Kannada NewsKarnataka News

ಬೆಳಗಾವಿ ಜಿಲ್ಲೆಯ ಹನ್ನೊಂದು ಪ್ರಮುಖ ಸುದ್ದಿಗಳು

ಅಗಸ್ಟ್ ೨೮ ರಂದು ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಯು ಜಿ ಕೇಬಲ್ ಕೈಗೊಳ್ಳುವ ಸಲುವಾಗಿ ೧೧೦ ಕೆವಿ ವಡಗಾಂವ ಮತ್ತು ೩೩/೧೧ ಕೆ.ವ್ಹಿ ಆರ್ ಎಂ-೨ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೪ ಆದರ್ಶನಗರ ಹಾಗೂ ಎಫ್-೪ ಮಾರುತಿಗಲ್ಲಿ ಪೂರಕದ ಮೇಲೆ ಬರುವ ಸಂಭಾಜಿ ನಗರ, ರಣಜುಂಜರ ಕಾಲನಿ, ಕೇಶವನಗರ, ಆನಂದ ನಗರ, ಓಂಕಾರ ನಗರ, ಛಬ್ಬೀಲೇ ಔಟ, ಸುಂಕೆ ಲೇ ಔಟ, ಭಾಗ್ಯನಗರ, ೮ನೇ ಕ್ರಾಸ್ ನಿಂದ ೧೦ನೇ ಕ್ರಾಸ್ ವರೆಗೆ, ಆದರ್ಶನಗರ, ಪಟ್ಟವರ್ದನ ಲೇ ಔಟ, ಸುಭಾಶ್ ಮಾರ್ಕೇಟ್ ಆಕೆ ಮಾರ್ಗ, ಹಿಂದವಾಡಿ, ಸರ್ವೋದಯ ಮಾರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೋಗಾರ್ವೇಸ್ ಸರ್ಕಲ್, ಕಿರ್ಲೋಸ್ಕ ರೋಡ, ಕಡೋಲ್ಕರ ಗಲ್ಲಿ, ಮಾರುತಿಗಲ್ಲಿ ಪ್ರದೇಶಗಳಲ್ಲಿ ಅಗಸ್ಟ್ ೨೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗಸ್ಟ್ ೩೧ ರಂದು ಜಿಲ್ಲಾ ಪಂಚಾಯತ ಸಾಮಾನ್ಯ ಸಭೆ

ಬೆಳಗಾವಿ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯನ್ನು ಅಗಸ್ಟ್ ೩೧ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ-ನೈರ್ಮಲ್ಯ: ಜನಜಾಗೃತಿ ವಸ್ತುಪ್ರದರ್ಶನ ಇಂದಿನಿಂದ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆ.೨೮ ರಿಂದ ಎರಡು ದಿನಗಳ ಕಾಲ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಜನಜಾಗೃತಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬುಧವಾರ(ಆ.೨೮) ಬೆಳಿಗ್ಗೆ ೧೦.೩೦ ಗಂಟೆಗೆ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಉಪಸ್ಥಿತರಿರುವರು.
ಈ ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನವಜಾತ ಶಿಶುಗಳ ಆರೈಕೆ, ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಪುನಶ್ಚೇತನಾ ಕೇಂದ್ರಗಳನ್ನು ಸ್ಥಾಪಿಸಿರುವುದು, ಸಂಪೂರ್ಣ ಲಸಿಕೆ ಪರಿಪೂರ್ಣ ಆರೋಗ್ಯ ಧ್ಯೇಯವಾಕ್ಯದಡಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಕುರಿತ ಅಂಶಗಳ ವಿವರಣೆ ೫ ವರ್ಷದಲ್ಲಿ ೭ ಬಾರಿ ಲಸಿಕೆ ತಪ್ಪದೆ ಹಾಕಿಸುವುದು, ಪೌಷ್ಠಿಕ ಆಹಾರ ಪುನಶ್ಚೇತನಾ ಕೇಂದ್ರಗಳ ಸ್ಥಾಪನೆಯ ಮೂಲಕ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ, ರಕ್ತಹೀನತೆ ತಡೆಗಟ್ಟುವ ಬಗೆ, ಕ್ಷಯರೋಗದ ಲಕ್ಷಣಗಳು ಮತ್ತು ನಿಯಂತ್ರಣದ ಕ್ರಮಗಳು, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಲಕ್ಷಣಗಳು ಮತ್ತು ಮುನ್ನೆಚ್ಚೆರಿಕಾ ಕ್ರಮಗಳು ಸೇರಿದಂತೆ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ವಿವಿಧ ಬಗೆಯ ಮಾಹಿತಿಯನ್ನು ಹೊಂದಿರುವ ಫಲಕಗಳನ್ನು ಅಳವಡಿಸಲಾಗಿರುತ್ತದೆ.
ವಾರ್ತಾ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ(ಆ.೨೮) ಹಾಗೂ ಗುರುವಾರ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಆರೋಗ್ಯ ಸಂಬಂಧಿತ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ಕೋರಿದ್ದಾರೆ.

 ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ

ಸೆಪ್ಟೆಂಬರ್ ೧ ಮತ್ತು ೨ ರಂದು ಗೌರಿ ಗಣೇಶ ಹಬ್ಬದ ಸಾರ್ವತ್ರಿಕ ರಜೆಗಳು ಬಂದಿರುವ ಪ್ರಯುಕ್ತ ಬೆಂಗಳೂರು, ಮುಂಬಯಿ ಪೂಣೆ ಹಾಗೂ ಪಣಜಿಯಿಂದ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ಅಗಸ್ಟ್ ೩೦ ಹಾಗೂ ೩೧ ರಂದು ಬೆಂಗಳೂರು ಕೇಂಪೆಗೌಡ ಬಸ್ ನಿಲ್ದಾಣದಿಂದ ಮತ್ತು ಅದರಂತೆ ಹಬ್ಬದ ನಂತರ ಮರಳಿ ಬೆಂಗಳೂರಿಗೆ ಸೆಪ್ಟೆಂಬರ್ ೦೨ ಮತ್ತು ೦೩ ರಂದು ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.

ಅದೇ ರೀತಿ ಮುಂಬಯಿ, ಪೂನಾ ಮತ್ತು ಪಣಜಿಯಿಂದ ಹೆಚ್ಚಿನ ವಾಹನಗಳನ್ನು ಜನದಟ್ಟಣೆಗನುಗುಣವಾಗಿ ಅಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೪ ರ ವರೆಗೆ ನಿರಂತರವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಬೆಳಗಾವಿ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕೋಡಿ ವಿಭಾಗ 
ಸೆಪ್ಟೆಂಬರ್ ೨ ರಂದು ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ ಹಾಗೂ ಅಥಣಿ ಘಟಕಗಳಿಂದ ಬೆಂಗಳೂರು, ಮುಂಬಯಿ ಪೂಣೆ ಹಾಗೂ ಇತರೇ ಅಂತರರಾಜ್ಯ ಮಾರ್ಗಗಳಿಗೆ ಅಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೪ ರ ವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಅದೇ ರೀತಿ ಗಣೇಶ ಹಬ್ಬ ಆಚರಿಸಿ ಮರಳುವ ಪ್ರಯಾಣಿಕರಿಗಾಗಿ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ ಹಾಗೂ ಅಥಣಿ ಘಟಕಗಳಿಂದ ಸೆಪ್ಟೆಂಬರ್ ೨ ಮತ್ತು ೩ ರಂದು ಹೆಚ್ಚುವರಿ ವಾಹನಗಳನ್ನು ಬೆಂಗಳೂರು ಮತ್ತು ಇತರೆ ಮಾರ್ಗಗಳಿಗೆ ಕಾರ್ಯಾಚರಣೆ ಮಾಡಲಾಗುವುದು ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಹೆಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಬೇಕು ಎಂದು ವಾಕರಸಾ ಸಂಸ್ಥೆ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದೃಢ ಭಾರತ ಆಂದೋಲನ ಉದ್ಘಾಟನೆ  

