ಶನಿವಾರ ಸಮಾನ ಮನಸ್ಕರ ಸಭೆ: ಬಂಡಾಯ ಅಭ್ಯರ್ಥಿ ಕಣಕ್ಕೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗದೀಶ್ ಶೆಟ್ಟರ್ ಸ್ಪರ್ಧೆ ವಿರೋಧಿಸಿ ಬೆಳಗಾವಿಯಲ್ಲಿ ಶನಿವಾರ ಸಮಾನಮನಸ್ಕರ ಸಭೆ ಆಯೋಜಿಸಲಾಗಿದೆ.
ಮಹಾನಗರ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ನೇತೃತ್ವದಲ್ಲಿ ಮೋದಿ ಅಭಿಮಾನಿಗಳ ಹೆಸರಿನಲ್ಲಿ ಸಭೆ ನಡೆಯಲಿದ್ದು, ಬಂಡಾಯ ಸ್ಫರ್ಧೆ ಕುರಿತು ನಿರ್ಧರಿಸುವ ಸಾಧ್ಯತೆ ಇದೆ.
ಶನಿವಾರ ಸಭೆ ಆಯೋಜಿಸಿರುವ ಕುರಿತು ಸೆಲ್ಫ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಕ್ಕುಂದ, ಮೋದಿಯವರ ಹೆಸರು ಹೇಳಿಕೊಂಡು ಬೇಕಾ ಬಿಟ್ಟಿಯಾಗಿ ಬಂದು ಉಂಡು ಹೋಗುವ ಧರ್ಮಛತ್ರವಲ್ಲ ನಮ್ಮ ಬೆಳಗಾವಿ. ಇದೊಂದು ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಸ್ವಾಭಿಮಾನದ ನೆಲ. ಆ ಸ್ವಾಭಿಮಾನಕ್ಕೆ ಧಕ್ಕೆ ಬರಕೂಡದು ಎಂದಿದ್ದಾರೆ.
ಗಟ್ಟಿಯಾದ ನಿರ್ಧಾರ ಮಾಡಿ ನಮ್ಮೂರಿನ ನ್ಯಾಯಕ್ಕಾಗಿ ನಾವೇ ಅಖಾಡಕ್ಕಿಳಿಯೋಣ ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಸಂದರ್ಭದಲ್ಲಿ ವರ್ತಿಸಿದ ರೀತಿ ಕುರಿತು ಖಟುವಾದ ಶಬ್ಧಗಳಿಂದ ಆಕ್ಷೇಪಿಸಿದ್ದಾರೆ.
ಅವರ ಪೋಸ್ಟ್ ವಿವರ ಇಲ್ಲಿದೆ:
“ಇದು ಬೆಳಗಾವಿಗರ ಸ್ವಾಭಿಮಾನದ ಹೋರಾಟ.
ಮೋದಿ ಹಾಗೂ ಬಿಜೆಪಿ ಬೆಂಬಲಿಸುವ ಬೆಳಗಾವಿ ಮತದಾರರ ಮೇಲೆ ಹೊರಗಿನ ಅವಕಾಶವಾದಿಗಳನ್ನು ಒತ್ತಾಯ ಪೂರ್ವಕವಾಗಿ ಹೇರಿ ನಮ್ಮತನವನ್ನು ಬಲಿ ಕೊಡುತ್ತಿರುವವರ ವಿರುದ್ಧ ಹೋರಾಟ.
ಮೋದಿಯವರ ಹೆಸರು ಹೇಳಿಕೊಂಡು ಬೇಕಾ ಬಿಟ್ಟಿಯಾಗಿ ಬಂದು ಉಂಡು ಹೋಗುವ ಧರ್ಮಛತ್ರವಲ್ಲ ನಮ್ಮ ಬೆಳಗಾವಿ. ಇದೊಂದು ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಸ್ವಾಭಿಮಾನದ ನೆಲ. ಆ ಸ್ವಾಭಿಮಾನಕ್ಕೆ ಧಕ್ಕೆ ಬರಕೂಡದು.
ಬಿಜೆಪಿಯ ಬೆಂಬಲಿಗರಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ನಮ್ಮ ಮೇಲೆ, ಈ ಕ್ಷೇತ್ರದ ಜನರ ಮೇಲೆ, ನಮ್ಮ ವಿಶ್ವಾಸ ಮುರಿದು ಬಿಜೆಪಿಯಿಂದ ಎಲ್ಲ ಅಧಿಕಾರ ಅನುಭವಿಸಿದ ಮೇಲೂ ಕೇವಲ ತನ್ನ ಸ್ವಾರ್ಥಕ್ಕಾಗಿ ಪಕ್ಷ ತೊರೆದು, ಮೋದಿಯವರನ್ನೇ ಹೀಯಾಳಿಸಿ, ಕೊನೆಗೆ ಒಬ್ಬ ಕಾರ್ಯಕರ್ತನ ವಿರುದ್ಧ ಸೋತು, ಈಗ ಬಿಜೆಪಿಗೆ ಮರಳಿ ಬೆಳಗಾವಿ ರಾಜಕಾರಣದಲ್ಲೂ ಕೈಯಾಡಿಸಿ ಎಲ್ಲವೂ ನಮಗೆ ಇರಲಿ ಎಂದು ಬಯಸಿ ಬರುತ್ತಿರುವ ಸ್ವಾರ್ಥಿಗಳನ್ನು ರತ್ನಗಂಬಳಿ ಹಾಕಿ ಸ್ವಾಗತಿಸಬೇಕೆ ?
ಬನ್ನಿ ಈ ಅನ್ಯಾಯದ ವಿರುದ್ಧ ತೊಡೆತಟ್ಟೋಣ.
ಸಮಾನ ಮನಸ್ಕರು, ನಮ್ಮ ಬೆಂಬಲಿಗರು, ಸ್ಥಳೀಯ ನಾಯಕತ್ವ ಬಯಸಿ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವ ಬೆಳಗಾವಿಯ ಎಲ್ಲ ಮೋದಿ ಮತದಾರರು ಇದೇ ಶನಿವಾರ ಬೆಳಗಾವಿಯಲ್ಲಿ ಸೇರೋಣ. ಗಟ್ಟಿಯಾದ ನಿರ್ಧಾರ ಮಾಡಿ ನಮ್ಮೂರಿನ ನ್ಯಾಯಕ್ಕಾಗಿ ನಾವೇ ಅಖಾಡಕ್ಕಿಳಿಯೋಣ”
ಮಹಾಂತೇಶ ವಕ್ಕುಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ –
https://fb.watch/r4CMDiS-R-/?mibextid=Nif5oz
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