*ಮೈತ್ರಿಯಲ್ಲಿ ಸಮಸ್ಯೆ ಇಲ್ಲ; ಎಲ್ಲಾ ಕ್ಷೇತ್ರ ಗೆಲ್ಲಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದ ಹೆಚ್.ಡಿ.ಕುಮಾರಸ್ವಾಮಿ*
*28 ಕ್ಷೇತ್ರಗಳಲ್ಲಿಯೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ ಮಾಜಿ ಮುಖ್ಯಮಂತ್ರಿಗಳು*
***
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಎನ್ಡಿಎ ಮೈತ್ರಿಕೂಟ ಗೆಲ್ಲಬೇಕು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಕರೆಯಲಾಗಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ನಮ್ಮ ಮುಖಂಡರ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ ಅಷ್ಟೇ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚೆ ಮಾಡಿದ್ದೇನೆ. ನಾನು ಹೃದಯ ಶಸ್ತ್ರಚಿಕಿತ್ಸೆಗಾಗಿ ಚೆನ್ನೈಗೆ ಹೋಗುತ್ತಿದ್ದೇನೆ. ನಾನು ಬರುವವರೆಗೂ ಒಮ್ಮತವಾಗಿ ಮೈತ್ರಿ ಧರ್ಮಕ್ಕೆ ಬದ್ಧರಾಗಿ ಚುನಾವಣೆ ಕೆಲಸ ಮಾಡಿಕೊಂಡು ಹೋಗುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಅದೇ ರೀತಿ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇನೆ ಎಂದು ತಿಳಿಸಿದರು.
ಒಂದು ವಾರದಲ್ಲಿ ನಾನು ವಾಪಸ್ ಬರುತ್ತೇನೆ. ನಮ್ಮ ಮೂರು ಕ್ಷೇತ್ರಗಳಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವಂತೆ ಕೋರಿದ್ದೇನೆ. ಯಾರೂ ಸಮಯ ವ್ಯರ್ಥ ಮಾಡಬಾರದು. ಆಸ್ಪತ್ರೆಯಿಂದ ಬಂದ ಕೂಡಲೇ ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತೇನೆ. ನನ್ನ ಪ್ರಕಾರ ಮಂಡ್ಯ ಸೇರಿ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಅಭ್ಯರ್ಥಿಗಳು. ಪಕ್ಷವನ್ನು, ಕಾರ್ಯಕರ್ತರನ್ನು ಗೆಲ್ಲಿಸವುದಕಾಗಿ ಎಲ್ಲರೂ ಒಮ್ಮತವಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾನು ಆಸ್ಪತ್ರೆಗೆ ದಾಖಲಾಗುವ ಮುನ್ನ ಇಷ್ಟು ವಿಷಯಗಳನ್ನು ಕಾರ್ಯಕರ್ತರಿಗೆ ಹೇಳಬೇಕಿತ್ತು. ಅದನ್ನು ನಿಮ್ಮ (ಮಾಧ್ಯಮಗಳು) ಮೂಲಕ ಅವರಿಗೆ ಹೇಳುತ್ತಿದ್ದೇನೆ ಎಂದ ಅವರು; ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಕೋಲಾರ ಕ್ಷೇತ್ರದ ಬಗ್ಗೆ ಗೊಂದಲ ನಿವಾರಣೆ ಆಗಿದೆ. ಆಸ್ಪತ್ರೆಯಿಂದ ಬಂದ ಕೂಡಲೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಂಡ್ಯ ಜಿಲ್ಲೆಯ ಕಾರ್ಯಕರ್ತರು ನಿರಾಶೆ ಪಡಬೇಕಿಲ್ಲ. ಅವರಿಗೆ ಒಪ್ಪಿಗೆಯಾಗುವ ಒಳ್ಳೆಯ ನಿರ್ಧಾರವನ್ನೇ ಪ್ರಕಟಿಸುತ್ತೇನೆ. ಇಂದಿನಿಂದಲೇ ಎಲ್ಲರೂ ಚುನಾವಣೆ ಕೆಲಸ ಶುರು ಮಾಡಬೇಕು ಎಂದು ಮಂಡ್ಯ ಕಾರ್ಯಕರ್ತರಿಗೆ ಕರೆ ನೀಡಿದರು.