ಸದೃಢ ಭಾರತ ಆಂದೋಲನ ಕಾರ್ಯಕ್ರಮವನ್ನು ಭಾರತದ ಪ್ರಧಾನ ಮಂತ್ರಿ  ನರೇಂದ್ರ ಮೋದಿ  ಅಗಸ್ಟ್ ೨೯ ರಂದು ಇಂದೋರ್ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆ ೧೦ ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಉದ್ಘಾಟನೆ ಕಾರ್ಯಕ್ರಮ ದೂರದರ್ಶನ(ಡಿ.ಡಿ) ಚಾನಲ್‌ಗಳಲ್ಲಿ ಪ್ರಸಾರವಾಗಲಿದೆ. ಸದೃಢ ಭಾರತದ ಆಂದೋಲನದ ಪ್ರತಿಜ್ಞಾ ವಿಧಿಯನ್ನು ನರೇಂದ್ರ ಮೋದಿ  ಭೋಧಿಸುತ್ತಾರೆ.  ಎಲ್ಲ ನೊಂದಾಯಿತ ಯುವಕ, ಯುವತಿ ಮಂಡಳಗಳ ಸದಸ್ಯರು ತಮ್ಮ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಟಿವಿ ಚಾನಲ್ ವ್ಯವಸ್ಥೆ ಮಾಡಿ ಪ್ರಧಾನ ಮಂತ್ರಿ ಪ್ರತಿಜ್ಞಾವಿಧಿ ಭೋದನೆಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ತದನಂತರ ಗ್ರಾಮ ಪಂಚಾಯತಿ, ಸ್ಥಳಿಯ ಯುವಕ, ಯುವತಿ ಮಂಡಳಗಳು, ಸಂಘ ಸಂಸ್ಥೆಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ ಸೈಕಲ್ ರ‍್ಯಾಲಿ, ಜಾಥಾಗಳನ್ನು ಏರ್ಪಡಿಸಿ ವರದಿ ಹಾಗೂ ಫೋಟೋಗಳನ್ನು ಕಛೇರಿಗೆ ಸಲ್ಲಿಸಬೇಕು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಾಂಪ್ರದಾಯ ಕ್ರೀಡೆಗಳು, ಆಟೋಟಗಳು, ಹಾಗೂ ಶಾರೀರಿಕ, ಮಾನಸಿಕವಾಗಿ ಯುವಕ, ಯುವತಿಯರು ಸದೃಢ ಹೊಂದಲು ಹಾಗೂ ಕುಟುಂಬದಲ್ಲಿ ಒಳ್ಳೆಯ ವಾತವಾರಣ ಹೊಂದಲು ಜಾಗೃತಿ ಮೂಡಿಸುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ.
ನಿಮ್ಮ ಗ್ರಾಮ ಪಂಚಾಯತದಲ್ಲಿ ಡಿ.ಡಿ ಚಾನಲ್‌ನಲ್ಲಿ ಪ್ರಸಾರವಾಗುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಯುವಕ, ಯುವತಿ ಸಂಘಗಳು ಭಾಗವಹಿಸಿ ಪ್ರತಿಜ್ಞಾವಿಧಿಯನ್ನು ತೆಗೆದುಕೊಂಡ ಬಗ್ಗೆ ಫೋಟೋಗಳನ್ನು ತೆಗೆದು ೭೮೯೯೦೭೬೭೪೦, ೮೧೨೫೫೦೯೪೯೭ ನಂಬರಿಗೆ ವಾಟ್ಸಪ್ ಕಳುಹಿಸಲು ಬೆಳಗಾವಿ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಹಾಗೂ ನೆಹರು ಯುವ ಕೇಂದ್ರ ಉಪನಿರ್ದೆಶಕರಾದ ಡಿ.ದಯಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಬಾನುಲಿ ನಾಟಕ ರಚನಾ ಶಿಬಿರ

