ಹರ್ಷ ಶುಗರ್ಸ್ ನಿಂದ ರೈತರಿಗೆ ಗಣೇಶ ಹಬ್ಬದ ಬಂಪರ್ ಕೊಡುಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ನೂತನವಾಗಿ ಆರಂಭವಾಗಿರುವ ಹರ್ಷ ಶುಗರ್ಸ್ ಫ್ಯಾಕ್ಟರಿ ಕಬ್ಬು ಬೆಳೆಗಾರರಿಗೆ ಗೌರಿ -ಗಣೇಶ ಹಬ್ಬದ ಸಂದರ್ಭದಲ್ಲಿ ಬಂಪರ್ ಕೊಡುಗೆ ನೀಡಿದೆ.
ಪ್ರವಾಹದಿಂದ ತತ್ತರಿಸಿದ್ದ ರೈತರಿಗೆ ಕಾರ್ಖಾನೆಯ ಈ ಕೊಡುಗೆ ತುಸು ನೆಮ್ಮದಿ ನೀಡಿದಂತಾಗಿದೆ.
ಈಗಾಗಲೆ ನೀಡಿರು ಕಬ್ಬಿನ ಬಿಲ್ ಜೊತೆಗೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 100 ರೂ. ನೀಡುವುದಾಗಿ ಹರ್ಷ ಶುಗರ್ಸ್ ಚೇರಮನ್ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಘೋಷಿಸಿದ್ದಾರೆ. ಅಲ್ಲದೆ ರೈತರ ಖಾತೆಗಳಿಗೆ ಈಗಾಗಲೆ ಹಣವನ್ನು ಜಮಾ ಮಾಡಿದ್ದಾರೆ.
ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಈಗಾಗಲೆ ಎಫ್ಆರ್ ಪಿ ದರದಂತೆ ಪ್ರತಿ ಟನ್ ಗೆ 2,612.50 ರೂ. ಜೊತೆಗೆ ಹರ್ಷ ಶುಗರ್ಸ್ 2808 ರೂ.ಗಳನ್ನು ನೀಡಿದೆ. ಅಂದರೆ, 195 ರೂ.ಗಳನ್ನು ಹೆಚ್ಚುವರಿಯಾಗಿ ಕಾರ್ಖಾನೆ ನೀಡಿದಂತಾಗಿದೆ.
2018-19ನೇ ಸಾಲಿನಲ್ಲಿ ಕಾರ್ಖಾನೆ ಪ್ರಾಯೋಗಿಕವಾಗಿ ಕಬ್ಬು ನುರಿಸಿತ್ತು. ಈ ಹಂಗಾಮು ಯಶಸ್ವಿಯಾಗಲು ಸಹಕರಿಸಿದ ಎಲ್ಲ ರೈತರಿಗೆ ಧನ್ಯವಾದ ಸಲ್ಲಿಸಿರುವ ಅವರು, ಎಲ್ಲರಿಗೂ ಗೌರಿ -ಗಣೇಶ ಹಬ್ಬದ ಶುಭಾಷಯ ಕೋರಿದ್ದಾರೆ.
2019-20ರ ಹಂಗಾಮಿಗೆ ಹತ್ತಿರದ ಕಾರ್ಖಾನೆಗಳು ನಿಗದಿಪಡಿಸುವ ದರ ಮತ್ತು ಕೇಂದ್ರ ಸರಕಾರ ನಿಗದಿಮಾಡುವ ದರವನ್ನವಲಂಬಿಸಿ ಬಿಲ್ ಪಾವತಿ ಮಾಡಲಾಗುವುದು. ಎಲ್ಲ ಕಬ್ಬು ಬೆಳಗಾರರು ಉತ್ತಮ ಕಬ್ಬು ಪೂರೈಸಿ ಕಾರ್ಖಾನೆ ಯಶಸ್ವಿಯಾಗಿ ನಡೆಯುವಂತೆ ಸಹಕರಿಸಬೇಕೆಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