*ಮನರೇಗಾ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ*
ಪ್ರಗತಿವಾಹಿನಿ ಸುದ್ದಿ: ರಾಯಬಾಗ ತಾಲೂಕಿನ ಮೊರಬ ಹಾಗೂ ಕೊಳಿಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನರೇಗಾ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಬುಧವಾರ ಜಿಪಂ ಸಿಇಒ ರಾಹುಲ್ ಶಿಂಧೆ ಭೇಟಿ ನೀಡಿ ಪರಿಶೀಲಿಸಿದರು.
ಮೊರಬ ಗ್ರಾಪಂ ವ್ಯಾಪ್ತಿಯ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಮನರೇಗಾ ಕೂಲಿಕಾರರ ಕೆಲಸದ ಸಮಯದಲ್ಲಿ ಅವರ ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡುವ ಉದ್ದೇಶದಿಂದ ಪ್ರಾರಂಭಿಸಿರುವ ಕೂಸಿನ ಮನೆ ಚೆನ್ನಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಸೂಚಿಸಿದ ಅವರು, ಕೂಸಿನ ಮನೆ ನಿರ್ವಹಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಬಳಿಕ ಮೊರಬ ಗ್ರಾಪಂ ವ್ಯಾಪ್ತಿಯಲ್ಲಿನ ಕಾಲುವೆ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, 400 ಜನ ಕೂಲಿಕಾರರನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಮನರೇಗಾದಡಿ ಅರ್ಹ ಕೂಲಿಕಾರರಿಗೆ ಕೆಲಸ ನೀಡಬೇಕು. ಈಗಾಗಲೇ ಕೆಲಸ ಬರುವ ಎಲ್ಲ ಕೂಲಿಕಾರರಿಗೆ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಕಿಟ್ ಸೇರಿದಂತೆ ಕಾಮಗಾರಿ ಸ್ಥಳ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಮನರೇಗಾ ಕೂಲಿಕಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಲೋಕಸಭೆ ಚುನಾವಣೆಗೆ ಮೇ 7 ರಂದು ನಡೆಯಲಿರುವ ಮತದಾನದ ದಿನದಂದು ತಪ್ಪದೇ ಎಲ್ಲರೂ ಮತದಾನ ಮಾಡಬೇಕು. ಜತೆಗೆ ತಾವೂ ಕೂಡ ಮತ್ತೊಬ್ಬರಿಗೆ ಮತದಾನ ಮಾಡುವಂತೆ ತಿಳುವಳಿಕೆ ಮಾಡಬೇಕು ಎಂದು ತಿಳಿಸಿದರು.
ಬಳಿಕ ಕೋಳಿಗುಡ್ಡ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾದಡಿ ಕೈಗೊಂಡ ಪವಿತ್ರ ವನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಜಿಪಂ ಸಿಇಒ ರಾಹುಲ್ ಶಿಂಧೆ ಪರಿಶೀಲಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ತಾಪಂ ಇಒ ಆನಂದ ಬಾಲಪ್ಪನ್ನವರ, ಸಹಾಯಕ ನಿರ್ದೇಶಕ(ಗ್ರಾಉ) ಅರುಣ ಮಾಚಕನ್ನವರ, ಗ್ರಾಪಂ ಅಧ್ಯಕ್ಷ ಶರಣಗೌಡ ಪಾಟೀಲ, ಐಇಸಿ ಸಂಯೋಜಕ ಮುತ್ತುರಾಜ ಗದಾಡಿ, ಪಿಡಿಒಗಳಾದ ರಾಘವೇಂದ್ರ ಮೊರಬ, ಯಲ್ಲಾಲಿಂಗ ಅಸೊಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