ಧಾರವಾಡ ಆಕಾಶವಾಣಿಯು ಬಾನುಲಿ ನಾಟಕ ರಚನಾ ಶಿಬಿರವನ್ನು ಆಯ್ದ ನಾಟಕಕಾರರಿಗೆ ಪ್ರಪ್ರಥಮವಾಗಿ ಸೆಪ್ಟೆಂಬರ್ ೧೪, ೧೫ ರಂದು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿಯೇ ಏರ್ಪಡಿಸಿದೆ.
ಈ ಶಿಬಿರದಲ್ಲಿ ಬಾನುಲಿ ನಾಟಕ ತಜ್ಞರಾದ ಶ್ರೀಮತಿ ಯಮುನಾಮೂರ್ತಿ ಮತ್ತು ಶ್ರೀ ಜಿ.ಎಮ್. ಶಿರಹಟ್ಟಿ ಮತ್ತಿತರ ತಜ್ಞರು ಮಾರ್ಗದರ್ಶನ ಮಾಡುವರು. ಸಪ್ಟೆಂಬರ್ ೧೪ ರಂದು ಬೆಳಿಗ್ಗೆ ೧೦-೦೦ ಗಂಟೆಯಿಂದ ೧೫ನೇಯ ಸಾಯಂಕಾಲ ೬ ಗಂಟೆಯವರೆಗೆ ಈ ತರಬೇತಿ ಶಿಬಿರ ನಡೆಯುತ್ತದೆ.

ಈಗಾಗಲೇ ನಾಟಕ ರಚನೆಯಲ್ಲಿ ತೊಡಗಿಕೊಂಡಿರುವ ನಾಟಕಕಾರರು ತಮ್ಮ ಪೂರ್ಣ ಹೆಸರು, ವಿಳಾಸ, ನಾಟಕ ರಚನೆಯಲ್ಲಿ ತಮಗಿರುವ ಅನುಭವ ಹಾಗೂ ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ವಿವರವಾದ ಅರ್ಜಿಯನ್ನು ಈ ತಿಂಗಳ ೩೧ನೇ ತಾರೀಖಿನ ಒಳಗೆ ಕೇಂದ್ರ ನಿರ್ದೇಶಕರು, ಬಾನುಲಿ ನಾಟಕ ರಚನಾ ಶಿಬಿರ ಆಕಾಶವಾಣಿ, ಧಾರವಾಡ-೫೮೦೦೦೮ ಈ ವಿಳಾಸಕ್ಕೆ ಕಳಿಸಬೇಕು.
ಕೇವಲ ೪೦ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುವುದರಿಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆಯಾದ ಶಿಬಿರಾರ್ಥಿಗಳಿಗೆ ದೂರವಾಣಿ ಮುಖಾಂತರ ಆಯ್ಕೆಯನ್ನು ತಿಳಿಸಲಾಗುವುದು.
ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಈ ಶಿಬಿರವು ಉಚಿತವಾಗಿದ್ದು, ಪರಸ್ಥಳದವರು ತಮ್ಮ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು. ಈ ಬಾನುಲಿ ನಾಟಕ ರಚನಾ ಶಿಬಿರದ ಸದುಪಯೋಗವನ್ನು ಪಡೆದುಕೊಳಬೇಕು ಎಂದು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಸತೀಶ ಬಿ. ಪರ್ವತೀಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಸ್ಥಳಗಳಿಗೆ ಪಶುವೈದ್ಯಕೀಯ ಅಧಿಕಾರಿಗಳ ಭೇಟಿ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಿದರನ ವತಿಯಿಂದ ಪ್ರವಾಹ ಪೀಡಿತ ಜಾನುವಾರು ನಿರ್ವಹಣಾ ಕಾರ್ಯಕ್ರಮದ ಪ್ರಧಾನ ಸಂಯೋಜಕರಾದ ಡಾ. ಸುರೇಶ ಎಸ್.ಹೊನ್ನಪ್ಪಗೋಳ, ಪಶು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇವರು ಪ್ರವಾಹಾದಿಂದ ತತ್ತರಿಸಿರುವ ಜಿಲ್ಲೆಯ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು.
ಗೋಕಾಕ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಅಥಣಿ ತಾಲೂಕಿನ ಶಂಕರಹಟ್ಟಿ, ಹಳಿಯಾಳ, ಜುಂಜರವಾಡಿ ಮತ್ತು ಸಿನಾಳ ಹಳ್ಳಿಗಳಿಗೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಗೋಶಾಲೆ ಮತ್ತು ಮೇವಿನ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಜಾನುವಾರುಗಳ ಆರೋಗ್ಯ, ಔಷಧಿ, ಮತ್ತು ಲಸಿಕೆ ದಾಸ್ತಾನು ಹಾಗೂ ಮೇವಿನ ಸಂಗ್ರಹಣೆ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರೊಂದಿಗೆ ಸಂವಾದ ನಡೆಸಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
ಉಪ ನಿರ್ದೇಶಕರಾದ ಡಾ. ಅಶೋಕ ಕೊಳ್ಳಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆ ಮತ್ತು ಮೇವಿನ ಬ್ಯಾಂಕ್‌ಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಬೆಳಗಾವಿಯ ಪಶು ರೋಗ ತನಿಖಾ ಪ್ರಯೋಗಲಯದ ಮುಖ್ಯಸ್ಥರಾದ ಡಾ. ಶ್ರೀಕಾಂತ ಕೋವಳ್ಳಿ ಇವರು ನಿರ್ವಹಣಾ ಕಾರ್ಯಕ್ರಮದಲ್ಲಿ ನೆರವಾದರು.

