Kannada NewsKarnataka News

ನಕಲಿ ಹ್ಯೂಮನ್ ರೈಟ್ಸ್ ಸದಸ್ಯರ ಬಂಧನ

ನಕಲಿ ಹ್ಯೂಮನ್ ರೈಟ್ಸ್ ಸದಸ್ಯರ ಬಂಧನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ನ್ಯಾಷನಲ್ ಹ್ಯೂಮನ್ ರೈಟ್ಸ ಕಮೀಟಿ ಆಫ್ ಇಂಡಿಯಾದ ಸದಸ್ಯರೆಂದು ಹೇಳಿ ಅಂಗನವಾಡಿ ಕೇಂದ್ರಗಳಿಗೆ ಭೆಟ್ಟಿ ನೀಡಿ, ೨ಲಕ್ಷ ಹಣ ನೀಡಲು ಒತ್ತಾಯಿಸಿ, ಹೆದರಿಸಿ ಹಣ ದೋಚಲು ಯತ್ನಿಸಿದ ೫ ಜನರನ್ನು ಬಂಧಿಸಲಾಗಿದೆ.

ತಾವು ನ್ಯಾಷನಲ್ ಹ್ಯೂಮನ್ ರೈಟ್ಸ ಕಮೀಟಿ ಆಫ್ ಇಂಡಿಯಾ ಸದಸ್ಯರೆಂದು ಹೇಳುತ್ತ ಬಂದ ಬೆಳಗಾವಿ ಶಹಾಪುರದ ವಿಶಾಲ ಅಲಿಯಾಸ್ ಶಾಬು ತಂದೆ ಶ್ರೀಕಾಂತ ದೇವಲತ್ಕರ [೪೯], ಶಾಸ್ತ್ರೀನಗರದ ವಾಸು ತಮ್ಮಣ್ಣಾ ರೇವಣಕರ [೩೨],  ಶಾಸ್ತ್ರೀನಗರದ ಶಂಕರ ಗುಂಡು ಕಾಕತ್ಕರ್ [೪೦], ಸದಾಶಿವನಗರದ ನಾಗಭೂಷಣ ಪಾಂಡುರಂಗ ಅರ್ಕಸಾಲಿ [೩೮], ಶಾಸ್ತ್ರಿನಗರದ ರಾಹುಲ ರಾಜು ದಿವಾಕರ [೧೯] ಬಂಧಿತರು.

ಇವರು ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಟಿ ಆಫ್ ಇಂಡಿಯಾ ಎಂದು ಲೋಗೋ ಅಂಟಿಸಿರುವ ಕೋಟುಗಳನ್ನು ಧರಿಸಿಕೊಂಡು, ೨ ಮೋಟಾರ್ ಸೈಕಲ್‌ಗಳ ಮೇಲೆ ಹಲಗಾ ಗ್ರಾಮಕ್ಕೆ ಬಂದು ಅಂಗನವಾಡಿ ಕೇಂದ್ರ ಸಂಖ್ಯೆ ೧೯೧ ನೇದ್ದರಲ್ಲಿ ಪ್ರವೇಶ ಮಾಡಿ ರೇಖಾ ರಾಜೇಂದ್ರ ಗಳಗ (ಫಿರ್ಯಾದಿ) ಇವರ ಕೈಯಲ್ಲಿದ್ದ ಮೊಬೈಲ್ ಫೋನ್ ಕಸಿದುಕೊಂಡು ಸಾಮಾಗ್ರಿಗಳ ಕೋಣೆಯ ಕೀಲಿ ತೆಗೆಸಿ ಒಳಗಡೆ ಚೆಕ್ ಮಾಡಿ, ಇಷ್ಟೇಕೆ ರೇಷನ್ ಇಟ್ಟುಕೊಂಡಿದ್ದಿರಿ ಎಂದು ಮರಾಠಿಯಲ್ಲಿ ಪ್ರಶ್ನಿಸಿದ್ದಾರೆ.

ಅವರನ್ನು ಬೆದರಿಸಿ, ಸಾಮಾಗ್ರಿಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ನಂತರ ಮನೆಯನ್ನು ಚೆಕ್ ಮಾಡಿ ಪ್ರೆಸ್ ಮತ್ತು ಮೀಡಿಯಾದಲ್ಲಿ ಹಾಕಿ ನಿಮ್ಮ ಅಕ್ರಮವನ್ನು ಬಯಲು ಮಾಡುತ್ತೇವೆ ಎಂದು ಹೇಳಿ ಹೆದರಿಸಿದ್ದಾರೆ.

ಹಲಗಾ ಗ್ರಾಮದಲ್ಲಿರುವ ಇನ್ನೂ ೬ ಅಂಗನವಾಡಿ ಕೇಂದ್ರಗಳನ್ನು ಚೆಕ್ ಮಾಡಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿ ನಿಮ್ಮ ಮೇಲಾಧಿಕಾರಿಗಳಿಗೆ, ಪೊಲೀಸ್ ಠಾಣೆಗೆ ಯಾರಿಗೂ ಹೇಳಬಾರದೆಂದರೆ ಪ್ರತಿಯೊಬ್ಬರು ೨ ಲಕ್ಷ ರೂಪಾಯಿಗಳನ್ನು ಕೊಟ್ಟರೆ ನಿಮ್ಮ ನೌಕರಿ ಉಳಿಸಿಕೊಡುತ್ತೇವೆ.

ನಿಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ, ಇಲ್ಲದಿದ್ದಲ್ಲಿ ಪೊಲೀಸ್ ಠಾಣೆಗೆ ದೂರು ಕೊಟ್ಟು, ಮೀಡಿಯಾದಲ್ಲಿ ಬರುವಂತೆ ಮಾಡುತ್ತೇವೆ ಎಂದಿದ್ದಾರೆ.

ಹಣ ನೀಡಲು ಒತ್ತಾಯಿಸಿ, ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮೀಟಿ ಹೆಸರಿನಲ್ಲಿ ಜನರಿಗೆ ವಂಚಿಸಿ ಹಣ ದೋಚಲು ಪ್ರಯತ್ನಿಸುತ್ತಿದ್ದುದರಿಂದ ಗ್ರಾಮಸ್ಥರಿಗೆ ಅನುಮಾನ ಬಂದಿದೆ.

ಜನರೇ ಇವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಅವರನ್ನು ವಿಚಾರಣೆಗೆ ಒಳಪಡಿಸಿದ   ಹಿರೇಬಾಗೇವಾಡಿ ಠಾಣೆ ಪೊಲೀಸರು, ತನಿಖೆಯನ್ನು ಮುಂದುವರೆಸಿ ೦೨ ಮೋಟರ್ ಸೈಕಲ್, ಐಡಿ ಕಾರ್ಡ್, ಕೋಟುಗಳನ್ನು ವಶಪಡಿಸಿಕೊಂಡು ಆರೋಪಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button