**||ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾ ಅಕ್ರಮ||**
*||ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ಪಡೆ ನಿಯೋಜಿಸಲು ಆಯೋಗಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ||*
*||ಕ್ಷೇತ್ರದಲ್ಲಿ ಕುಕ್ಕರ್, ಹಣ ಹಂಚಿಕೆ; ಮಾಧ್ಯಮಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ||*
*||ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ & ಜಿ.ಪಂ. ಸಿಇಒ ವರ್ಗಾವಣೆಗೆ ಒತ್ತಾಯ||*
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದರು.
ಬೆಂಗಳೂರಿನಲ್ಲಿ ಮಂಗಳವಾರ ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಕೂಡಲೇ ಈ ಕ್ಷೇತ್ರದಲ್ಲಿ *ಅರೆಸೇನಾ ಪಡೆ ತುಕಡಿ*ಗಳನ್ನು ನಿಯೋಜಿಸಬೇಕು ಎಂದು *ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್* ಅವರನ್ನು ಆಗ್ರಹಪಡಿಸಿದರು.
ಅಲ್ಲದೆ; ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಡೆಸುತ್ತಿರುವ ಅಕ್ರಮಗಳಿಗೆ *ಮೌನ ಸಹಕಾರ* ನೀಡುತ್ತಿರುವ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ *ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ* ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಆಯೋಗವನ್ನು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
*ಕೇಂದ್ರ ಆಯೋಗ ಏನು ಮಾಡುತ್ತಿದೆ?*
ಕರ್ನಾಟಕದಲ್ಲಿ ಚುನಾವಣೆ ಆಯೋಗ ಇದೆಯಾ? ಕೇಂದ್ರ ಆಯೋಗ ಏನು ಮಾಡುತ್ತಿದೆ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಆಯೋಗಕ್ಕೆ ಗೊತ್ತಿಲ್ಲವೇ? ಆಯೋಗದ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಭಾನುವಾರ ರಾತ್ರಿ ಈ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದನ್ನು ನೀವು ನೋಡಬೇಕು ಎಂದು ಆಯೋಗವನ್ನು ಒತ್ತಾಯ ಮಾಡಿದ ಕುಮಾರಸ್ವಾಮಿ ಅವರು; ಕಾಂಗ್ರೆಸ್ಅಭ್ಯರ್ಥಿ ಮತದಾರರಿಗೆ ಹಂಚಲು ಇರಿಸಲಾಗಿದ್ದ ಕುಕ್ಕರ್ʼಗಳ ಲೋಡ್ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
*100 ನಿಮಿಷದಲ್ಲಿ ಕ್ರಮ ಎಂದಿರಿ, ಇಲ್ಲಿ 48 ಗಂಟೆ ಆಗಿದೆ!*
ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ಮಿತಿಮೀರಿವೆ. ಕುಕ್ಕರ್ ಮತ್ತು ಹಣವನ್ನು ಅವ್ಯಾಹತವಾಗಿ ಹಂಚಲಾಗುತ್ತಿದೆ. ಮರಳವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಮತದಾರರಿಗೆ ಹಂಚಲು ಇರಿಸಿದ್ದ ಕುಕ್ಕರ್ʼಗಳನ್ನು ಲೋಡ್ ಮಾಡಲಾಗಿದ್ದ ಎರಡು ಲಾರಿಗಳನ್ನು ಜೆಡಿಎಸ್ ಕಾರ್ಯಕರ್ತರು ಹಿಡಿದಿದ್ದಾರೆ. ಮಾಧ್ಯಮಗಳು ಕೂಡ ಅದನ್ನು ತೋರಿಸಿ ವರದಿ ಮಾಡಿವೆ. ದೇಶದಲ್ಲಿ ಇಂಥ ಅಕ್ರಮ ಎಲ್ಲೇ ನಡೆದರೂ ಅದರ ವಿಡಿಯೋ ಅಥವಾ ಫೋಟೋ ತೆಗೆದು ಕಳಿಸಿದರೆ ಕೇವಲ ನೂರು ನಿಮಿಷದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮೂರು ಗಂಟೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಈ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ 48 ಗಂಟೆ ಕಳೆದಿದೆ. ಇನ್ನೂ ಕ್ರಮ ಆಗಿಲ್ಲ ಯಾಕೆ? ಎಂದು ಕುಮಾರಸ್ವಾಮಿ ಅವರು ಆಯೋಗವನ್ನು ಪ್ರಶ್ನಿಸಿದರು. ಅಲ್ಲದೆ; ಕುಕ್ಕರ್ ಹಂಚಿಕೆಯ ದಾಖಲೆಯ ವಿಡಿಯೋ, ಫೋಟೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು ಅವರು.
