಮ್ಮ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೋನ್ ಕೂಡ ಕದ್ದಾಲಿಸಲಾಗಿದೆ ಎಂದು ಜೆಡಿಎಸ್ ಅಂದಿನ ಅಧ್ಯಕ್ಷ, ಹಾಲಿ ಅನರ್ಹ ಶಾಸಕ ಎಚ್.ವಿಶ್ವನಾಥ 3 ದಿನಗಳ ಹಿಂದಷ್ಟೆ ಆರೋಪಿಸಿದ್ದರು.
ಪೋನ್ ಕದ್ದಾಲಿಕೆ ದೊಡ್ಡ ಅಪರಾಧ. ಈ ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಪೋನ್ ಕದ್ದಾಲಿಕೆ ಆರೋಪ ಬಂದ ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದ್ದರು ಎಂದೂ ವಿಶ್ವನಾಥ ಹೇಳಿದ್ದರು.
ವಿಶ್ವನಾಥ ಆರೋಪದ ನಂತರ ಪ್ರಕರಣ ಗಂಭೀರ ಸ್ವರೂಪ ಪಡೆದಿತ್ತು. ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಲ್ಲೇ ಕೆಲವರು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರೆ ಇನ್ನು ಕೆಲವರು ಪೋನ್ ಕದ್ದಾಲಿಕೆ ನಡೆದೇ ಇರಲಿಲ್ಲ. ತನಿಖೆಯ ಅಗತ್ಯವಿಲ್ಲ ಎಂದಿದ್ದರು. ಈ ಸಂಬಂಧ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ ಮತ್ತು ಎಂ.ಬಿ.ಪಾಟೀಲ ನಡುವೆ ವಾಕ್ಸಮರ ನಡೆದು, ನಂತರ ತೇಪೆ ಹಚ್ಚು ಕೆಲಸವೂ ನಡೆದಿತ್ತು.
ಇದನ್ನೂ ಓದಿ – ಡಿ.ಕೆ.ಶಿವಕುಮಾರ ಸ್ವಷ್ಟನೆ; ಎಂ.ಬಿ.ಪಾಟೀಲ ಕ್ಷಮೆ ಯಾಚನೆ
ಋಣ ಸಂದಾಯ
ಈ ಹಿಂದೆ ಆಪರೇಶನ್ ಕಮಲಕ್ಕಾಗಿ ಬಿ.ಎಸ್.ಯಡಿಯೂರಪ್ಪ ನಡೆಸಿದ್ದರೆನ್ನಲಾದ ಮಾತುಕತೆಯ ಆಡಿಯೋ ಬಹಿರಂಗವಾಗಿತ್ತು. ಆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕೆಂದು ವಿಧಾನಸಭೆಯಲ್ಲೇ ನಿರ್ಧಾರವಾಗಿತ್ತು. ಅಂದಿನ ಸ್ಪೀಕರ್ ರಮೇಶಕುಮಾರ ತನಿಖೆ ನಡೆಸಿ, ತಮ್ಮ ಮೇಲೆ ಬಂದಿರುವ ಆರೋಪದಿಂದ ಮುಕ್ತಮಾಡುವಂತೆ ಪಟ್ಟು ಹಿಡಿದಿದ್ದರು. ಆದರೆ ಕುಮಾರಸ್ವಾಮಿ ಸರಕಾರ ಎಸ್ಐಟಿ ರಚನೆ ಮಾಡಲೇ ಇಲ್ಲ. ಇಡೀ ಪ್ರಕರಣವೇ ಹಳ್ಳ ಹಿಡಿದಿತ್ತು.
ಆ ಪ್ರಕರಣದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ರಕ್ಷಿಸಿದ್ದರು. ಹಾಗಾಗಿ ಈಗ ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಯಡಿಯೂರಪ್ಪ ತನಿಖೆ ನಡೆಸದೆ ಕುಮಾರಸ್ವಾಮಿ ಅವರನ್ನು ರಕ್ಷಿಸಲಿದ್ದಾರೆ, ಅವರ ಋಣ ಸಂದಾಯ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಯಡಿಯೂರಪ್ಪ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವುದಾಗಿ ಹೇಳಿದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.
ಇದನ್ನೂ ಓದಿ – ಮಂಗಳವಾರ ಸಚಿವ ಸಂಪುಟ ರಚನೆ, ಪ್ರಮಾಣವಚನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