ನೆರೆಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರವಾಹ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರದ ನೆರೆಹಾನಿ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರಾದ ಪ್ರಕಾಶ್ ತಿಳಿಸಿದರು.
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾನುವಾರ(ಆ.26) ಸಂಚರಿಸಿ ಹಾನಿಯನ್ನು ಪರಿಶೀಲಿಸಿದ ಬಳಿಕ ಕಾಗವಾಡ ಸಮೀಪದ ಶೇಡಬಾಳ ಪ್ರವಾಸಿಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಕೇಂದ್ರ ತಂಡದ ಏಳು ಅಧಿಕಾರಿಗಳು ಮೊದಲ ದಿನವಾದ ಇಂದು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ, ಹಾನಿಯನ್ನು ಪರಿಶೀಲಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಅತ್ಯಂತ ಕೆಟ್ಟ ಪರಿಸ್ಥಿತಿ ಕಂಡುಬಂದಿದೆ. ಕಬ್ಬಿನ ಬೆಳೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಧಾರಣೆಗೆ ಸಾಕಷ್ಟು ಸಮಯ ಬೇಕು ಎಂದರು.
ಕೇಂದ್ರ ತಂಡದಿಂದ ಮತ್ತೊಮ್ಮೆ ಪರಿಶೀಲನೆ:
ಪ್ರವಾಹ ಮತ್ತು ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ರಾಜ್ಯ ಸರ್ಕಾರದ ಪರಿಹಾರ ಪ್ರಸ್ತಾವ(ಮನವಿ) ಆಧರಿಸಿ ಮತ್ತೊಮ್ಮೆ ಕೇಂದ್ರ ತಂಡವು ಪರಿಶೀಲನೆ ಕೈಗೊಳ್ಳಲಿದೆ. ಆ ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಾಶ್ ತಿಳಿಸಿದರು.
ಬೆಳೆಹಾನಿಯ ಸಮೀಕ್ಷೆ ನಡೆದಿದ್ದು, ರಾಜ್ಯ ಸರ್ಕಾರದ ವರದಿಯನ್ನು ಆಧರಿಸಿ ಕೇಂದ್ರ ತಂಡದ ಮತ್ತೊಂದು ಭೇಟಿಯನ್ನು ನಿಗದಿಪಡಿಸಲಾಗುವುದು ಎಂದರು.
ರಾಜ್ಯ ಸರ್ಕಾರ ನಾಳೆಯೇ ಹಾನಿ ಕುರಿತ ಪ್ರಸ್ತಾವ ಸಲ್ಲಿಸಲಿದ್ದು, ನಂತರ ಎರಡನೇ ಭೇಟಿಯ ಬಗ್ಗೆ ಸಮಯ ನಿಗದಿಪಡಿಸಲಾಗುವುದು.
ಪ್ರವಾಹಬಾಧಿತ ಜನರ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಇದರಿಂದಾಗಿ ಜನ-ಜಾನುವಾರುಗಳ ಜೀವರಕ್ಷಣೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುಂಚೆ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಸೇತುವೆ ಬಳಿ ಬೆಳೆಹಾನಿಯನ್ನು ಪರಿಶೀಲಿಸಿದರು.
ಇದಾದ ಬಳಿಕ ಮಾಂಜರಿಯ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ತಂಡವು ಅಲ್ಲಿ ಮನೆಗಳ ಹಾನಿಯನ್ನು ಪರಿಶೀಲಿಸಿತು. ನಂತರ ಶಿರಗುಪ್ಪಿಯ ದೂಧ್ ಗಂಗಾ ನದಿ ಬಳಿಯ ರಸ್ತೆ ಹಾಗೂ ಸೇತುವೆಯ ಹಾನಿಯನ್ನು ವೀಕ್ಷಿಸಿದರು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಮಾಂಜರಿ ಸೇತುವೆ ಬಳಿ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಹಾನಿ ಕುರಿತು ಕೇಂದ್ರ ತಂಡಕ್ಕೆ ವಿವರಿಸಿದರು.
ಮೂರು ತಿಂಗಳು ಬತ್ತಿದ್ದ ಕೃಷ್ಣಾ ನದಿ ದಿಢೀರನೆ ಭೋರ್ಗರೆದು ರೈತರ ಬದುಕು ಹಾಳಾಯಿತು.
ಪದೇ ಪದೇ ಪ್ರವಾಹದಿಂದ ಜಿಲ್ಲೆಯ ರೈತರಿಗೆ ನಿರಂತರ ಹಾನಿಯಾಗುತ್ತಿದೆ.
ರಾಜ್ಯಕ್ಕೆ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಹಾನಿಯಾಗಿದೆ. ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಲು ಕವಟಗಿಮಠ ಮನವಿ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರವಾಹದಿಂದ ಉಂಟಾದ ಹಾನಿಯನ್ನು ಹಾಗೂ ಸಂತ್ರಸ್ತರ ಪುನರ್ವಸತಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಂಡ
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಕ್ಕಿಂತ ಮುಂಚೆ ಬೆಳಗಾವಿಯ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾಹಿತಿ ನೀಡಿದರು.
ರಕ್ಷಣಾ ಕಾರ್ಯ, ಮನೆಗಳ ಕುಸಿತ, ರಸ್ತೆ-ಸೇತುವೆ, ಶಾಲೆಗಳು ಸೇರಿದಂತೆ ಮೂಲಸೌಕರ್ಯಗಳ ಹಾನಿಯನ್ನು ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.
ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ಕಾರ್ಯದರ್ಶಿ ಶ್ರೀ ಪ್ರಕಾಶ್, ವಿತ್ತ ಇಲಾಖೆಯ ಎಫ್.ಸಿ.ಡಿ. ನಿರ್ದೇಶಕರಾದ ಎಸ್.ಸಿ.ಮೀನಾ, ಕೃಷಿ ಮತ್ತು ರೈತರ ಸಹಕಾರ ಇಲಾಖೆಯ ಎಣ್ಣೆ ಬೀಜಗಳ ಕಚೇರಿಯ ಜಂಟಿ ನಿರ್ದೇಶಕರಾದ ಡಾ.ಪುನ್ನುಸ್ವಾಮಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀಕ್ಷ ಎಂಜಿನಿಯರ್ ಜಿತೇಂದ್ರ ಪನ್ವಾರ್, ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ವಿಜಯಕುಮಾರ್, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಕೇಂದ್ರ ಇಂಧನ ಇಲಾಖೆಯ ಉಪ ನಿರ್ದೇಶಕರಾದ ಓ.ಪಿ.ಸುಮನ್ ಕೇಂದ್ರ ಅಧ್ಯಯನ ತಂಡದಲ್ಲಿದ್ದರು.
ತಂಡವು ಪ್ರವಾಹದಿಂದ ಬಾಧಿತಗೊಂಡಿರುವ ಚಿಕ್ಕೋಡಿ, ಕಾಗವಾಡ, ರಾಯಬಾಗ, ಗೋಕಾಕ ಮತ್ತು ರಾಮದುರ್ಗ ತಾಲ್ಲೂಕಿನಲ್ಲಿ ಉಂಟಾಗಿರುವ ಹಾನಿಯ ಕುರಿತು ಅಧ್ಯಯನ ನಡೆಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