ಈ ಬಗ್ಗೆ ತಹಸೀಲ್ದಾರ್ ಅವರಿಗೆ ದೂರು ಕೊಟ್ಟರೆ ಹೌದಾ..? ನನ್ನ ಗಮನಕ್ಕೆ ಬಂದೇ ಇಲ್ಲ ಎನ್ನುತ್ತಾರೆ. ವಾಣಿಜ್ಯ ತೆರಿಗೆ ಇಲಾಖೆಗೆ ಮಾಹಿತಿ ಕೊಟ್ಟರೆ ಜಿಲ್ಲಾಧಿಕಾರಿಗೆ ತಿಳಿಸುತ್ತೇವೆ ಎನ್ನುತ್ತಾರೆ. ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರೆ ನಮ್ಮ ಗಮನಕ್ಕೆ ಬಂದಿಲ್ಲ, ಪರಿಶೀಲನೆ ನಡೆಸುತ್ತೇವೆ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ಚುನಾವಣೆ ಎಂದರೆ ಇದೇನಾ? ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಆಯೋಗವು ಕ್ಷೇತ್ರದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಧ್ಯಮಗಳ ಮೂಲಕ ಆಯೋಗಕ್ಕೆ ಮನವಿ ಒತ್ತಾಯ ಮಾಡುವುದಷ್ಟೇ ಅಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಆಕ್ರಮಗಳ ಕುರಿತು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
*ಡಿಕೆಶಿ ಮೇಲೆ ನೇರ ವಾಗ್ದಾಳಿ:*
ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್ ಡಿ.ಕೆ.ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ತಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿಯೇ ಟಾಂಗ್ ಕೊಟ್ಟರು.
ನಿಮಗೆ ನಾಚಿಕೆ ಆಗಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ದಿನವೂ ಹೇಳಿದ್ದೇ ಹೇಳಿದ್ದು. ಮಿಸ್ಟರ್ ಸಿದ್ದರಾಮಯ್ಯ.. ನಿಮ್ಮ ಎರಡು ಸಾವಿರ ರೂಪಾಯಿ ಸಾಮಾನ್ಯ ಜನರ ಜೀವ ಉಳಿಸುತ್ತಿದೆ ಎಂದಾದರೆ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ʼಗಳನ್ನು ಯಾಕೆ ಹಂಚಿಕೆ ಮಾಡುತ್ತಿದ್ದೀರಿ? ನಿಮ್ಮ ಪಕ್ಷಕ್ಕೆ, ನಿಮಗೆ ನಾಚಿಕೆ ಎನ್ನುವುದು ಏನಾದರೂ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀವ್ರ ಪ್ರಹಾರ ನಡೆಸಿದರು.
*ಬೆಂಕಿ ಹಚ್ಚಲು ಕಾರ್ಯಕರ್ತರಿಗೆ ಕರೆ ಕೊಡಬೇಕಾದೀತು*
ಚುನಾವಣಾ ಆಯೋಗಕ್ಕೆ ನನ್ನ ನೇರ ಆಗ್ರಹ ಇಷ್ಟೇ. ಕೂಡಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ತಪ್ಪಿದರೆ ನಾನೇ ಕಾರ್ಯಕರ್ತರರಿಗೆ ಕರೆ ಕೊಡಬೇಕಾಗುತ್ತದೆ. ಕುಕ್ಕರ್ ಎಲ್ಲೆಲ್ಲಿ ಅಡಗಿಸಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಬೆಂಕಿ ಹಚ್ಚಿ ಅಂತ ನಮ್ಮ ಕಾರ್ಯಕರ್ತರಿಗೆ ಕರೆ ಕೋಡಬೇಕಾಗುತ್ತದೆ. ಆಮೇಲೆ ಕಾರ್ಯಕರ್ತರ ಮೇಲೆ ಈ ಅಧಿಕಾರಿಗಳು ಕೇಸ್ ದಾಖಲಿಸಲಿ ನೋಡೋಣ ಎಂದು ಎಚ್ಚರಿಕೆ ನೀಡಿದರು ಕುಮಾರಸ್ವಾಮಿ ಅವರು.
