Kannada NewsKarnataka News

ಜಯದ ಓಟ ಮುಂದುವರಿಸಿದ ಲಯನ್ಸ್ 

ಜಯದ ಓಟ ಮುಂದುವರಿಸಿದ ಲಯನ್ಸ್ 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮಾಜಿ ಚಾಂಪಿಯನ್ಸ್ ಮೈಸೂರು ವಾರಿಯರ್ಸ್ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ ಶಿವಮೊಗ್ಗ ಲಯನ್ಸ್ ತಂಡ 14 ರನ್ ಅಂತರದಲ್ಲಿ ಜಯ ಗಳಿಸುವ ಮೂಲಕ  ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ 8 ನೇ ಆವೃತ್ತಿಯಲ್ಲಿ ತನ್ನ ಜಯದ ಓಟವನ್ನುಮುಂದುವರಿಸಿದೆ.
166 ರನ್ ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಮೈಸೂರು ವಾರಿಯರ್ಸ್ ಶಿವಮೊಗ್ಗದ ಸ್ಪಿನ್ ಹಾಗೂ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿ 152  ರನ್ಗಾಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕೆ. ವಿ. ಸಿದ್ದಾರ್ಥ್ 77  ರನ್ ಗಳಿಸಿ ದಿಟ್ಟ ಹೋರಾಟ ನೀಡಿದರೂ ತಂಡವನ್ನು ಸೋಲಿನಿದಿಂದ ಪಾರುಮಾಡಲಾಗಲಿಲ್ಲ.
ಶಿವಮೊಗ್ಗ ಲಯನ್ಸ್ ಪರ ಟಿ. ಪ್ರದೀಪ್ ಹಾಗೂ ಎಚ್. ಎಸ್, ಶರತ್ ತಲಾ 3 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಅಭಿಮನ್ಯುಮಿಥುನ್, ಹಾಗೂ ಎಸ್. ಪಿ ಮನುನಾಥ್ ತಲಾ ಎರಡು ವಿಕೆಟ್ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು.
ಶಿವಮೊಗ್ಗ ಲಯನ್ಸ್ ಪರ ಪವನ್ ದೇಶಪಾಂಡೆ ಗಳಿಸಿದ 53 ರನ್ ಜಯದಲ್ಲಿ ಪ್ರಮುಖವಾಯಿತು. ಶಿವಮೊಗ್ಗ ಸತತ ಎರಡನೇ ಜಯ ಗಳಿಸಿದರೆ, ಮೈಸೂರುಮೊದಲ ಪಂದ್ಯದಲ್ಲಿ ಅಂಕ ಹಂಚಿಕೊಂಡು ಈಗ ಮತ್ತೊಂದು ಸೋಲಿನ ಆಘಾತ ಅನುಭವಿಸಿತು.

ಶಿವಮೊಗ್ಗ ಸವಾಲಿನ ಮೊತ್ತ 


ಕರ್ನಾಟಕ ಪ್ರೀಮಿಯರ್ ಲೀಗ್ ನ 8 ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳುಮುಖಾಮುಖಿಯಾದವು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಯನ್ಸ್ 20 ಓವರ್ ಗಳಲ್ಲಿ 7  ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ದಿಟ್ಟ ಸವಾಲೊಡ್ಡಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ  ಶಿವಮೊಗ್ಗದ ಪರ ಮೊದಲ ಪಂದ್ಯದ ಹೀರೋ ನಿಹಾಲ್ ಉಳ್ಳಾಲ್ ಕೇವಲ 28 ರನ್ ಗಳಿಸಿ ನಿರ್ಗಮಿಸಿರವುದು ತಂಡದರನ್ ಗಳಿಕೆಯ ಮೇಲೆ ಕಡಿವಾಣ ಹಾಕಿದಂತಾಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲ ಅರ್ಜುನ್ ಹೊಯ್ಸಳ ಕೂಡ 28 ರನ್ ಗೆ ತೃಪ್ತಿಪಟ್ಟರು. 17  ಎಸೆತಗಳನ್ನು ಎದುರಿಸಿದ ಉಳ್ಳಾಲ್ 5  ಬೌಂಡರಿ ಹಾಗೂ 1  ಸಿಕ್ಸರ್ ನೆರವಿನಿಂದ ಆತ್ಮವಿಶ್ವಾಸದ ಆಟ ಆರಂಭಿಸಿದ್ದರು ಆದರೆ ವೈಶಾಖ್ ವಿಜಯ್ಕುಮಾರ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲೂ ಉಳ್ಳಾಲ್ ಅಜೇಯ 88  ರನ್ ಸಿಡಿಸಿ ಜಯದ ರೂವಾರಿಎನಿಸಿದ್ದರು.
ಶಿವಮೊಗ್ಗ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ಪವನ್ ದೇಶಪಾಂಡೆ ಅವರ ಆಕರ್ಷಕ ಅರ್ಧ ಶತಕ ಪ್ರಮುಖ ಪಾತ್ರ ವಹಿಸಿತು. 42  ಎಸೆತಗಳನ್ನೆದುರಿಸಿದದೇಶಪಾಂಡೆ 3  ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಮೂಲ್ಯ 53  ರನ್ ಗಳಿಸಿ ಪ್ರಸಕ್ತ ಕೆಪಿಎಲ್ ನಲ್ಲಿ ವೈಯಕ್ತಿಕ ಮೊದಲ ಅರ್ಧ ಶತಕ ದಾಖಲಿಸಿದರು. ಶಿವಮೊಗ್ಗ ತಂಡದ ಇತರ ಬ್ಯಾಟ್ಸಮನ್ ಗಳು ಲಗುಬಗನೇ ವಿಕೆಟ್ ಒಪ್ಪಿಸಿದರೂ ಹೆಚ್ಚು ಹೆಚ್ಚು ಚೆಂಡುಗಳನ್ನು ವ್ಯಯ ಮಾಡಲಿಲ್ಲ. ಶಿವಮೊಗ್ಗದ ಇನ್ನಿಂಗ್ಸ್ ನಲ್ಲಿ 6  ಸಿಕ್ಸರ್ ಹಾಗೂ 16  ಬೌಂಡರಿ ಸೀರಿತ್ತು.
ಮೈಸೂರು ವಾರಿಯರ್ಸ್ ಪರ ವೈಶಾಖ್ ವಿಜಯ್ ಕುಮಾರ್ 2  ವಿಕೆಟ್ ಗಳಿಸಿದರೂ ನಾಲ್ಕು ಓವರ್ ಗಳಲ್ಲಿ 41  ರನ್ ನೀಡಿ ದುಬಾರಿ ಬೌಲರ್ ಎನಿಸಿದರು.ದೇವಯ್ಯ, ಅನಿರುಧ್ ಜೋಶಿ, ವೆಂಕಟೇಶ್ ಹಾಗೂ ಸಿದ್ದಾರ್ಥ್ ತಲಾ ಒಂದು ವಿಕೆಟ್ ಗಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button