ಪ್ರಗತಿವಾಹಿನಿ ಸುದ್ದಿ: ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ದೂರಿದರು.
ಬೆಂಗಳೂರಿನಲ್ಲಿ ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಅವರು; ಅತ್ಯಲ್ಪ ಪರಿಹಾರ ಕೊಟ್ಟು ರಾಜ್ಯದ ಜನರಿಗೆ ವಂಚನೆ ಎಸಗಿದ್ದು ಯುಪಿಎ ಸರಕಾರ ಎಂದರು.
ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ಕಡಿಮೆ ಹಣ ಕೊಟ್ಟಿದೆ ಎಂದು ಹುಯಿಲೆಬ್ಬಿಸುತ್ತಿರುವ ಕಾಂಗ್ರೆಸ್ ಸರಕಾರದ ನಡೆಯನ್ನು ಕಟುವಾಗಿ ಟೀಕಿಸಿದ ಮಾಜಿ ಮುಖ್ಯಮಂತ್ರಿಗಳು; NDRF ಮಾರ್ಗಸೂಚಿ ಪ್ರಕಾರ ₹4,860 ಕೋಟಿ ಕೊಟ್ಟರೆ ಸಾಕು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಕೇಂದ್ರ ಸರಕಾರ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ಈಗ ನೋಡಿದರೆ ನಾವು ₹18172 ಕೋಟಿ ಕೇಳಿದ್ದು ಎಂದು ಹೇಳುತ್ತಿದ್ದಾರೆ. ಇವರು ಪದೇಪದೆ ಕೇಂದ್ರ ಸರಕಾರದ ಮೇಲೆ ಗೂಭೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ನನಗಿರುವ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರದ 2004ರಿಂದ 2013ರವರೆಗಿನ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ NDRF ಮಾರ್ಗಸೂಚಿಯಂತೆ ಬರ ಪರಿಹಾರಕ್ಕಾಗಿ ಕೇವಲ ಶೇ.8ರಷ್ಟು ಹಣ ನೀಡಿದ್ದಾರೆ. ನರೇಂದ್ರ ಮೋದಿ ಅವರು ಬಂದ ಮೇಲೆ, ಅಂದರೆ; 2014ರಿಂದ ಇಲ್ಲಿಯವರೆಗೆ ಈಗ ಬಿಡುಗಡೆ ಆಗಿರುವ ₹3,454 ಕೋಟಿ ಹೊರತುಪಡಿಸಿ ಶೇ.38ರಷ್ಟು ಬರ ಪರಿಹಾರ ಹಣ ರಾಜ್ಯಕ್ಕೆ ಬಂದಿದೆ. ಕಾಂಗ್ರೆಸ್ ಸರಕಾರ 8% ಕೊಟ್ಟರೆ, ಎನ್ಡಿಎ ಸರಕಾರ 38% ಹಣ ಕೊಟ್ಟಿದೆ. ಅನ್ಯಾಯ ಯಾರಿಂದ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅಂಕಿ ಅಂಶಗಳನ್ನು ನೀಡಿದರು ಕುಮಾರಸ್ವಾಮಿ ಅವರು.
ಇವರು ಕೇಂದ್ರ ಸರಕಾರದ ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ಮಾಡುವುದನ್ನು ಬಿಟ್ಟು ಕೇಂದ್ರದಿಂದ ಬಂದಿರುವ ಹಣವನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿ ಎಂದು ಅವರು ಕಿವಿಮಾತು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