Kannada NewsKarnataka News

ತಾರಸಿ ತೋಟದ ಮಾಹಿತಿ ಮತ್ತು ಇತರ ಮಹತ್ವದ ಸುದ್ದಿಗಳು

ಧ್ಯಾನಚಂದ್ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು: ಎಂ.ಪಿ. ಮರನೂರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಮೇಜರ್ ಧ್ಯಾನಚಂದ್ ರಂತಹ ಮಹಾನ್ ಕ್ರೀಡಾಪಟುವಿನ ಆದರ್ಶಗಳನ್ನು ಪ್ರತಿಯೊಬ್ಬ ಕ್ರೀಡಾ ಪಟುವು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಕ್ರೀಡಾ ಜೀವನದಲ್ಲಿ ಅತ್ಯುನ್ನತ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹಿರಿಯ ಸೈಕ್ಲಿಂಗ್ ತರಬೇತಿದಾರರಾದ ಎಂ.ಪಿ. ಮರನೂರ ತಿಳಿಸಿದರು.
ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಕ್ರೀಡಾ ವಸತಿ ನಿಲಯ ಆವರಣದಲ್ಲಿ (ಅ.೨೯) ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಮೇಜರ್ ಧ್ಯಾನಚಂದ್ ರವರು ಭಾರತ ಕಂಡ ಅತ್ಯಂತ ಉತ್ಕೃಷ್ಟ ಮಟ್ಟದ ಹಾಕಿ ಕ್ರೀಡಾಪಟು ಇವರಿಗೆ ಹಾಕಿ ಮಾಂತ್ರಿಕ ಎಂದು ಬಿರುದು ಗಿಟ್ಟಿಸಿಕೊಂಡು ಹಾಕಿ ಚೆಂಡನ್ನು ಗೋಲಿನೊಳಕ್ಕೆ ಅತ್ಯಂತ ಮಾಂತ್ರಿಕವಾಗಿ ಎದುರಾಳಿ ತಂಡಕ್ಕೆ ಗೊತ್ತಾಗದಂತೆ ತಮ್ಮ ಕೈಚಳಕದಿಂದ ಪ್ರಸಿದ್ದಿ ಆಗಿದ್ದರು.
ಒಲಂಪಿಕ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಚಿನ್ನ ತಂದು ಕೊಡುವಲ್ಲಿ ಪ್ರಮುಖ ಆಟಗಾರರಾಗಿದ್ದರು ಇಂಥ ಮಹಾನ್ ಚೇತನದ ಹೆಸರಿನಲ್ಲಿ ಭಾರತದ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆಯೆಂದು ಹೇಳಿದರು.
ಈಗಾಗಲೇ ಖೇಲೋ ಇಂಡಿಯಾ ಯೋಜನೆ ಜಾರಿಯಲ್ಲಿದ್ದು ಈ ವರ್ಷದಿಂದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಎಂಬ ಅಭಿಯಾನವನ್ನು ಇಂದಿನಿಂದ ಪ್ರಾರಂಭಗೊಳಿಸಿದ್ದು ಮುಂದಿನ ನಾಲ್ಕು ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ.
ಭಾರತದಲ್ಲಿನ ಪ್ರಜೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಆಶಾ ಭಾವನೆಯಿಂದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹಕರಿಗೆ ಆರೋಗ್ಯದ ಬಗ್ಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲೆಂದು ಎಲ್ಲ ಕ್ರೀಡಾಪಟುಗಳಿಗೆ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ, ತರಬೇತಿದಾರರು ಹಾಗೂ ಕ್ರೀಡಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಋಣ ಪರಿಹಾರ ವಿಧೇಯಕ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಋಣ ಪರಿಹಾರ ವಿಧೇಯಕ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಖಾಸಗಿ ಲೇವದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದುಕೊಂಡಿರುವಂತಹ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗದ ಜನರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ಉಪವಿಭಾಗದ ವ್ಯಾಪ್ತಿಯ ಬೆಳಗಾವಿ, ಹುಕ್ಕೇರಿ ಹಾಗೂ ಖಾನಾಪೂರ ತಾಲ್ಲೂಕುಗಳ ಅರ್ಹ ಸಾರ್ವಜನಿಕರು ಉಪವಿಭಾಗಾಧಿಕಾರಿ, ತಹಸೀಲ್ದಾರ್, ಸಹಕಾರ ಸಂಘಗಳ ಕಚೇರಿಗಳಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಯೊಂದಿಗೆ ಬೆಳಗಾವಿ ಉಪವಿಭಾಗ, ಉಪವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಸಾಲಗಾರರು ಆಧಾರ ಕಾರ್ಡ್, ಲೇವಾದೇವಿದಾರರು ನೀಡಿರುವ ರಶೀತಿ ಪ್ರತಿ, ಪಡಿತರ ಚೀಟಿ, ತಹಸೀಲ್ದಾರರಿಂದ ಪಡೆದ ಸಣ್ಣಹಿಡುವಳಿದಾರ ದೃಡೀಕರಣ, ಭೂ ರಹಿತ ಕೃಷಿ ಕಾರ್ಮಿಕರ ದೃಡೀಕರಣ, ಆದಾಯ ದೃಡೀಕರಣಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ ೨೨ ಕೊನೆಯ ದಿನವಾಗಿರುತ್ತದೆ.
ಕರ್ನಾಟಕ ಋಣ ಪರಿಹಾರ ವಿಧೇಯಕ-೨೦೧೮ ಜುಲೈ ೨೩ ರಿಂದ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂ ಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ, ತೆರಿಗೆ, ಉಪಕಾರ ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆಗೆ, ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪನಿ, ಭಾರತೀಯ ಜೀವಾ ವಿಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ ರಡಿಯಲ್ಲಿ ನೋಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಡಿ ನೋಂದಣಿಗೊಂಡ ಚಿಟ್ ಕಂಪನಿಗಳು ಇವುಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ ೨೦೧೮ ರ ವ್ಯಾಪ್ತಿಗೆ ಒಳಪಡುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಉಪವಿಭಾಗಾಧಿಕಾರಿಗಳು, ಬೆಳಗಾವಿ ಉಪವಿಭಾಗ, ಸಂಬಂಧಿಸಿದ ತಹಸೀಲ್ದಾರ್, ಸಹಕಾರ ಸಂಘಗಳ ಕಛೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾರಸಿ ತೋಟದ ಉಪಯೋಗ

