Belagavi NewsBelgaum NewsKannada NewsKarnataka News

ಕಾಡಾನೆ ಹಾವಳಿಯಿಂದ ಬೆಳೆನಾಶ: ಸಂಕಷ್ಟ ಅನುಭವಿಸುತ್ತಿರುವ ಕಬನಾಳಿ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಜಾಂಬೋಟಿ ಹೋಬಳಿ ವ್ಯಾಪ್ತಿಯ ಕಬನಾಳಿ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಕಳೆದ ೨೦-೨೫ ದಿನಗಳಿಂದ ಬೀಡುಬಿಟ್ಟಿದೆ.

ಹಗಲು ಹೊತ್ತಿನಲ್ಲಿ ಕಾನನದಲ್ಲಿ ವಿರಮಿಸುವ ಕಾಡಾನೆ ಸಂಜೆಯಾಗುತ್ತಲೇ ಕಬನಾಳಿ ಗ್ರಾಮದ ಬಳಿ ಗೋಚರಿಸಿ ಗ್ರಾಮದ ರೈತರ ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತಿದೆ. ಕಾಡಾನೆ ಹಾವಳಿಯಿಂದ ಹೈರಾಣಾದ ಕಬನಾಳಿ ಗ್ರಾಮಸ್ಥರು ಆನೆಯನ್ನು ತಮ್ಮೂರಿನಿಂದ ದೂರ ಓಡಿಸುವಂತೆ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ನೀಲಾವಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟ ಗ್ರಾಮ ಕಬನಾಳಿಯ ಜನಸಂಖ್ಯೆ ೬೦೦ರ ಆಸುಪಾಸಿನಲ್ಲಿದೆ. ತಾಲೂಕು ಕೇಂದ್ರದಿಂದ ೧೬ ಕಿಮೀ ದೂರದಲ್ಲಿರುವ ಈ ಗ್ರಾಮ ಗ್ರಾಮ ಪಂಚಾಯ್ತಿ ಕಚೇರಿಯಿಂದ ೪ ಕಿಮೀ ಅಂತರದಲ್ಲಿದೆ. ಗ್ರಾಮದ ಸುತ್ತಮುತ್ತ ಸಮೃದ್ಧವಾದ ಪ್ರಾಕೃತಿಕ ವನಸಿರಿಯನ್ನು ಹೊಂದಿರುವ ಈ ಗ್ರಾಮ ವರ್ಷದ ೧೨ ತಿಂಗಳೂ ನೈಸರ್ಗಿಕವಾದ ನೀರಿನ ಸೌಲಭ್ಯ ಹೊಂದಿದೆ. ಅರಣ್ಯದ ಒಳಗಿನ ಸಣ್ಣಪುಟ್ಟ ತೊರೆಗಳು ಸೇರಿ ಕಬನಾಳಿ ಗ್ರಾಮದ ಬಳಿ ಹಳ್ಳವಾಗಿ ರೂಪಾಂತರಗೊಂಡಿವೆ. ಈ ಹಳ್ಳ ಮುಂದೆ ಸಾಗಿ ಮಹದಾಯಿ ನದಿಯನ್ನು ಸೇರುತ್ತದೆ. ಗ್ರಾಮದ ಜನರು ಈ ಹಳ್ಳದ ನೀರನ್ನು ಉಪಯೋಗಿಸಿ ಗ್ರಾಮದ ಸುತ್ತಮುತ್ತಲಿನ ಐದಾರು ನೂರು ಎಕರೆಯಷ್ಟು ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿ ಭತ್ತ, ಮೆಣಸಿನಕಾಯಿ, ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಳೆದೊಂದು ತಿಂಗಳ ಹಿಂದೆ ದಾಂಡೇಲಿ ಅರಣ್ಯದ ತನ್ನ ಹಿಂಡಿನಿಂದ ಬೇರ್ಪಟ್ಟ ಕಾಡಾನೆಯೊಂದು ತಾಲೂಕಿನ ಹತ್ತರವಾಡ, ಕುಣಕಿಕೊಪ್ಪ, ಬೇಕವಾಡ, ಜುಂಜವಾಡ, ನಂದಗಡ ಗ್ರಾಮಗಳ ಬಳಿ ಕಾಣಿಸಿಕೊಂಡಿತ್ತು. ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಆತಂಕ ಮೂಡಿಸಿದ್ದ ಕಾಡಾನೆ ನಂತರ ಸಾವರಗಾಳಿ, ಮಾಣಿಕವಾಡಿ, ಶೇಡೇಗಾಳಿ, ನೇರಸಾ ಮಾರ್ಗವಾಗಿ ಸಂಚರಿಸಿ ಕಬನಾಳಿ ಗ್ರಾಮದ ಬಂದು ತಲುಪಿದೆ.