*ಒಣ ಅನುಕಂಪ ತೋರಿದ ಡಿಕೆಶಿಗೆ ತಿರುಗೇಟು*
ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಸೋಮವಾರ ನಮ್ಮ ಪಕ್ಷದ ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ. ನಮ್ಮ ಪಕ್ಷದಿಂದ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಹೋಗಬೇಕು ಎಂದು ಹೇಳಿದ್ದೆವು. ಆ ಸಭೆಯಲ್ಲಿ ಪ್ರಮುಖವಾಗಿ ಏನೇನು ಚರ್ಚೆ ಆಗಿತ್ತು ಎಂಬುದನ್ನು ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಅಂದ ಮಾತ್ರಕ್ಕೆ ನಮಗೆ ಬಿಜೆಪಿ ಮೇಲೆ ವಿಶ್ವಾಸ ಹೋಗಿದೆ ಅಂತ ಅಲ್ಲ. ಆರಂಭದಿಂದಲೂ ನಾವು 3 ಕ್ಷೇತ್ರಗಳನ್ನು ಕೇಳಿದ್ದೇವೆ. ಅದನ್ನು ಹೊರತುಪಡಿಸಿದರೆ ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ಕಂಡಿದ್ದಾರೆ. ಇದನ್ನೇ ಕಾಂಗ್ರೆಸ್ಪಕ್ಷದ *ಸೋಕಾಲ್ಡ್ ಟ್ರಬಲ್ ಶೂಟರ್*, ಹಿಂದೆ ನಮ್ಮ ಮೈತ್ರಿ ಸರಕಾರವನ್ನು ತೆಗೆದಿದ್ದವರು ನಮ್ಮ ಕಾರ್ಯಕರ್ತರ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ. ಯಾವನಿಗೆ ಬೇಕು ಇವರ ಅನುಕಂಪ? ನಮ್ಮ ಕಾರ್ಯಕರ್ತರಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
*ಜೆಡಿಎಸ್-ಬಿಜೆಪಿ ಮೈತ್ರಿಗೆ ನೀವೇ ಕಾರಣ*
ಮಿಸ್ಟರ್ ಡಿ.ಕೆ.ಶಿವಕುಮಾರ್, ಇವತ್ತು ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ನೀವು. ನಿಮ್ಮಿಂದಲೇ ಈ ಮೈತ್ರಿ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳೊದಕ್ಕೆ ಮೂಲ ಕಾರಣವೂ ನೀವೇ. ಹಿಂದೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಆದಾಗ ಈ ಸರಕಾರ ಐದು ವರ್ಷ ಇರಬೇಕು ಎಂದು ಹೇಳಿದ್ದಿರಿ. ಆದರೆ ಪಕ್ಕದಲ್ಲೇ ಕೂತು ಬಿಲ ಕೊರೆದಿರಿ. ಅಧಿಕಾರವನ್ನೂ, ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷವನ್ನೇ ರಾಮನಗರದಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಿರಿ. ಆಗ ಮಂಡ್ಯದಲ್ಲಿ ದೋಖಾ ಮಾಡಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲುವಂತೆ ಮಾಡಿದಿರಿ. ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಮ್ಮ ಕಾರ್ಯಕರ್ತರು ಇದನ್ನೇ ಮಾಡಿದ್ದಿದ್ದರೆ ಆತನೂ ಮನೆಯಲ್ಲಿ ಕೂರಬೇಕಿತ್ತು. ಮೈತ್ರಿಗೆ ನಾವು ಮೋಸ ಮಾಡಲಿಲ್ಲ. ಬಿಜೆಪಿ ಜತೆ 20 ತಿಂಗಳು ಸರಕಾರ ಮಾಡಿದ್ದರಿಂದ ನಾನು ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಆದರೆ ನಿಮ್ಮ ಜತೆ 14 ತಿಂಗಳ ಮೈತ್ರಿಯಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇನೆ. ರಾಜಕೀಯವಾಗಿ ನೀವು ವಿಷ ಹಾಕಿ ನಮ್ಮನ್ನು ಕೊಂದಿದ್ದೀರಾ. ಹಂತ ಹಂತವಾಗಿ ನಮ್ಮನ್ನು ಕುಗ್ಗಿಸಿದ್ದೀರಾ. 14 ತಿಂಗಳು ನಿಮ್ಮ ಜತೆ ಸರಕಾರ ಮಾಡಿದ್ದು ನಾನು ತೆಗೆದುಕೊಂಡ ಅತ್ಯಂತ ಕೆಟ್ಟ ನಿರ್ಧಾರ. ದೇವೇಗೌಡರ 60 ವರ್ಷಗಳ ಸುಧೀರ್ಘ ರಾಜಕಾರಣಕ್ಕೆ ಕೊಳ್ಳಿ ಇಟ್ಟಿದ್ದೀರಾ. ನನ್ನ ಜತೆ ಇದ್ದವರನ್ನು ಖರೀದಿ ಮಾಡುತ್ತಿದ್ದೀರಾ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ವಿರುದ್ಧ ಕಿಡಿಕಾರಿದರು.
ಬಿಜೆಪಿಯಲ್ಲಿ ನನಗೆ ಗೌರವ ಕೊಟ್ಟಿದ್ದಾರೆ. ಅವರು ನಿಮ್ಮ ಹಾಗೆ ನನ್ನ ಕುತ್ತಿಗೆ ಕೋಯ್ದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ತೋಳ್ಬಲ, ಧನಬಲ, ಅಧಿಕಾರ ಬಲದಿಂದ ಮೆರೆಯಿತ್ತಿದ್ದೀರಿ. ನನ್ನ ಪಕ್ಷದ ಶಾಸಕರನ್ನು ಸೆಳೆಯೋದಕ್ಕೆ ನೀವು ಏನೆಲ್ಲ ಮಾಡಿದ್ದಿರಿ ಎನ್ನುವುದು ಗೊತ್ತಿದೆ ನನಗೆ. ಇವತ್ತಿಗೂ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದೀರಿ. ನೀವು ನಮ್ಮನ್ನು ಮುಗಿಸಲು ಹಂತ ಹಂತವಾಗಿ ಏನೆಲ್ಲಾ ಮಾಡುತ್ತಿದ್ದೀರಾ ಎನ್ನುವ ಮಾಹಿತಿ ನನಗೆ ಇದೆ. ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವ ದಿನಗಳು ಹತ್ತಿರಕ್ಕೆ ಬಂದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಕ್ಷೇತ್ರದಲ್ಲಿ ಕೂಡ ಒಂದು ಕೋಟಿ ರೂಪಾಯಿ ಸೀಜ್ ಆಗಿದೆ. ಈ ಹಣ ಅಡಿಕೆ ವ್ಯಾಪಾರದ್ದು ಎಂದು ಹೇಳಿಕೊಂಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಷ್ಟು ಹಣ ದುಡಿಯುವ ಅಡಿಕೆ ವ್ಯಾಪಾರಿಗಳಿದ್ದಾರಾ? ಎಂದು ನನಗೆ ಅಚ್ಚರಿ ಉಂಟಾಯಿತು. ಇದು ಕೂಡ ಕಾಂಗ್ರೆಸ್ಅಭ್ಯರ್ಥಿ ಹಣವೇ ಆಗಿದೆ. ಅಲ್ಲಿಯೂ ಕಾಂಗ್ರೆಸ್ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ಕುಮಾರಸ್ವಾಮಿ, ಹಿರಿಯ ಮುಖಂಡರಾದ ಗೊಟ್ಟಿಗೆರೆ ಮಂಜುನಾಥ್, ಎ.ಪಿ.ರಂಗನಾಥ್ಸೇರಿದಂತೆ ಪಕ್ಷದ ಹಲವಾರು ನಾಯಕರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