ಬಿಜೆಪಿ ಸರ್ಕಾರದ ವಿರುದ್ಧ ಬೀದಿಗೆ ಇಳಿದ ರಾಜ್ಯ ಕಾಂಗ್ರೆಸ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಅತಿವೃಷ್ಟಿ ಬಗ್ಗೆ ನಿರ್ಲಕ್ಷ ಹಾಗೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ನೀಡಲಿದೆ.
ಡಿ.ಕೆ.ಶಿವಕುಮಾರ, ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ, ಎಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಎಚ್ ಎಂ ರೇವಣ್ಣ, ಜಮೀರ್ ಅಹ್ಮದ್ ಖಾನ್ , ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದಾರೆ.
ನಾವು ಒತ್ತಾಯ ಮಾಡಿದ ಮೇಲೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಬಂದ್ರು ಹೋದ್ರು. ೨೦೦೯ ರಲ್ಲಿ ಪ್ರವಾಹ ಬಂದಾಗ ಮನಮೋಹನ್ ಸಿಂಗ್ ಅವರು ೧೬೦೦ ಕೋಟಿ ಹಣವನ್ನು ಘೋಷಣೆ ಮಾಡಿದ್ದರು. ಅವತ್ತು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು. ಆಗ ಮನಮೋಹನ್ ಸಿಂಗ್ ಅವರು ವರದಿಕೊಡಿ ಅಂತ ಕೇಳಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಚುನಾವಣೆ ಘೋಷಣೆ ಆಗ್ಲಿ…
ಇವತ್ತು ನಮ್ಮ ಪ್ರಧಾನಿ ಎಲ್ಲಿದ್ದಾರೆ, ನಮ್ಮ ಪ್ರಧಾನಿ ನೂರು ಟ್ವಿಟ್ ಮಾಡುತ್ತಾರೆ , ಎಲ್ಲರ ಹುಟ್ಟು ಹಬ್ಬಕ್ಕೆ ಟ್ವಿಟ್ ಮಾಡುತ್ತಾರೆ. ಆದರೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಪ್ರಧಾನಿಗಳು ಇಂತಹ ಸಂದರ್ಭಗಳಲ್ಲಿ ಬರದೇ ಇದ್ದರೆ ಇನ್ಯಾವ ಸಂದರ್ಭದಲ್ಲಿ ಬರುತ್ತಾರೆ ಎಂದು ಅವರು ಪ್ರಶ್ನಿಸಿದರು.
ನಾಳೆ ಚುನಾವಣೆ ಘೋಷಣೆ ಆಗ್ಲಿ ರಾಜ್ಯಕ್ಕೆ ಪ್ರಧಾನಿ ಓಡಿ ಬರ್ತಾರೆ. 20 ಭಾಷಣ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಹಲವು ಕಡೆ ಪ್ರವಾಹದಿಂದ ದೊಡ್ಡ ನಷ್ಟವಾಗಿದೆ. ೨೨ ಜಿಲ್ಲೆಗಳ ೧೦೩ ತಾಲೂಕು ಪ್ರವಾಹದಿಂದ ತತ್ತರಿಸಿವೆ. ಪ್ರವಾಹ ಪೀಡಿತ ಸ್ಥಳಗಳಿಗೆ ನಮ್ಮ ತಂಡ ಭೇಟಿ ನೀಡಿದೆ.
ಈ ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೆವು. ಆದರೆ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮಂತ್ರಿ ಮಂಡಳ ರಚನೆಯಲ್ಲೇ ಬ್ಯುಸಿಯಾಯ್ತು ಎಂದೂ ದಿನೇಶ್ ಗುಂಡೂರಾವ್ ಹರಿಹಾಯ್ದರು.
