ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ನಾನು ಮತ್ತು ಅಣ್ಣಾಸಾಹೇಬ ಜೊಲ್ಲೆ ಇಬ್ಬರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದೆವು. ಆದರೆ ನನಗೆ ತಪ್ಪಿದೆ, ಅವರಿಗೆ ಸಿಕ್ಕಿದೆ. ನನಗೆ ಏಕೆ ತಪ್ಪಿದೆ, ಹೇಗೆ ತಪ್ಪಿದೆ ಗೊತ್ತಿಲ್ಲ. ಆದರೆ ನಾನು ಬಂಡಾಯ ಏಳುವುದಾಗಲಿ, ಬೇರೆ ಪಕ್ಷಕ್ಕೆ ಹೋಗುವುದಾಗಲಿ ಎಲ್ಲವೂ ಊಹಾಪೋಹ. ಅಂತಹ ವಿಚಾರ ನನಗಿಲ್ಲ. ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ, ಮೋದಿಯವರನ್ನು ಪ್ರಧಾನಿ ಮಾಡುವುದಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದು ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆ ಇತ್ತು. ನನ್ನ ಪರವಾಗಿ ಹಲವಾರು ನಾಯಕರು ಪ್ರಯತ್ನ ಮಾಡಿದ್ದರು. ಕಾರ್ಯಕರ್ತರಿಗೂ ಬಹಳ ಆಸೆ ಇತ್ತು. ಆದರೆ ಟಿಕೆಟ್ ತಪ್ಪಿದೆ ಎನ್ನುವ ಮಾಹಿತಿ ಸಿಕ್ಕಿದೆ, ಎಲ್ಲಿ, ಹೇಗೆ ಎನ್ನುವ ಮಾಹಿತಿ ಇಲ್ಲ. ಟಿಕೆಟ್ ಪಡೆದಿರು ಜೊಲ್ಲೆಯವರನ್ನು ಅಭಿನಂದಿಸಿ, ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಈಗ ಏನಾದರೂ ನಿರ್ಧಾರ ಮಾಡಿ ಎಂದು ಕಾರ್ಯಕರ್ತರಿಂದ ಒತ್ತಡ ಇರುವುದು ನಿಜ. ಆದರೆ ಬಂಡಾಯ ಎನ್ನುವುದು ಊಹಾಪೋಹ. ಅಂತಹ ವಿಚಾರ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನವನ್ನು ಯಾರೂ ಕೊಟ್ಟಿಲ್ಲ. ಹಲವಾರು ಸ್ನೇಹಿತರು ಸಹಜವಾಗಿ ಮಾತನಾಡಿದ್ದಾರೆ. ಅಧಿಕೃತವಾಗಿ ಯಾರೂ ನನ್ನನ್ನು ಕರೆದಿಲ್ಲ ಎಂದೂ ಅವರು ತಿಳಿಸಿದರು.
ಹುಣ್ಣಿಮೆಯ ನಂತರ ಕಾರ್ಯಕರ್ತರ ಸಭೆ ಮಾಡಿ, ಎಲ್ಲರನ್ನೂ ಸಮಾಧಾನಮಾಡುವ ಕೆಲಸ ಮಾಡುತ್ತೇನೆ. ಆಗಿರುವ ನೋವನ್ನು ಹೋಗಲಾಡಿಸುವ ಕೆಲಸ ಮಾಡುತ್ತೇನೆ. ಬಿಜೆಪಿ ಗೆಲ್ಲಿಸಲು, ಮೋದಿಯವರನ್ನು ಪ್ರಧಾನಿ ಮಾಡಲು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನು ಜೊಲ್ಲೆ ವೈರಿಗಳಲ್ಲ. ಇಬ್ಬರೂ ಆಕಾಂಕ್ಷಿಗಳಾಗಿದ್ದೆವು. ಅವರಿಗೆ ಟಿಕೆಟ್ ಸಿಕ್ಕಿದೆ. ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಕತ್ತಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