Kannada NewsKarnataka News

ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದಕುತ್ತಾರಾ?

ಹಾಲು ಕುಡಿದ ಮಕ್ಕಳೆ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದಕುತ್ತಾರಾ?

ಪ್ರಗತಿವಾಹಿನಿ ಸುದ್ದಿ, ಅಥಣಿ – 

ಬಿಜೆಪಿಗೆ ಜನಾದೇಶವಿಲ್ಲ. ಅದಕ್ಕೆ ಅವರಿಗೆ ಸರಕಾರ ನಡೆಸುವುದಕ್ಕೆ ಯೋಗ್ಯತೆಯಿಲ್ಲ, ಅದರಲ್ಲೂ ಅಥಣಿ ಕ್ಷೇತ್ರದ ಜನರು ತಿರಸ್ಕರಿಸಿ ಬೇಡವೆಂದು ಸೋಲಿಸಿದವರನ್ನು ಅವರು ಕರೆದುಕೊಂಡು ಹೋಗಿ ಉಪಮುಖ್ಯಮಂತ್ರಿ ಮಾಡುತ್ತಾರೆ ಎಂದರೆ ಬಿಜೆಪಿ ಪಕ್ಷಕ್ಕೆ ಮಾನಾ, ಮಾರ್ಯಾದೆ ಇದೆಯಾ?  ಹಾಲು ಕುಡಿದ ಮಕ್ಕಳೆ ಬದುಕಲ್ಲಾ, ಇನ್ನು ವಿಷ ಕುಡಿದ ಮಕ್ಕಳು ಬದಕುತ್ತಾರಾ? – ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯ ನುಡಿ.
ಅಥಣಿ ತಾಲೂಕಿನ ನೆರೆ ಸಂತ್ರಸ್ತ ಸ್ಥಳ ಭೇಟಿ ಪರಿಶೀಲನೆಗೆಂದು ಆಗಮಿಸಿ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸದನದಲ್ಲಿ ಲಕ್ಷ್ಮಣ ಸವದಿ ಮಾಡಿದ ಹೇಯ ಕೃತ್ಯಕ್ಕೆ ಅಥಣಿ ಜನತೆ ಅವರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಆದರೆ ಬಿಜೆಪಿ  ಅಂತಹ ತಿರಸ್ಕರಿಸಲ್ಪಟ್ಟವರನ್ನು ಉಪಮುಖ್ಯಮಂತ್ರಿ ಪದವಿ ನೀಡಿ ಅದೇ ಜನತೆ ಮುಂದೆ ತಂದು ನಿಲ್ಲಿಸಿದ್ದು ಯಾವ ನ್ಯಾಯ ಎಂದರು.