ನಮ್ಮ ಕೆಪಿಸಿಸಿ ಕಡೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ತಂಡ ರಚನೆ ಮಾಡಿದ್ದೆವು. ಹೆಚ್ ಕೆ ಪಾಟೀಲ್ , ಎಂ ಬಿ ಪಾಟೀಲ್ , ಈಶ್ವರ್ ಖಂಡ್ರೆ , ಜೊತೆಗೆ ನಾವು ಒಂದೊಂದು ತಂಡ ಮಾಡಿಕೊಂಡು ಭೇಟಿ ನೀಡಿದ್ದೇವೆ. ನಮ್ಮ ಶಾಸಕರು ಇನ್ನೂ ಪ್ರವಾಸದಲ್ಲಿ ಇದ್ದಾರೆ. ಮೈಸೂರು , ಕೊಡಗು ಭಾಗದಲ್ಲಿ ಇದ್ದಾರೆ ಎಂದರು.
ದೆಹಲಿ ದೆಹಲಿ ಅಂತ ಓಡಿ ಹೋಗ್ತಿದ್ರು
ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಸರ್ಕಾರ ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಆ ರೀತಿಯಲ್ಲಿ ಕೆಲಸ ಮಾಡಲು ನಾವು ಅದಕ್ಕೆ ಬೆಂಬಲ ನೀಡಿದ್ದೇವೆ. ದುರಂತ ಏನ್ ಅಂದ್ರೆ ಸಿಎಂ ಒಬ್ಬರೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ರು. ಮಂತ್ರಿ ಮಂಡಲ ಇಲ್ಲ, ಯಾವಾಗಲು ದೆಹಲಿ ದೆಹಲಿ ಅಂತ ಓಡಿ ಹೋಗ್ತಿದ್ರು.
ಸರ್ವಪಕ್ಷ ಸಭೆಯನ್ನು ಅವರು ಕರೆಯಲಿಲ್ಲ, ಜನರ ಪರವಾಗಿ ಕೆಲಸ ಮಾಡಲು ಆಗಲಿಲ್ಲ. ಜನರಿಗೆ ನೆರವು ಆಗಲು ಅವರಿಗೆ ಆಗಲಿಲ್ಲ. ಸರ್ಕಾರ ಉಳಿಸಿಕೊಳ್ಳೋಕೆ ಸಿಎಂ ಗಮನಹರಿಸಿದ್ರು. ಅದು ಬಿಟ್ಟು ಜನರ ಬಗ್ಗೆ ಗಮನಹರಿಸಲಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ರಾಜ್ಯದಲ್ಲೂ ಅವರದ್ದೇ ಸರ್ಕಾರವಿದೆ. ಹೀಗಿದ್ದರೂ ಕೇಂದ್ರದಿಂದ ಯಾವ ನೆರವೂ ಬಂದಿಲ್ಲ ಎಂದು ದಿನೇಶ ಗುಂಡೂರಾವ್ ಹರಿಹಾಯ್ದರು.
ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ರಾಜಕಾರಣ ಮಾಡೋ ಅವಶ್ಯಕತೆ ಇಲ್ಲ.
ಆದ್ರೆ, ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರ ಕೆಲಸ ಮಾಡಲಿ ಅನ್ನೋ ಕಾರಣಕ್ಕೆ ನಾವು ಸತ್ಯಾಗ್ರಹ ಆರಂಭಿಸಿದ್ದೇವೆ. ನೆರೆ ಪರಿಹಾರ ಕಾಮಗಾರಿ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡ್ಬೇಕಿತ್ತು ಎಂದರು.
ಕೇಂದ್ರದಲ್ಲೂ, ರಾಜ್ಯದಲ್ಲೂ ಅವರದ್ದೇ ಸರ್ಕಾರ ಇದೆ. ಹಾಗಾಗಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡ್ಬೇಕಿತ್ತು. ಹಾಗೂ ರಾಜ್ಯಕ್ಕೆ ಹೆಚ್ಚು ಅನುದಾನವನ್ನ ನೀಡ್ಬೇಕಿತ್ತು.
