Kannada NewsKarnataka NewsLatest

ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ?

ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ?

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನದ ರೇಸ್‌ನಲ್ಲಿದ್ದ ಬಿಜೆಪಿ ಹಿರಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್‌ಗೆ ಹೊಸ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆಯೇ ಬುಗಿಲೆದ್ದ ಅಸಮಾಧಾನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್‌ಗೆ ಸರ್ಕಾರದಿಂದ ನಾಮನಿರ್ದೇಶನ ಮಾಡಿರುವುದು ಇಂಬು ನೀಡಿದೆ.
ಇದೇ ಅಗಸ್ಟ್ ೩೧ ರಂದು ನಡೆಯುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್)ದ ಚುನಾವಣೆಯಲ್ಲಿ ೧೬ ಜನರು ಮತದಾನದ ಹಕ್ಕು ಪಡೆದಿದ್ದು, ಅದರಲ್ಲಿ ೧೨ ಜನರು ವಿವಿಧ ಒಕ್ಕೂಟಗಳ ಆಡಳಿತ ಮಂಡಳಿಯ ಸದಸ್ಯರಿದ್ದು, ಒಬ್ಬರು ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಇಬ್ಬರು ಅಧಿಕಾರಿಗಳು ಮತ್ತು ಒಬ್ಬರು ಎನ್‌ಡಿಡಿಬಿ ಸದಸ್ಯರು ಸೇರಿದ್ದಾರೆ.

ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್‌ಗೆ ನಿರ್ದೇಶಕರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ. ಶನಿವಾರ ೩೧ ರಂದು ನಡೆಯುವ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಸ್ಪರ್ಧೆ ಮಾಡಲಿದ್ದು, ಉಳಿದ ಎಲ್ಲ ಸದಸ್ಯರ ಬೆಂಬಲ ಗಳಿಸುವ ನಿಟ್ಟಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

11 ಸದಸ್ಯರು ಬೆಂಬಲಕ್ಕೆ

ಈಗಾಗಲೇ ಕೆಎಂಎಫ್‌ನಲ್ಲಿ ೧೬ ಸ್ಥಾನಗಳ ಪೈಕಿ ೭ ಜನರು ಚುನಾಯಿತ ನಿರ್ದೇಶಕರಾಗಿದ್ದು, ಇಬ್ಬರು ಅಧಿಕಾರಿಗಳು ಹಾಗೂ ತಮ್ಮ ನಾಮನಿರ್ದೇಶಿತ ಸಹಿತ ಒಟ್ಟು ೧೦ ಜನರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ಇನ್ನಿಬ್ಬರ ನಿರ್ದೇಶಕರ ಬೆಂಬಲವೂ ತಮಗೆ ದೊರೆಯುವ ವಿಶ್ವಾಸವನ್ನು ಬಾಲಚಂದ್ರ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ ಎಂದು ಪ್ರಗತಿವಾಹಿನಿಗೆ ಮಾಹಿತಿ ದೊರಕಿದೆ.

ಒಟ್ಟಿನಲ್ಲಿ ಎಲ್ಲ ೧೬ ಜನ ಸದಸ್ಯರ ವಿಶ್ವಾಸವನ್ನು ಗಳಿಸಿಕೊಂಡು ಪಕ್ಷಾತೀತವಾಗಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಅಪೇಕ್ಷೆಯನ್ನು ಅವರು ಹೊಂದಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ರಚನೆಯಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ಬಾಲಚಂದ್ರ ವಂಚಿತರಾಗಿದ್ದರು.  ತಾವು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ.  ಕಷ್ಟಪಟ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬೇಕೆಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಜನರ ಭಾವನೆಗಳ ಅನುಸಾರ ಉತ್ತಮ ಆಡಳಿತ ನೀಡಬೇಕು. ಬಾಕಿ ಉಳಿದಿರುವ ೩ ವರ್ಷ ೧೦ ತಿಂಗಳ ಅವಧಿಯನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಬುಧವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನನಗೆ ಕೆಎಂಎಫ್ ಹೊಸ ಜವಾಬ್ದಾರಿಯನ್ನು ವಹಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದಿಸಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಸಚಿವರಾಗುವುದಕ್ಕಿಂತ ರೈತರ ಜೀವನಾಡಿಯಾಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವುದು ಒಂದು ಸವಾಲಿನ ಕೆಲಸವೇ ಸರಿ. ರೈತರ ಹಿತ ಕಾಪಾಡುವ ಹಾಗೂ ರೈತರು ಆರ್ಥಿಕಾಭಿವೃದ್ಧಿ ಹೊಂದಲು ರಾಜ್ಯದಲ್ಲಿಯೇ ಪ್ರಮುಖ ಸಹಕಾರ ಸಂಸ್ಥೆಯಾಗಿರುವ ಕೆಎಂಎಫ್ ಉನ್ನತಿ ಮತ್ತು ಪ್ರಗತಿಗಾಗಿ ಶ್ರಮಿಸಬೇಕೆಂಬುದು ನನ್ನ ಆಶಯವಾಗಿದೆ ಎಂದು ಬಾಲಚಂದ್ರ ಹೇಳಿದ್ದಾರೆಂದು ಗೊತ್ತಾಗಿದೆ.

ಅಗಸ್ಟ್ ೩೧ ರಂದು ಕರ್ನಾಟಕ ಹಾಲು ಮಹಾಮಂಡಳ ಕೇಂದ್ರ ಕಛೇರಿ(ಡಾ.ಎಂ.ಎಚ್.ಮರಿಗೌಡ ರಸ್ತೆ, ಬೆಂಗಳೂರು-೨೯)ಯ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button