ಲಕ್ಷ ಕೋಟಿ ನಷ್ಟ

ಈಗಾಗಲೇ ಜನರು ಪರಿಹಾರ ಕೇಂದ್ರಗಳಿಂದ ತಮ್ಮ ತಮ್ಮ ಊರಿನತ್ತ ಹೋಗುತ್ತಿದ್ದಾರೆ, ಆದರೆ ತಾಲೂಕಿನ ಸವದಿ ದರ್ಗಾ, ಸತ್ತಿ, ಮಹಿಷವಾಡಗಿ, ಝೀರೋ ಪಾಯೀಂಟ್, ನಂದೇಶ್ವರ, ಹಲ್ಯಾಳ ಹೀಗೆ ಒಂದೈದು ಕಡೆ ನಾನು ಸುತ್ತಿ ನೋಡಿದ ಪ್ರಕಾರವಾಗಿ ನೆರೆ ಸಂತ್ರಸ್ತರಿಗೆ ಈಗ ಸರಕಾರ ನೀಡುತ್ತಿರುವ ಅನುದಾನ ಅವರಿಗೆ ಸಾಲುವುದು ಕಷ್ಟ ಸಾಧ್ಯವಾಗಿದೆ , ಮುಖ್ಯಮಂತ್ರಿಗಳ ಪ್ರಕಾರ ಸುಮಾರು ೪೦ ರಿಂದ ೫೦ ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕಾರ ಸುಮಾರು ೧ ಲಕ್ಷ ಕೋಟಿಯಷ್ಟು ಅಂದಾಜು ನಷ್ಟವಾಗಿದೆ, ಮುಖ್ಯಮಂತ್ರಿಗಳ ಪ್ರಕಾರವಾದರೂ ಅವರು ಪರಿಹಾರ ಕೊಡಲು ಮುಂದಾಗಬೇಕು ಎಂದರು.
ನೆರೆ ಸಂತ್ರಸ್ತರಿಗೆ ಅವರು ಕೊಡುತ್ತಿರುವ ಅನುದಾನವು ದುಪ್ಪಟ್ಟಾಗಬೇಕು, ಮನೆ ಬಿದ್ದರೆ ಸುಮಾರು ೧೦ ಲಕ್ಷ ರೂಪಾಯಿ ಅನುದಾನ ಹಾಗೂ ಬೆಳೆಗಳಿಗೆ ಕಡಿಮೆಯೆಂದರೂ ಎಕರೆಗೆ ೫೦ ಸಾವಿರ ರೂ.ಗಳನ್ನ ಪರಿಹಾರ ರೂಪದಲ್ಲಿ ನೀಡಬೇಕು. ೨೦೦೫ ರಲ್ಲಿ ಪ್ರವಾಹ ಬಂದಾಗ ಸತ್ತಿ ಹಾಗೂ ಹಲ್ಯಾಳ ಹಳ್ಳಿಗಳು ಭಾಗಶಃ ಮುಳುಗಡೆಯೆಂದು ಘೋಷಿಸಿದ್ದರು. ಆದರೆ ಈ ಬಾರಿ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿದೆ, ಜನವಾಡ, ಮಹಿಷವಾಡಗಿ ಮತ್ತು ನಂದೇಶ್ವರ ಗ್ರಾಮಗಳು ಪ್ರವಾಹದಿಂದ ಗ್ರಾಮಗಳು ಇವೆಯೆಂದು ಸಹ ಗುರುತಿಗೆ ಸಿಗುತ್ತಿಲ್ಲಾ. ಆ ಗ್ರಾಮಗಳಿಗೆ ತಾತ್ಕಾಲಿಕವಾಗಿ ಶೆಡ್ ಗಳನ್ನ ನಿರ್ಮಿಸಿಕೊಡಬೇಕು ಹಾಗೂ ಅಲ್ಲೆ ಮೂಲಭೂತ ಸೌಕರ್ಯ್ಯಗಳನ್ನ ನಿರ್ಮಿಸಿಕೊಡಬೇಕು, ತಾತ್ಕಾಲಿಕವಾಗಿ ಶಾಲೆಗಳನ್ನು ಪ್ರಾರಂಭಿಸಬೇಕು ಮಕ್ಕಳಿಗೆ ಕಲಿಯಲು ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕೆಂದರು.
ಅನರ್ಹ ಶಾಸಕರಿಗೂ ನಾವು ಪಾಠ ಕಲಿಸುತ್ತೇವೆ. ಶ್ರೀಮಂತ ಪಾಟೀಲಗೂ ಕೂಡ ಪಾಠ ಕಲಿಸುತ್ತೇವೆ.  ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನನಗೆ ಪಕ್ಷದಲ್ಲಿ ಎಲ್ಲರೂ ವಿಶ್ವಾಸಿಗಳೇ ಇದ್ದಾರೆ ಎಂದು ಅವರು ಹೇಳಿದರು.

ಉಮೇಶ ಕತ್ತಿ ಕರೆ ಮಾಡಿದ್ದರು

ನನಗೆ ಕೆಲ ದಿನಗಳ ಹಿಂದೆ ಶಾಸಕ ಉಮೇಶ ಕತ್ತಿ ಅವರು ಕರೆ ಮಾಡಿದ್ದು ನಿಜ. ಆದರೆ ಅವರು ಕರೆ ಮಾಡಿ ನನ್ನ ಕಣ್ಣಿನ ಆಪರೇಷನ್ ಆಗಿದ್ದರ ಬಗ್ಗೆ ಕೇಳಿದರು. ನಾನಾಗ ಬಾರಪ್ಪಾ ನಾನು ನೀನು ಮಾತಾಡೋಣ ಎಂದಿದ್ದೆ. ಆದರೆ ಅವರೇ ಬರಲಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಹೊರಡುವ ವೇಳೆ ಅವರನ್ನು ಕಾರ್ಯಕರ್ತರು ತಡೆದು ಮುತ್ತಿಗೆ ಹಾಕಿ, ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಬೇಕು. ಏನಾದರೂ ಹೇಳಬೇಕು ಎಂದರು.  ನಾನು ಮತ್ತೊಮ್ಮೆ ಕಾರ್ಯಕರ್ತರಿಗೋಸ್ಕರವೇ ಅಥಣಿಗೆ ಬರುತ್ತೇನೆ ಆವಾಗ ನಾನು ಮಾತನಾಡುತ್ತೇನೆ. ನೀವೆಲ್ಲರೂ ಸಹ ಈಗಿನಿಂದಲೇ ಅಥಣಿ ಬೈ ಎಲೆಕ್ಷನ್ ತಯಾರಿ ನಡೆಸಬೇಕು. ಮತ್ತೆ ಕಾಂಗ್ರೇಸ್ ಅಧಿಪತ್ಯವನ್ನು ಅಥಣಿಯಲ್ಲಿ ಸ್ಥಾಪಿಸಬೇಕು ಎಂದು ಅವರು ತಮ್ಮ ವಾಹನದ ಬಳಿ ನಿಂತು ಜೋರಾಗಿ ಹೇಳಿದಾಗ ಕಾರ್ಯಕರ್ತರು ಜೈಕಾರ ಹಾಕಿದರು.
ಈ ವೇಳೆ ಕಾಂಗ್ರೇಸ್ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗಜಾನನ ಮಂಗಸೂಳಿ, ರಮೇಶ ಶಿಂದಗಿ, ಬಸವರಾಜ ಬುಟಾಳಿ, ಧರೆಪ್ಪಾ ಠಕ್ಕಣ್ಣವರ್, ನಿಶಾಂತ ದಳವಾಯಿ, ಲೇನಿನ ಹಳಿಂಗಳಿ, ವಿನಾಯಕ ದೇಸಾಯಿ, ತೌಸಿಫ್ ಸಾಂಗಲೀಕರ, ಧರೆಪ್ಪಾ ಮಾಳಿ, ಹಾಗೂ ಇನ್ನಿತರರು ಭಾಗಿಯಾಗಿದ್ದರು.

ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ -ಸಿದ್ದರಾಮಯ್ಯ

ನೂತನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಎಲ್ಲ ವರ್ಗದ ಅಧಿಕಾರಿಗಳು ಪ್ರವಾಹ ಸಂತ್ರಸ್ತರ ನೆರವಿಗೆ ಬರಲಿ. ಕಂಡು ಕೇಳರಿಯದಷ್ಟು ಹಾನಿ ಸಂಭವಿಸಿದೆ. ಹೆಚ್ಚಿನ ಅನುದಾನ ತಕ್ಷಣ ಬಿಡುಗಡೆ ಮಾಡಿ ಸಂತ್ರಸ್ತರಿಗೆ ನೆರವಾಗಬೇಕೆಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ತಾಲೂಕಿನ ಝೀರೊಪಾಯಿಂಟ್ ಪರಿಹಾರ ಕೇಂದ್ರದಲ್ಲಿ ಮಂಗಳವಾರ  ಮಾತನಾಡಿದ ಅವರು, ಕೃಷ್ಣಾ ನದಿ ತೀರದ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಹೆಣ್ಣು ಮಕ್ಕಳಿಗೆ ಆಸರೆ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ. ಪ್ರವಾಹದಿಂದ ಬಾಧಿತವಾದಂತಹ ಗ್ರಾಮಗಳನ್ನು ಕೂಡಲೇ ಸ್ಥಳಾಂತರಿಸುವ ಕೆಲಸವಾಗಬೇಕು. ಬೆಳೆ ಪರಿಹಾರವಾಗಿ ಕನಿಷ್ಟ ಎಕರೆಗೆ ೫೦ಸಾವಿರ ನೀಡಬೇಕು. ಮನೆ ಶಾಲಾ ಕಾಲೇಜುಗಳನ್ನು ತುರ್ತಾಗಿ ನಿರ್ಮಾಣ ಮಾಡಬೇಕು ಎಂದರು.
ನಂತರ ಮಾತನಾಡುತ್ತಾ ಪ್ರವಾಹದಲ್ಲಿ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ತುರ್ತಾಗಿ ಶಾಲೆ ನಿರ್ಮಾಣ ಮಾಡಬೇಕು ಹಾಗೂ ಸತ್ತಿ ಗ್ರಾಮವನ್ನು ಸಂಪೂರ್ಣ ಮುಳುಗಡೆ ಗ್ರಾಮವಾಗಿ ಘೋಷಣೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಚಿಕ್ಕೋಡಿ ಬ್ಲಾಕ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗಜಾನನ ಮಂಗಸೂಳಿ, ಬಸವರಾಜ ಬುಟಾಳಿ, ಧರೆಪ್ಪ ಠಕ್ಕನ್ನವರ. ನಿಶಾಂತ ದಳವಾಯಿ, ಶಿವಾನಂದ ಪಾಟೀಲ, ಮಲ್ಲಪ್ಪ ಹಂಚಿನಾಳ, ಬಿ ಆರ್ ಪಾಟೀಲ, ರೇಖಾ ಪಾಟೀಲ, ಸುಜಾತಾ ಸನದಿ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button