ಕೇಂದ್ರದ ಹಣಕಾಸು, ಗೃಹ ಸಚಿವರೂ ಬಂದ್ರು, ಹೋದ್ರು.
ಯಡಿಯೂರಪ್ಪ ಅವರು ಬಲಹೀನರಾಗಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರದೊಂದಿಗೆ ಯಾಕೆ ಧೈರ್ಯವಾಗಿ ಮಾತನಾಡಲು ಆಗ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಿದ್ರೆ ಹೇಳಬಹುದಿತ್ತು ಕೇಂದ್ರ ಪರಿಹಾರ ಕೊಡುತ್ತಿಲ್ಲ ಅಂತ. ಆದ್ರೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆಯಲ್ಲ. ಆದ್ರೆ ಇದೂವರೆಗೂ ರಾಜ್ಯಕ್ಕೆ ಕೇಂದ್ರ ಪರಿಹಾರ ನೀಡಲೇ ಇಲ್ಲ. ನಿಮ್ಮ ಪ್ರಧಾನಿಗೆ ಹೇಳೋ ಧೈರ್ಯ ನಿಮಗಿಲ್ಲ.ಹೋಗ್ಲಿ ನಮ್ಮನಾದ್ರೂ ದೆಹಲಿಗೆ ಕರೆದೋಯ್ರಿ ನಿಮ್ಮ ಪರವಾಗಿ ನಾವು ಮಾತನಾಡ್ತೇವೆ
ಎಂದು ದಿನೇಶ್ ಹೇಳಿದರು.
ಎಂದು ದಿನೇಶ್ ಹೇಳಿದರು.
ಇದು ಬಿಜೆಪಿ ಸರ್ಕಾರ ಅಲ್ಲ, ಇದು ಅತೃಪ್ತ ಸರ್ಕಾರ
ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ವಾಮಮಾರ್ಗದ ಮೂಲಕದಿಂದ ಸರ್ಕಾರ ರಚನೆಯಾಗಿದೆ. ಮೂರು ರೀತಿಯ ಅತೃಪ್ತರು ಅದರಲ್ಲಿದ್ದಾರೆ. ರಿಸೈನ್ ಮಾಡಿ ಹೋಗಿರುವ ಶಾಸಕರು ಅತೃಪ್ತರು.
ಸಚಿವ ಸ್ಥಾನ ಸಿಗದ ಅತೃಪ್ತರು. ಮಂತ್ರಿಯಾದ್ರೂ ಅಸಮಾಧಾನ ಇರೋವ್ರು ಅತೃಪ್ತರೇ.
ಹೀಗಾಗಿ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದು ಬಿಜೆಪಿ ಸರ್ಕಾರ ಅಲ್ಲ, ಇದು ಅತೃಪ್ತ ಸರ್ಕಾರ. ಅತೃಪ್ತ ಸರ್ಕಾರ ಹೆಚ್ಚು ದಿನ ಉಳಿಯಲ್ಲ.
ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆಯಾಗಿದೆ. ಮಧ್ಯಂತರ ಚುನಾವಣೆ ಯಾವ ಕ್ಷಣದಲ್ಲಾದರೂ ಬರಬಹುದು. ಚುನಾವಣೆಗೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಎಚ್ಚರಿಸಿದರು.
ಬಿಜೆಪಿ ನಾಯಕರ ವಿರುದ್ಧ ಹೆಚ್ಕೆಪಿ ವಾಗ್ದಾಳಿ
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಉತ್ತರಕರ್ನಾಟಕದಲ್ಲಿ ಪಂಚಮಿ ಮಾಡಿಲ್ಲ. ಪಂಚಮಿಗೆ ಮಾಡಿದ್ದ ಉಂಡೆ ಸಂತ್ರಸ್ಥರಿಗೆ ಹಂಚಿದ್ದಾರೆ. ಸರ್ಕಾರ ಯಾವುದೇ ಪರಿಹಾರ ಕೆಲಸ ಮಾಡಿಲ್ಲ. ನಮ್ಮಬದುಕು ಕಠಿಣವಾಗಿದೆ. ಮನೆಗಳು ಬಿದ್ದಿವೆ, ಹಳ್ಳಿಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಜನರ ಬದುಕನ್ನ ಕಟ್ಟಿಕೊಡಬೇಕಿದೆ.
ಕೇಂದ್ರದಲ್ಲಿ ನಮ್ಮ ರಾಜ್ಯದ ಮೂವರು ಸಚಿವರಿದ್ದಾರೆ. ಕೇಂದ್ರ ಸಚಿವರು ಅಡ್ಡಾಡೋಕೆ ಏನ್ ತೊಂದ್ರೆ? ಪ್ರವಾಹ ಪೀಡಿತ ಸ್ಥಳಗಳಲ್ಲಿ ಯಾಕೆ ಭೇಟಿ ನೀಡಲಿಲ್ಲ? ನಿಮ್ಮ ನಿರ್ಲಕ್ಷ್ಯ ಧೋರಣೆ ಜನರಿಗೆ ಮಾಡಿದ ಅನ್ಯಾಯ ಎಂದು ಹೇಳಿದರು.
ಯೋಗಾಸನ ಮಾಡ್ತಿದ್ರು
ಯಡಿಯೂರಪ್ಫ ಅವರ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಆದ್ರೆ ಈಗ ಯಡಿಯೂರಪ್ಪ ಅವರ ಜವಾಬ್ದಾರಿ ಇದೆ. ಜವಾಬ್ದಾರಿ ನಿರ್ವಹಿಸಲು ಆಗಲಿಲ್ಲ ಅಂದ್ರೆ ನಾನು ಅಸಹಾಯಕ ಎಂದು ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
೧೯೧೪ ರಲ್ಲಿ ಇಂತಹ ಪ್ರವಾಹ ಬಂದಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಇಂತಹ ಪ್ರವಾಹ ಆಗಿದೆ.
೧೦೪ ಕ್ಕೂ ಹೆಚ್ಚು ತಾಲೂಕುಗಳಲ್ಲಿ ಹಾನಿಯಾಗಿದೆ. ನಾನು ಹಲವು ತಾಲೂಕಿಗೆ ಭೇಟಿ ನೀಡಿದ್ದೇನೆ.
ನಾಳೆಯೂ ಮತ್ತೆ ಕೊಡಗು ಭಾಗಕ್ಕೆ ಹೋಗ್ತಿದ್ದೇನೆ. ಲಕ್ಷಾಂತರ ಜನ ಬೀದಿಗೆ ಬಂದಿದ್ದಾರೆ.
೧ ಲಕ್ಷಕ್ಕೂ ಹೆಚ್ಚು ಕುಟುಂಬಗಳ ಹಾನಿಗೆ ಸಿಲುಕಿವೆ.
ಊರಿಗೆ ಊರೇ ಮುಳುಗಿ ಹೋಗಿವೆ. ೨೦೦೯ ರಲ್ಲೂ ಪ್ರವಾಹ ಬಂದಿತ್ತು. ಆಗಲೂ ಯಡಿಯೂರಪ್ಪನೇ ಮುಖ್ಯಮಂತ್ರಿ. ಪ್ರವಾಹ ಬಂದ್ರೂ ಸುತ್ತೂರಿನಲ್ಲಿ ಯೋಗಾಸನ ಮಾಡ್ತಿದ್ರು. ಈಗಲೂ ಯಡಿಯೂರಪ್ಪನೇ ಸಿಎಂ. ಈಗ ಅದಕ್ಕಿಂತ ಬಹುದೊಡ್ಡ ಪ್ರವಾಹ ಬಂದಿದೆ. ಅವರದೇ ಕೇಂದ್ರ ಸರ್ಕಾರವಿದೆ. ಆದರೂ ಇನ್ನೂ ಯಾವುದೇ ನೆರವು ಬಂದಿಲ್ಲ. ರಾಜ್ಯ ಸರ್ಕಾರವೂ ಪರಿಹಾರ ಕಾರ್ಯ ಮಾಡ್ತಿಲ್ಲ ಎಂದು ಸಿದ್ದರಾಮಯ್ಯ
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
೨೫ ಬಿಜೆಪಿ ಸಂಸದರು ಮಾಡಿದ್ದೇನು
ಮೂವರು ಕೇಂದ್ರ ಮಂತ್ರಿಗಳೂ ಇದ್ದಾರೆ. ಯಾರೂ ಕೇಂದ್ರದ ಮೇಲೆ ಒತ್ತಡ ತರಲಿಲ್ಲ.
