ಮಹಿಳೆಯರ ಸಬಲೀಕರಣದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ – ಲಕ್ಷ್ಮೀ ಹೆಬ್ಬಾಳಕರ್
*ಯರಗಟ್ಟಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ,*ಯರಗಟ್ಟಿ (ಬೆಳಗಾವಿ):* ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಸ್ವಾತಂತ್ರ್ಯದ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿದೆ. ದೇಶದ ಮಹಿಳೆಯರಿಗೆ ಶಕ್ತಿ ತುಂಬಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಯರಗಟ್ಟಿಯ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಂಬಿಕೆಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಚುನಾವಣಾ ಪೂರ್ವ ಜನರಿಗೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ 100 ದಿನಗಳಲ್ಲಿ ಪೂರೈಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಶ್ರಮದ ಫಲವಾಗಿ ಇಂದು ಗ್ಯಾರಂಟಿ ಯೋಜನೆಗಳು ಜಾರಿಗೊಂಡಿವೆ. ರಾಜ್ಯಾದ್ಯಂತ 1.20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಕ್ಕಿದೆ ಎಂದು ಹೇಳಿದರು.
ಈ ಮೊದಲು ಸರ್ಕಾರದ ಅನುದಾನ ಪಡೆಯಲು ಜನರು ಮುಜುಗರ ಪಡುತ್ತಿದ್ದರು. ಇದೀಗ ಕಾಲ ಬದಲಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುವುದು ನಮ್ಮ ಹಕ್ಕು. ಇದಕ್ಕೆ ಪ್ರಮುಖ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸದೊಂದಿಗೆ ಚುನಾವಣೆಗೂ ಮುನ್ನ ಮತದಾರರಿಗೆ ಗ್ಯಾರಂಟಿ ಕಾರ್ಡ್ ಹಂಚಿದ್ದೆವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬಿಜೆಪಿಯವರ ರೀತಿ ನಾವು ಕೇವಲ ಮಾತಿಗೆ ಸೀಮಿತವಾಗದೆ ಕೊಟ್ಟ ಮಾತಿನಂತೆ ಭರವಸೆಯನ್ನು ಈಡೇರಿಸಿದ್ದೇವೆ. ಕರೋನಾದಿಂದ ಎರಡೂವರೆ ವರ್ಷ ತತ್ತರಿಸಿದ್ದ ಜನ, ಅತಿವೃಷ್ಠಿಯಿಂದಲೂ ಸಂಕಷ್ಟಕ್ಕೆ ಸಿಲುಕಿದ್ದರು. ಜನ ಸಾಮಾನ್ಯರಿಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಸಮಾರಂಭದಲ್ಲಿ ಶಾಸಕರಾದ ವಿಶ್ವಾಸ್ ವೈದ್ಯ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ನಿಖಿಲ್ ದೇಸಾಯಿ, ನೀಲಕಂಠ ಸಿದ್ದಬಸನ್ನವರ್, ಸವದತ್ತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್, ತಹಶಿಲ್ದಾರ್ ಎಸ್.ಎಸ್.ಇಂಗಳೆ, ಗೋಪಾಲ್ ದಳವಾಯಿ, ಬಸವರಾಜ ಅರಬೆಂಚಿ, ಕ್ಷೇತ್ರ ಶಿಕ್ಷಣಾಧಿಕಾರಿ ದಂಡಿನ್, ಸಿಡಿಪಿಓ ಸುನಿತಾ ಪಾಟೀಲ್, ದಾವಲಸಾಬ್ ತಹಶಿಲ್ದಾರ್, ಶಿವಾನಂದ ಭಜಂತ್ರಿ, ಕಾವೇರಿ ಚಲವಾದಿ, ಈರಣ್ಣಗೌಡ, ಫಕೀರಪ್ಪ ಹಟ್ಟಿ, ಭವರಸಾಬ್ ಸಣ್ಣಕ್ಕಿ, ಬಸವರಾಜ ಬಿರಾದಾರ, ಬಾಲಚಂದ್ರ ಸತ್ತೂರಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