ಆನೆಗೆ ಈ ಗ್ರಾಮದ ಸುತ್ತಮುತ್ತ ಕುಡಿಯುವ ನೀರಿನ ವ್ಯವಸ್ಥೆ, ಹೊಟ್ಟೆ ತುಂಬಿಸಿಕೊಳ್ಳಲು ಸಾಕಷ್ಟು ಆಹಾರ ಸಿಗುತ್ತಿರುವ ಕಾರಣ ಈ ತಿಂಗಳ ಮೊದಲ ವಾರದಿಂದ ಇಲ್ಲಿಯೇ ಠಿಕಾಣಿ ಹೂಡಿದೆ. ನಿತ್ಯ ಹಗಲಿನಲ್ಲಿ ಅರಣ್ಯದೊಳಗೆ ಹೊಕ್ಕು ವಿರಮಿಸುವ ಆನೆ ಸಂಜೆಯಾಗುತ್ತಲೇ ಗ್ರಾಮದ ಸುತ್ತಲಿನ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದೆ. ಗ್ರಾಮದ ರೈತರು ಕಷ್ಟಪಟ್ಟು ಬೆಳೆಸಿರುವ ಬೆಳೆಗಳನ್ನು ತಿಂದು-ತುಳಿದು ಹಾಳು ಮಾಡುತ್ತಿದೆ. ಇದರಿಂದಾಗಿ ಗ್ರಾಮದ ರೈತರು ತೀವ್ರ ಬೆಳೆಹಾನಿ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಮದ ಜನತೆ ಮೇ ೭ರಂದು ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ನಮ್ಮೂರಿಗೆ ಆನೆ ಬಂದು ಬೆಳೆಹಾನಿ ಮಾಡುತ್ತಿರುವ ವಿಷಯವನ್ನು ಭಾಗದ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಗ್ರಾಮದ ರೈತರ ಜಮೀನುಗಳಿಗೆ ಬಂದು ಹಾನಿಯ ಪ್ರಮಾಣ ವೀಕ್ಷಿಸಿದ್ದಾರೆ. ಆದರೆ ಹಾನಿ ಉಂಟಾದ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಗ್ರಾಮಸ್ಥರಿಗೆ ಉಪಟಳ ನೀಡುತ್ತಿರುವ ಆನೆಯನ್ನೂ ಓಡಿಸಿಲ್ಲ. ಹೀಗಾಗಿ ಊರಿನವರೆಲ್ಲರೂ ಸೇರಿ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಗ್ರಾಮದ ನಿವಾಸಿ, ನೀಲಾವಡೆ ಗ್ರಾಪಂನ ಮಾಜಿ ಗ್ರಾಪಂ ಅಧ್ಯಕ್ಷ ರಾಜು ಧುರಿ ಹೇಳಿದ್ದಾರೆ.

ಕಬನಾಳಿ ಬಳಿ ಆಗಮಿಸಿರುವ ಕಾಡಾನೆಯನ್ನು ಅಲ್ಲಿಂದ ಬೇರೆಡೆ ಓಡಿಸುವ ವಿಷಯವನ್ನು ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಮತ್ತು ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ತಮ್ಮ ಚುನಾವಣಾ ಪ್ರಚಾರದ ವಿಷಯ ಮತ್ತು ರಾಜಕೀಯ ಅಸ್ತ್ರವನ್ನಾಗಿ ಪರಿಗಣಿಸಿದ್ದಾರೆ. ಡಾ.ಅಂಜಲಿ ಅವರ ಸೂಚನೆಯ ಮೇರೆಗೆ ಕಬನಾಳಿ ಗ್ರಾಮಸ್ಥರ ಸಹಯೋಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಗ್ರಾಮಸ್ಥರ ಜೊತೆ ತಾವಿರುವುದಾಗಿ ಭರವಸೆ ನೀಡಿ ಬಂದಿದೆ.