ವಾಮಮಾರ್ಗದ ಮೂಲಕ ಯಡಿಯೂರಪ್ಪ ಅಧಿಕಾರಕ್ಕೆ ಬಂದ್ರು. ೨೧ ದಿನ ಯಡಿಯೂರಪ್ಪ ಒಬ್ರೇ ಇದ್ರು. ಬೆಂಗಳೂರು, ಡೆಲ್ಲಿ ಅಂತ ಓಡಾಡಿದ್ದೇ ಆಯ್ತು. ಆದ್ರೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ತರಲಿಲ್ಲ. ಕಾಟಾಚಾರಕ್ಕೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದ್ರು, ಹೋದ್ರು.
ಏರಿಯಲ್ ಸರ್ವೆ ಮಾಡ್ತೀನಿ ಅಂತ ನಾಟಕವಾಡಿದ್ರು.
ಪ್ರಧಾನಿ ಬರೋಕೆ ಸಾಧ್ಯವಾಗಲಿಲ್ಲ. ಹೋಗ್ಲಿ ಇವರ ಮೂಲಕನಾದ್ರೂ ನೆರವು ಘೋಷಿಸಬೇಕಲ್ಲ. ಅದನ್ನೂ ಪ್ರಧಾನಿ ಮಾಡಲಿಲ್ಲ. ೫೦ ಸಾವಿರ ಕೋಟಿ ನಷ್ಟ ಅಂತ ಬಿಎಸ್ ವೈ ಒಪ್ಪಿಕೊಂಡಿದ್ರು. ತಕ್ಷಣಕ್ಕೆ ೫ ಸಾವಿರ ಕೋಟಿ ಪಡೆಯೋಕೂ ಆಗಲಿಲ್ಲ. ೨೫ ಬಿಜೆಪಿ ಸಂಸದರು ಮಾಡಿದ್ದೇನು. ಯಾವ ಜನ ನಂಬಿ ವೋಟ್ ಹಾಕಿದ್ರು ಅದು ಆಗಲಿಲ್ಲ ಎಂದು ರಾಜ್ಯದ ಬಿಜೆಪಿ ಸಂಸದರ ವಿರುದ್ಧವೂ ಸಿದ್ದು ವಾಗ್ದಾಳಿ ನಡೆಸಿದರು.
ಮೋದಿ ಎದುರು ಬಿಜೆಪಿ ನಾಯಕರು ಮಾತೇ ಆಡಲ್ಲ. ಎಲ್ಲ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿರ್ತಾರೆ. ಯಡಿಯೂರಪ್ಪ ಅವರೇ ನಿಮಗೆ ಭಯ ಇದ್ರೆ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ. ನಾವು ಮಾತಾಡ್ತೇವೆ ಮೋದಿ ಎದುರು ಎಂದು ಸಿದ್ದರಾಮಯ್ಯ ಗುಡುಗಿದರು.
ಈಶ್ವರಪ್ಪ ಈಗ ಸಚಿವನಾಗಿದ್ದೀಯ. ಈಗಲಾದ್ರೂ ಸರಿಯಾಗಿ ಮಾತನಾಡೋಕೆ ಕಲಿಯಪ್ಪ.