ಕೆಳದಿ ಚನ್ನಮ್ಮಾ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

೨೦೧೯-೨೦ ನೇ ಸಾಲಿನ ’ಹೊಯ್ಸಳ’ ಹಾಗೂ ’ಕೆಳದಿ ಚೆನ್ನಮ್ಮಾ’ ಶೌರ್ಯ ಪ್ರಶಸ್ತಿಗಳಿಗೆ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ೬ ರಿಂದ ೧೮ ವರ್ಷದ ಮಕ್ಕಳ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮಾ ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ. ಪ್ರಕರಣವು ಅಗಸ್ಟ ೨೦೧೮ ರಿಂದ ಜುಲೈ ೨೦೧೯ ರೊಳಗೆ ನಡೆದಿರಬೇಕು. ಅಗಸ್ಟ್ ೧, ೨೦೦೧ ರಂದು ಹಾಗೂ ನಂತರ ಜನಿಸಿದ ಮಕ್ಕಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ, ೧೦,೦೦೦ ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಆಸಕ್ತಿವುಳ್ಳ ಬಾಲಕ, ಬಾಲಕಿಯರು ಬೆಳಗಾವಿ ಶಿವಾಜಿ ನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಹಾಗೂ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಸೆಪ್ಟಂಬರ್ ೫ ಕೊನೆಯ ದಿನವಾಗಿರುತ್ತದೆ. ತದನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇಲಾಖೆ ಬೆಳಗಾವಿ ಶಿವಾಜಿ ನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ದೂರವಾಣಿ ಸಂಖ್ಯೆ: ೨೪೦೭೨೩೫ ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

೨೦೧೯-೨೦ನೇ ಸಾಲಿಗಾಗಿ ನವದೆಹಲಿ ಕೇಂದ್ರಿಯ ಸೈನಿಕ ಬೋರ್ಡ ಅವರು ಮಾಜಿ ಸೈನಿಕರ ಮಕ್ಕಳಿಂದ ಪ್ರದಾನ ಮಂತ್ರಿಗಳ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನಿಸಿದ್ದಾರೆ.
ವಿವಿಧ ವೃತ್ತಿಪರ ಪದವಿಗಳಿಗೆ ೨೦೧೯-೨೦ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಕನಿಷ್ಠ ಪ್ರತಿಶತ ೬೦% ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಿರುವಂತಹ ಮಾಜಿ ಸೈನಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು.
ಆನಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ ೧೦ ಕೊನೆಯ ದಿನವಾಗಿರುತ್ತದೆ ಎಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀಕ್ಷಾ ಭೂಮಿ ಯಾತ್ರೆ