ತಾರಸಿ ತೋಟದಿಂದ ಮನೆಯ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದಲ್ಲದೆ, ಕಟ್ಟಡಗಳ ಅತೀಯಾದ ಉಷ್ಣತೆಯನ್ನು ತಡೆದು ಧ್ವನಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ತೋಟಗಾರಿಕೆ ಇಲಾಖೆ ಹಾರ್ಟ ಕ್ಲಿನಿಕ್ ವಿಷಯ ತಜ್ಞರು ಅವರು ತಿಳಿಸಿದ್ದಾರೆ.
ಮನೆಯ ತಾರಸಿಯ ಮೇಲೆ ತರಕಾರಿ, ಹಣ್ಣು ಅಥವಾ ಹೂವುಗಳ ಹವ್ಯಾಸಿ ಬೇಸಾಯವೇ ತಾರಸಿ ತೋಟವಾಗಿದ್ದು, ತಾರಸಿ ತೋಟಕ್ಕೆ ಹೆಚ್ಚು ಆಳಕ್ಕಿಳಿಯದ ತಂತು ಬೇರುಗಳನ್ನು ಹೊಂದಿರುವ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವುದು ಸೂಕ್ತವಾಗಿರುತ್ತದೆ.

ಪ್ರಾರಂಭಿಸುವ ಬಗೆ:
ತಾರಸಿ ತೋಟಕ್ಕೆ ಯಾವುದೇ ಗ್ರಾತ್ರದ, ಆಕಾರದ, ತೂಕದ, ಪ್ಲಾಸ್ಟಿಕ್ ಅಥವಾ ಮಣ್ಣಿನ ಧಾರಕಗಳು, ಹಳೆಯ ಮಿನರಲ್ ವಾಟರ್ ಬಾಟಲಿಗಳು, ಪ್ಲಾಸ್ಟಿಕ್ ಬಾಕ್ಸ್ ಗಳು, ತೆಂಗಿನ ಚಿಪ್ ಗಳು ಮುರಿದ ಬಕೆಟುಗಳನ್ನು ಉಪಯೋಗಿಸಬಹುದು, ಮಣ್ಣು, ಮರಳು ಮತ್ತು ಗೊಬ್ಬರವನ್ನು ೧:೨:೧ ಪ್ರಮಾಣದಲ್ಲಿ ಬೆರೆಸಿ ಸ್ವಲ್ಪ ಎರೆಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಸೇರಿಸಿ ಮಿಶ್ರಣ ಮಾಡಬೇಕು.
ಕುಂಡದಲ್ಲಿ ನೀರು ಹೊರಹೋಗಲು ತಳಭಾಗದಲ್ಲಿ ಒಂದು ಬಸಿ ರಂಧ್ರ ಇರುವುದು ಅತ್ಯವಶ್ಯಕ, ಪ್ರಾರಂಭದಲ್ಲಿ ಕೊತ್ತಂಬರಿ, ಮೆಂತೆ, ಮೆಣಸಿನಕಾಯಿ, ಗಜ್ಜರಿ, ಉಳ್ಳಾಗಡ್ಡಿ ಮುಂತಾದ ತರಕಾರಿ ತರಕಾರಿಗಳನ್ನು ಬೆಳೆಸುವುದು. ತಾರಸಿ ತೋಟದ ಒಂದು ಚದರ ಮೀ.ಪ್ರದೇಶದಲ್ಲಿ ವರ್ಷಕ್ಕೆ ೨೫ ರಿಂದ ೫೦ ಕಿ.ಗ್ರಾಂ ನಷ್ಟು ತರಕಾರಿ ಬೆಳೆಯಬಹುದು.

ಲಾಭಗಳು:
ಕೀಟನಾಶಕ ಮುಕ್ತವಾಗಿರುವ ಆರೋಗ್ಯಕರ ಹಸಿರು ತಾಜ್ಯ ತರಕಾರಿಗಳ ಮತ್ತು ಹಣ್ಣುಗಳ ಲಭ್ಯತೆ, ತೋಟದಲ್ಲಿ ಕೆಲಸ ಮಾಡುವುದರಿಂದ ದೈಹಿಕ ಶ್ರಮ ವಾಯಮ, ಒತ್ತಡ ಮುಕ್ತತೆ ಮತ್ತು ಪ್ರಕೃತಿಗೆ ಹತ್ತಿರವಾಗಿರುವ ವಿನೂತನ ಅನುಭವವನ್ನು ಪಡೆದುಕೊಳ್ಳಬಹುದು, ನಿಮ್ಮ ತಾರಸಿ ತೋಟವು ಕಾಂಕ್ರೀಟ್ ಕಾಡಿನಂತಾಗಿರುವ ನಗರದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಶ್ರಮ ತಾಣವಾಗಬಲ್ಲದು.
ತಾರಸಿ ತೋಟದಿಂದ ಮನೆಯ ವಾತಾರಣದ ಉಷ್ಣಾಂಶವನ್ನು ೬ ರಿಂದ ೮ ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಮಾಡಬಹುದಾಗಿದೆ, ಇದರಿಂದ ಶೆ.೨೫ ರಷ್ಟು ಹವಾ ನಿಯಂತ್ರಕಗಳ ಕಡಿಮೆ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button