ಪ್ರತಿಪಕ್ಷದಲ್ಲಿದ್ದಾಗ ಮಾತನಾಡಿದಂತೆ ಹೇಳಿಕೆ ಕೊಡಬೇಡ ಎಂದು ಸಚಿವ ಈಶ್ವರಪ್ಪಗೆ ಸಿದ್ದು ಝಾಡಿಸಿದರು.
ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ನೆರೆ ವಿಚಾರದಲ್ಲಿ ಸುಳ್ಳು ಹೇಳಿದ್ದೇ ಆಗಿದೆ. ಇಂತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸುಮ್ಮನೆ ಕೂರಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು
ಕೇಂದ್ರ ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಒಪ್ತಿಲ್ಲ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಹಾಮಳೆ, ಜಲಪ್ರಳಯದಿಂದ ಹಾನಿಯಾಗಿ ೪ ಕೋಟಿ ಜನ ತತ್ತರಿಸಿದ್ದಾರೆ. ಉಳಿದವರು ಬರದಿಂದ ತತ್ತರಿಸಿ ಹೋಗಿದ್ದಾರೆ. ಇದೊಂದು ರಾಷ್ಟ್ರೀಯ ವಿಪತ್ತು. ರಸ್ತೆ, ಸೇತುವೆ ಕೊಚ್ಚಿಹೋಗಿವೆ. ಮನೆಗಳು ಬಿದ್ದು ಜನ ಸಂಕಷ್ಟದಲ್ಲಿದ್ದಾರೆ. ಇಂತ ಸಂದರ್ಭದಲ್ಲಿ ಜನರಿಗೆ ಆತ್ಮವಿಶ್ವಾಸ ತುಂಬಬೇಕು.
ಆದರೆ ಸರ್ಕಾರ ಅಂತ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ. ೪೦ ಸಾವಿರ ಕೋಟಿ ಹಾನಿಯಾಗಿದೆ ಎಂಬ ವರದಿ ಬಂದಿದೆ. ಅಧಿಕಾರಿಗಳು ವರದಿ ನೀಡಿದ್ರೆ ಸರ್ಕಾರ ಒಪ್ತಿಲ್ಲ. ಸತ್ಯಾಂಶ ವರದಿಯನ್ನ ನೀಡಿದ್ರೂ ರಾಜ್ಯ ಸರ್ಕಾರ ಒಪ್ತಿಲ್ಲ. ಸರ್ಕಾರಕ್ಕೆ ಮರ್ಯಾದೆ ಹೋಗುತ್ತೆ ಅಂತ ತಳ್ಳಿಹಾಕಿದ್ದಾರೆ. ೪೦ ಸಾವಿರ ಕೋಟಿ ಬೇಡ ಕಡಿಮೆ ಮಾಡಿ ಅಂತ ಹೇಳ್ತಾರಂತೆ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿ ಎಂದು ವ್ಯಂಗ್ಯವಾಡಿದರು.
ಪ್ರವಾಹ ಸಂತ್ರಸ್ಥರಿಗೆ ಈ ರೀತಿ ಅನ್ಯಾಯ ಮಾಡುತ್ತಿದೆ. ಬೆಳೆ ವಿಮೆಯನ್ನ ರೈತರಿಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಲಿ. ಪ್ರವಾಹ ಸಂತ್ರಸ್ತರಿಗೆ ಸರಿಸುಮಾರು 3 ಸಾವಿರ ಕೋಟಿ ಹಣವನ್ನು ಬೆಳೆ ವಿಮೆಯಿಂದಲೇ ತರಬಹುದು. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸ್ತಿಲ್ಲ.