ಜಿಲ್ಲೆಯಿಂದ ಅಕ್ಟೋಬರ್ -೨೦೧೯ ಮಾಹೆಯಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರು ಬೌದ್ಧದರ್ಮದ ದೀಕ್ಷಾ ಪಡೆದ ಭೂಮಿಗೆ ತೆರಳಲು ಇಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ.ಬಾಬಾಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಸಲ್ಲಿಸಬಹುದಾಗಿದೆ.
ಮಹಾರಾಷ್ಟ್ರದ ನಾಗಪುರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ ರವರು ಬೌದ್ಧದರ್ಮದ ದೀಕ್ಷಾ ಪಡೆದ ಭೂಮಿಯನ್ನು ದೀಕ್ಷಾ ಭೂಮಿ ಎಂದು ಪರಿಗಣಿಸಿದೆ, ಇದು ಭಾರತದ ಬೌದ್ಧ ಧರ್ಮದ ಯಾತ್ರಾ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷವು ನಾಗಪುರದಲ್ಲಿರುವ ಈ ದೀಕ್ಷಾ ಭೂಮಿಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ದೇಶದ, ರಾಜ್ಯಗಳಿಂದ ಅಕ್ಟೋಬರ್ ೨ನೇ ವಾರದಲ್ಲಿ ಭೇಟಿ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯದಿಂದಲೂ ಸಹ ಬಹಳಷ್ಟು ಜನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ದಮ್ಮ ಪ್ರವರ್ತನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಯಾಯಿಗಳು ಮೇಲ್ಕಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಾಗಪೂರಕ್ಕೆ ಭೇಟಿ ಮಾಡಲು ಅನುಕೂಲವಾಗುವಂತೆ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೈಲು, ಬಸ್‌ಗಳ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಅರ್ಹತೆಗಳು:
ಯಾತ್ರಾರ್ಥಿಗಳು ಬಿ.ಪಿ.ಎಲ್ ಕಾರ್ಡ ಹೊಂದಿರಬೇಕು, ಯಾತ್ರಾರ್ಥಿಗಳು ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು, ಇತರೆ ಸಮುದಾಯದ ಜನರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆ ಕೈಗೊಳ್ಳಬಹುದಾಗಿದೆ, ಯಾತ್ರಾರ್ಥಿಗೆ ಕನಿಷ್ಠ ವಯಸ್ಸು ೧೮ ವರ್ಷ ಮೇಲ್ಪಟ್ಟಿರಬೇಕು, ಡಾ.ಬಿ.ಆರ್.ಅಂಬೇಡ್ಕರ ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು.
ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಈ ಸೌಲಭ್ಯಕ್ಕೆ ಅರ್ಹರಲ್ಲ, ಸರ್ಕಾರಿ ಮತ್ತು ಅದರ ಅಂಗಸಂಸ್ಥೆಯಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ, ಜಿಲ್ಲೆಯಿಂದ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವದು ವಸತಿ ಮತ್ತು ಬೋಜನಾ ವೆಚ್ಚವನ್ನು ಯಾತ್ರಾರ್ಥಿಗಳು ಭರಿಸಬೇಕು.
ಆನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲೆಗೆ ನಿಗಧಿಪಡಿಸಿದ ಗುರಿಯಂತೆ ಅನುಯಾಯಿಗಳನ್ನು ನಾಗಪೂರ ಯಾತ್ರಿಗೆ ಕಳುಹಿಸುವ ಏರ್ಪಾಡನ್ನು ಮಾಡಲಾಗುವದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕರುಗಳನ್ನು ಕಛೇರಿ ನಡೆಯುವ ಸಮಯದಲ್ಲಿ ಸಂರ್ಪಕಿಸಬಹುದಾಗಿದೆ ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ವತಿಯಿಂದ ಟಿ.ವಿ ಟೆಕ್ನಿಷಿಯನ್ ಉಚಿತ ತರಬೇತಿ ಸೆಪ್ಟಂಬರ್ ೧೧ ರಂದು ಹಾಗೂ ಸೆಪ್ಟಂಬರ್ ೧೬ ರಿಂದ ೧೦ ದಿನಗಳ ಕಾಲ ಹೈನುಗಾರಿಕೆ ಮತ್ತು ಏರೆಹುಳು ಗೊಬ್ಬರ ತಯಾರಿಕೆಯ ಉಚಿತ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ೧೮ ರಿಂದ ೪೫ ವರ್ಷ ವಯೋಮಿತಿಯ ಹಾಗೂ ಓದು ಬರಹ ತಿಳಿದಿರುವ ಯುವಕರು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ ೯೪೮೩೪೮೫೪೮೯, ೯೪೮೨೧೮೮೭೮೦, ೦೮೨೮೪-೨೨೦೮೦೭ ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button