ಇತ್ತ ಶಾಸಕ ಹಲಗೇಕರ ಈ ವಿಷಯದ ಬಗ್ಗೆ ಡಿಸಿಎಫ್ ಕಲ್ಲೋಳಕರ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದು ಹೊರತುಪಡಿಸಿದರೆ ಆನೆಯ ಉಪಟಳದಿಂದ ತೊಂದರೆಗೊಳಗಾದ ಕಬನಾಳಿ ಗ್ರಾಮಸ್ಥರಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೊತೆಗೆ ಮಾಜಿ ಶಾಸಕ ಅರವಿಂದ ಪಾಟೀಲ ಸೇರಿದಂತೆ ತಾಲೂಕಿನ ಉಳಿದ ಬಿಜೆಪಿ ಮುಖಂಡರು ಕಾಡಾನೆಯ ವಿಷಯದಲ್ಲಿ ಜಾಣಮೌನಕ್ಕೆ ಜಾರಿದ್ದಾರೆ. ಗ್ರಾಮಸ್ಥರ ಒಳಿತಿಗಾಗಿ ಇಬ್ಬರೂ ಜನಪ್ರತಿನಿಧಿಗಳು ಪ್ರಯತ್ನ ಪಟ್ಟಿದ್ದರೂ ಪರಿಣಾಮ ಮಾತ್ರ ಶೂನ್ಯ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಕಬನಾಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿರುವ ಕಾಡಾನೆಯ ಚಲನವಲನದ ಮೇಲೆ ಇಲಾಖೆಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಗ್ರಾಮದ ಸುತ್ತಮುತ್ತ ಇಲಾಖೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಹಳ ದಿನಗಳಿಂದ ಆನೆ ಈ ಭಾಗದಲ್ಲಿ ತಂಗಿರುವ ಮತ್ತು ರೈತರ ಬೆಳೆಹಾನಿ ಮಾಡುತ್ತಿರುವ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಕಾಡಾನೆ ದಾಳಿಯಿಂದ ಉಂಟಾಗಿರುವ ಬೆಳೆಹಾನಿಗೆ ಇಲಾಖೆಯಿಂದ ಆದಷ್ಟು ಬೇಗ ಪರಿಹಾರ ವಿತರಿಸಲಾಗುತ್ತದೆ. ಕಾಡಾನೆಯನ್ನು ಕೆಣಕದಂತೆ ಮತ್ತು ಅದಕ್ಕೆ ತೊಂದರೆ ಕೊಡದಂತೆ ಕಬನಾಳಿ ಗ್ರಾಮದ ಜನರಿಗೆ ಸೂಚಿಸಲಾಗಿದೆ.
-ಸುನೀತಾ ನಿಂಬರಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಖಾನಾಪುರ.

ಕಾಡಾನೆ ನೀಡುತ್ತಿರುವ ತೊಂದರೆಯಿಂದ ಮನನೊಂದು ಮತದಾನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿರುವ ಕಬನಾಳಿ ಗ್ರಾಮಸ್ಥರ ಮನವೊಲಿಸುವ ಕಾರ್ಯವನ್ನು ಸ್ವೀಪ್ ಸಮಿತಿ ಕೈಗೊಳ್ಳಲಿದೆ. ಗ್ರಾಮಸ್ಥರ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗುತ್ತದೆ ಮತ್ತು ಚುನಾವಣಾ ಆಯೋಗದಿಂದ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಶೀಘ್ರದಲ್ಲಿ ಮಾಡಲಾಗುತ್ತದೆ.
-ಭಾಗ್ಯಶ್ರೀ ಜಹಾಗೀರದಾರ, ತಾಪಂ ಇಒ ಹಾಗೂ ಅಧ್ಯಕ್ಷೆ, ಸ್ವೀಪ್ ಸಮಿತಿ, ಖಾನಾಪುರ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button