ಬೆಳೆ ವಿಮಾ ಕಂಪನಿಗಳು ಪ್ರತಿ ಬಾರಿ ರೈತರ ಹಣ ನುಂಗುತ್ತವೆ. ಈ ಬಾರಿ ವಿಮಾ ಕಂಪನಿಗಳು ರೈತರಿಗೆ ಬೆಳೆ ವಿಮೆ ನೀಡಲಿ. ರಾಜ್ಯ ಸರ್ಕಾರ ಬೆಳೆ ವಿಮೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ ಸರ್ವೇ ಮಾಡಿಸಲಿ. ಸರ್ವೇ ಮಾಡಿಸಿ ವಿಮಾ ಕಂಪನಿಗಳಿಗೆ ವರದಿ ನೀಡಿದ್ರೆ ರೈತರಿಗೆ ಬೆಳೆ ವಿಮೆ ಸಿಗಲಿದೆ ಎಂದು ಬಿಜೆಪಿ ಸರ್ಕಾರಕ್ಕೆ ಈಶ್ವರ್ ಖಂಡ್ರೆ ಆಗ್ರಹಿಸಿದರು.
ರಾಜ್ಯದಿಂದ ೨೫ ಸಂಸದರು ಆಯ್ಕೆಯಾಗಿದ್ದಾರೆ. ಒಬ್ಬೇ ಒಬ್ಬ ಸಂಸದ ಹೆಚ್ಚಿನ ಪರಿಹಾರ ಕೇಳಿಲ್ಲ.
ಅಮಿತ್ ಶಾ ಎದುರು ಮಾತನಾಡುವ ಎದೆಗಾರಿಕೆಯಿಲ್ಲ. ಇಂತವರನ್ನ ರಾಜ್ಯದ ಜನ ಆರಿಸಿಕಳಿಸಿದ್ದೀರಿ ಎಂದರು.
ತಾಕತ್ತಿದ್ರೆ ಅಧಿವೇಶನ ಕರೆಯಿರಿ
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಅಮಿತ್ ಶಾ ರಾಜ್ಯಕ್ಕೆ ಭೇಟಿ ಕೊಟ್ಟಿದ್ದು ಶೋಕಿಗಾ?
೨೫ ಸಂಸದರು ನೀವು ಗೆಣಸು ಕೆತ್ತುತ್ತಿದ್ದೀರಾ? ಯಾಕೆ ಕೇಂದ್ರದಿಂದ ಹೆಚ್ಚಿನ ನೆರವು ಘೋಷಿಸಲಿಲ್ಲ? ಪ್ರವಾಹದ ಸ್ಥಳಗಳಿಗೆ ಯಾಕೆ ಭೇಟಿ ನೀಡಲಿಲ್ಲ? ಜನ ನಿಮ್ಮನ್ನ ಆರಿಸಿಕಳಿಸಿದ್ದು ಯಾಕೆ? ತುಮಕೂರು, ಚಿತ್ರದುರ್ಗ, ಕೋಲಾರದಲ್ಲಿ ಬರವಿದೆ. ಬರದಿಂದ ಬೆಳೆಯಿಲ್ಲದೆ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಲಿಗೆ ನಿಮ್ಮ ಗಮನವೇನು? ನಿಮಗೆ ತಾಕತ್ತಿದ್ದರೆ ಧಂ ಇದ್ದರೆ ಒಂದು ವಾರದೊಳಗೆ ವಿಧಾನಮಂಡಲ ಅಧಿವೇಶನ ಕರೆಯಿರಿ ಎಂದು ಸವಾಲು ಹಾಕಿದರು.
ಅಧಿಕಾರವಿದೆ ಸಹಾಯಮಾಡಿ
ಮಾಜಿ ಸಚಿವ ಡಿ.ಕೆ. ಶಿವಕುಮಾರ, ವಿಧಾನಮಂಡಲ ಅಧಿವೇಶನವನ್ನ ಕರೆಯಬೇಕು. ಸದನದಲ್ಲಿ ಅನೇಕ ವಿಚಾರಗಳನ್ನ ಚರ್ಚಿಸಬೇಕು. ರಾಜ್ಯದಿಂದ ನಿಮ್ಮದೇ ೨೫ ಸಂಸದರು ಇದ್ದಾರೆ. ರಾಜ್ಯದಿಂದ ಹೋದವರೇ ಹಣಕಾಸು ಸಚಿವರಿದ್ದಾರೆ. ನೀವು ಏನು ಮಾತನಾಡಿದ್ದೀರಿ ಅದನ್ನ ಉಳಿಸಿಕೊಳ್ಳಿ.
