Belagavi NewsBelgaum NewsElection NewsKannada NewsKarnataka NewsPolitics

ಗೋಕಾಕ್ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಮತ ಯಾಚನೆ ; ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ

ಗೋಕಾಕ ತಾಲೂಕಿನ ಹೂಲಿಕಟ್ಟಿಯ ಶ್ರೀ ಶಿವಲಿಂಗೇಶ್ವರ ಕುಮಾರದೇವರ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.

 ಪ್ರಗತಿವಾಹಿನಿ ಸುದ್ದಿ, *ಗೋಕಾಕ್* : ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನ ಪುಣ್ಯಭೂಮಿ. ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಜಯಗಳಿಸಿದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾದರಿಯಲ್ಲಿ ಇಡೀ ಬೆಳಗಾವಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ಗೋಕಾಕ್ ವಿಧಾನಸಭಾ ಕ್ಷೇತ್ರದ  ವ್ಯಾಪ್ತಿಯಲ್ಲಿ ಸಚಿವರು ಬಿರುಸಿನ ಪ್ರಚಾರ ನಡೆಸಿದರು. ಹೋದಲೆಲ್ಲಾ ಸಚಿವರಿಗೆ ಸಾರ್ವಜನಿಕರು ಅದ್ದೂರಿ ಸ್ವಾಗತ ನೀಡಿದರು. 

ಗ್ಯಾರಂಟಿ ಯೋಜನೆಗಳಿಗೆ ಇನ್ನಷ್ಟು ಬಲ ತುಂಬಬೇಕೆಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ  ಜಾರಿಗೆ ತಂದಿದ್ದೇವೆ. ಮಧ್ಯವರ್ತಿಗಳ ಕಾಟ ಇಲ್ಲದೆ ನಮ್ಮ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ ಎಂದು ಸಚಿವರು ಹೇಳಿದರು. 

 *ಬೆಳಗಾವಿ ಜಿಲ್ಲೆಯ ಸ್ವಾಭಿಮಾನಿ ಪ್ರಶ್ನೆ* 

ಈ‌ ಚುನಾವಣೆ ಬೆಳಗಾವಿ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ. ಏಕೆಂದರೆ, ಬಿಜೆಪಿ ಅಭ್ಯರ್ಥಿ ಹೊರಗಿನವರು‌. ಹುಬ್ಬಳ್ಳಿಯವರನ್ನ ಕರೆ ತಂದು ಚುನಾವಣೆಗೆ ನಿಲ್ಲಿಸಲಾಗಿದೆ. ಬೆಳಗಾವಿಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇತ್ತೇ ಎಂದು ಪ್ರಶ್ನಿಸಿದರು. ಬೆಳಗಾವಿಯ ಮನೆ ಮಗನಿಗೆ ಒಂದು ಅವಕಾಶ ಕೊಡಿ. 25 ವರ್ಷಗಳಲ್ಲಿ ಬಿಜೆಪಿ ಸಂಸದರು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಐದು ವರ್ಷಗಳಲ್ಲಿ ನನ್ನ ಮಗ ಮಾಡಿ ತೋರಿಸುತ್ತಾನೆ ಎಂದು ಹೇಳಿದರು.

 *ನಮ್ಮ ಜಿಲ್ಲೆಯರೇ ಬೆಳಗಾವಿ ಪ್ರತಿನಿಧಿಸಬೇಕು* 

ಸ್ವಾಭಿಮಾನಿಗಳ ಜಿಲ್ಲೆ ಬೆಳಗಾವಿಯನ್ನು ನಮ್ಮ ಜಿಲ್ಲೆಯವರೇ ಪ್ರತಿನಿಧಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಹೇಳಿದರು. 

ಜಿಲ್ಲೆಯ ಅಭಿವೃದ್ಧಿಗೆ ನನ್ನದೇ  ಕನಸು ಕಟ್ಟಿಕೊಂಡಿದ್ದೇನೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ. ಗೋಕಾಕ್ ಕ್ಷೇತ್ರದ ಮತದಾರರು ನನಗೆ ಮುನ್ನಡೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು. 

ಗೋಕಾಕ್ ಕ್ಷೇತ್ರದ ಅಭಿವೃದ್ಧಿಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಶ್ರಮ ಹಾಕುವೆ. ನಿಮ್ಮೆಲ್ಲರ ಬೆಂಬಲ ನನಗೆ ಬೇಕು ಎಂದು ಹೇಳಿದರು. ಹೊರಗಿನ ಅಭ್ಯರ್ಥಿಗಿಂತ ಸ್ಥಳೀಯ, ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. 25  ವರ್ಷಗಳಿಂದ ಬಿಜೆಪಿ ಸಂಸದರಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದರು. ಇದೀಗ ಹೊರಗಿನ ಅಭ್ಯರ್ಥಿಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದರು.

ಖನಗಾಂವದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ನಿಂಗಪ್ಪ ಬುಳ್ಳಿ ಮಾತನಾಡಿ, ಗೃಹಲಕ್ಷ್ಮಿಯಂಥ ಯೋಜನೆಯನ್ನು ಜಾರಿಗೊಳಿಸಲು ಶ್ರಮವಹಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರಿಗೆ ಮುನ್ನಡೆ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು.

 *ಮುಖಂಡರ ಮನೆಗೆ ಭೇಟಿ*

ಗೋಕಾಕ್ ತಾಲೂಕಿನ ಬೆಣಚನಮರಡಿ ಗ್ರಾಮದಲ್ಲಿರುವ ಭಜನ ಮಂಡಳಿ ರಾಜ್ಯಾಧ್ಯಕ್ಷರಾದ ಶಂಕರ್ ಗಿಡ್ನವರ್ ಅವರ ನಿವಾಸಕ್ಕೆ ಸಚಿವರು ಭೇಟಿ ನೀಡಿದರು. ಬಳಿಕ ಖನಗಾಂವ ಬಳಿಯ ಮಿಡಕನಹಟ್ಟಿ ಗ್ರಾಮದ ಅಪ್ಪಯ್ಯಪ್ಪ ದಂಡಿನ್ ಮನೆಗೆ ಭೇಟಿ ನೀಡಿ ಬೆಂಬಲ ನೀಡುವಂತೆ ಮನವಿ ಮಾಡಿದರು. 

 ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ ಸೇರಿದಂತೆ ಹಲವು ಮುಖಂಡರು ದಿನವೀಡಿ ಸಾಥ್ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button