ಸಂತ್ರಸ್ಥರಿಗೆ ೫ ಸಾವಿರ ಪ್ರತಿ ತಿಂಗಳು ಕೊಡ್ತೇವೆ ಅಂದ್ರಿ. ಮನೆ ಕಟ್ಟೋಕೆ ೫ ಲಕ್ಷ ಕೊಡ್ತೇವೆ ಅಂತ ಹೇಳಿದ್ದೀರಿ. ಅದರಂತೆಯೇ ನೀವು ನಡೆಯಬೇಕು. ಬಡವರ ಪರವಿದ್ದರೆ… ಅಧಿಕಾರವಿದೆ ಸಹಾಯಮಾಡಿ ಎಂದು ಆಗ್ರಹಿಸಿದರು.
ಗೃಹ, ಹಣಕಾಸು ಸಚಿವರು ರಾಜ್ಯಕ್ಕೆ ಬಂದು ಹೋಗಿದ್ದಾರೆ. ಒಂದೇ ಒಂದು ನಯಾಪೈಸೆ ಘೋಷಿಸಿಲ್ಲ. ೨೬ ದಿನ ಒಬ್ಬರೇ ಸಿಎಂ ಆಗಿ ಇತಿಹಾಸ ಸೃಷ್ಟಿಸಿದ್ದೀರಿ. ೧ ಲಕ್ಷ ಕೋಟಿ ಪ್ರವಾಹದಿಂದ ಲಾಸ್ ಆಗಿದೆ. ಇದರ ಪರಿಹಾರವನ್ನ ಮೊದಲು ಮಾಡಿ ಸ್ವಾಮಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಡಿಕೆಶಿ ಒತ್ತಾಯಿಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ್, ಹೆಚ್ಚಿನ ಕ್ಯೂಸೆಕ್ಸ್ ನೀರು ಹರಿದಿದ್ದರಿಂದ ಪ್ರವಾಹ ಬಂದಿದೆ.
ಈ ಪ್ರವಾಹಕ್ಕೆ ಸಾಕಷ್ಟು ಹಾನಿಯಾಗಿದೆ. ೬೦% ಜನ ಮುಳುಗಡೆಯ ಭೀತಿ ಎದುರಿಸಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಮನೆಗಳನ್ನ ಶಿಫ್ಟ್ ಮಾಡಬೇಕಿದೆ. ಮನೆ ಕಟ್ಟೋಕೆ ೫ ಲಕ್ಷ ನೀಡಿದ್ರೆ ಸಾಲಲ್ಲ. ೧೦ ಲಕ್ಷ ರೂ.ಪ್ರತಿ ಮನೆಗೆ ನೀಡಬೇಕು. ಪ್ರವಾಹದಿಂದ ಭೂಮಿ ಉಪಯೋಗಕ್ಕೆ ಬರದಂತಾಗಿದೆ. ಸವಳಾದ ಭೂಮಿಯನ್ನ ಮರುಟ್ರೀಟ್ ಮಾಡಬೇಕಿದೆ. ಮನೆ ನಿರ್ಮಾಣ ಮಾಡುವವರೆಗೆ ಸಮಯ ಹಿಡಿಯಲಿದೆ. ಅಲ್ಲಿಯವರೆಗೆ ಶೆಡ್, ಟಾಯ್ಲೆಟ್, ನೀರಿನ ವ್ಯವಸ್ಥೆ ಮಾಡಬೇಕಿದೆ. ಸರ್ಕಾರ ಮೊದಲು ಇದನ್ನ ಪರಿಹರಿಸಬೇಕಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