Kannada NewsKarnataka News

ಕಾಂಗ್ರೆಸ್ ನಾಯಕರ ನೀಚ ಕೆಲಸ ನೋಡಿ ಪ್ರತಿಭಟನೆ ಮಾಡಲಿ

ಕಾಂಗ್ರೆಸ್ ನಾಯಕರ ನೀಚ ಕೆಲಸ ನೋಡಿ ಪ್ರತಿಭಟನೆ ಮಾಡಲಿ

 

ಪ್ರಗತಿವಾಹಿನಿ ಸುದ್ದಿ, ಅಥಣಿ-

ನಾನು ಕೇವಲ ನೀಲಿ ಚಿತ್ರ ನೋಡಿರಬಹುದು ಅಥವಾ ನೋಡದೆ ಇರಬಹುದು. ಆದರೆ ಕಾಂಗ್ರೇಸ್ ಪಕ್ಷದ ನಾಯಕರು ಮಾಡಿದಂತಹ ನೀಚ ಕೆಲಸವನ್ನು ಹಿಂತಿರುಗಿ ನೋಡಿಕೊಂಡು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಲು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.

ಅವರು ಅಥಣಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ,  ನೆರೆ ಹಾವಳಿಯ ವಿಷಯದಲ್ಲಿ ರಾಜ್ಯದ ಬಿಜೆಪಿ ಸರಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ. ಅವರಿಗೆ ಟೀಕೆ ಮಾಡುವ ನೈತಿಕ ಹಕ್ಕು ಇಲ್ಲ ಎಂದು  ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.

ಹಿಂದೆ ಅಧಿಕಾರ ನಡೆಸಿದ ಸರಕಾರಗಳು ಎಷ್ಟು ಅನುದಾನವನ್ನು ನೀಡಿವೆ? ನಾವು ಎಷ್ಟು ಹಣ ನೀಡುತಿದ್ದೇವೆ ಎಂಬುದನ್ನು ಒಮ್ಮೆ ಟೀಕಾಕಾರರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.

ಶೀಘ್ರವೇ ಪ್ರಧಾನಿ ಭೇಟಿ

ನಮ್ಮ ಸಚಿವ ಸಂಪುಟ ಎಲ್ಲ ಸದಸ್ಯರು ನೆರೆಹಾವಳಿ ಪ್ರದೇಶಕ್ಕೆ ಭೇಟ್ಟಿ ನೀಡಿ ಸಮಗ್ರವಾದ ಅಧ್ಯಯನ ಮಾಡಿದ್ದೇವೆ. ಸದ್ಯದ  ಅಂಕಿ ಸಂಖ್ಯೆಯ ಪ್ರಕಾರ ಸುಮಾರು ೩೬ ಸಾವಿರ ಕೋಟಿ ರೂಗಳಷ್ಟು ಹಾನಿಯಾಗಿದೆ. ಇದು ಅಂತಿಮವಲ್ಲ.

ಇನ್ನೂ ಸರ್ವೆ ಕಾರ್ಯ ನಡೆದಿದೆ. ಬೆಳೆ ಹಾನಿ ಬಗ್ಗೆ ಸಂಪೂರ್ಣ ವರದಿ ಬಂದಿಲ್ಲ. ಶೀಘ್ರವೇ ನಾವು  ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಕೇಂದ್ರ ಸರಕಾರದ ಬರ ಅಧ್ಯಯನ ತಂಡ ರಾಜ್ಯದ ತುಂಬೆಲ್ಲ ಎರಡು ಮೂರು ದಿನಗಳ ಸಂಚಾರ ಮಾಡಿ ಸಮಗ್ರ ಮಾಹಿತಿ ಸಂಗ್ರಹ ಮಾಡಿದೆ. ಅದಲ್ಲದೆ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಸಚಿವರ ಮತ್ತು ಅಧಿಕಾರಿಗಳ ಸಭೆ ಮಾಡಿದ್ದಾರೆ.

ಶೇ.95 ತಾತ್ಕಾಲಿಕ ಅನುದಾನ

ರಾಜ್ಯದ ನೆರೆ ಹಾವಳಿ ವಿಷಯದ ಬಗ್ಗೆ ಸಂಪೂರ್ಣ ಚರ್ಚೆ ಮಾಡಿದ್ದಾರೆ. ಹಿಂದೆಂದೂ ಕಂಡರಿಯದ ನೆರೆ ಈ ಭಾರಿ ಕಂಡಿದೆ ಎಂದು ಕೇಂದ್ರ ತಂಡ ನಮ್ಮ ಮುಂದೆ ಹೇಳಿದೆ. ಇದರ ಬಗ್ಗೆ ಎಲ್ಲ ಇಲಾಖೆಯ ಮುಖಾಂತರ ವರದಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಹಿಂದೆ ಅಧಿಕಾರ ನಡೆಸಿದ ಸರಕಾರಗಳು ತಾತ್ಕಾಲಿಕ ಪರಿಹಾರವನ್ನು ಕೇವಲ ೨-೩ ಸಾವಿರ ನೀಡಿವೆ. ನಮ್ಮ ಸರಕಾರ ತಾತ್ಕಾಲಿಕ ಅನುದಾನವನ್ನು ೧೦ ಸಾವಿರ ನೀಡುತ್ತಿದೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದೆೇವೆ. ಅದಲ್ಲದೆ ಯಾರಿಗೆ ಖುಲ್ಲಾ ನಿವೇಶನ ಇವೆಯೋ ಅಂಥಲ್ಲಿ ಅವರು ಶೇಡ್ಡುಗಳನ್ನು ನಿರ್ಮಿಸಿಕೊಂಡರೆ ತಲಾ ೫೦ ಸಾವಿರ ನೀಡುತ್ತೇವೆ.

ಯಾರು ಬಾಡಿಗೆ ಮನೆಯಲ್ಲಿ ಇರುತ್ತಾರೆ ಅವರಿಗೆ ಪ್ರತಿ ತಿಂಗಳಿಗೆ ೫ ಸಾವಿರದಂತೆ ಪರಿಹಾರ ನೀಡುತ್ತೇವೆ. ಸಂಪೂರ್ಣ ಮನೆ ಹಾನಿಯಾದರೆ ೫ ಲಕ್ಷ ರೂ., ಶಿಥಿಲಾವಸ್ಥೆ ಆಗಿದ್ದರೆ 1 ಲಕ್ಷರೂ ಅನುದಾನವನ್ನು ನೀಡಲಾಗುವದು.

ಈಗಾಗಲೆ ತಾತ್ಕಾಲಿಕವಾಗಿ ನೀಡುವ ಅನುದಾನ ವಿತರಣೆ ಕಾರ್ಯ ಶೇ ೯೫ ರಷ್ಟು ಆಗಿದೆ. ಇನ್ನೂ ಶೇ.೫ ಭಾಗ ತಾಂತ್ರಿಕ ಅಡೆತಡೆ ಇಂದ ಬಾಕಿ ಉಳಿದಿವೆ.  ರೇಶನ್ ಕಾರ್ಡ ಹೊಂದಿದವರಿಗೆ ಎಲ್ಲರಿಗೂ ಈ ಅನುದಾನ ತಲುಪಿದೆ ಎಂದು ಹೇಳಿದರು.

ವಿಶೇಷ ಪ್ರಕರಣ ಎಂದು ಪರಿಗಣಿಸಲು ನಿರ್ಧಾರ:

ನೆರೆ ಹಾವಳಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಗಳ ಶವ ಸಿಕ್ಕಮೇಲೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾನೂನಿನಲ್ಲಿ ನಿಯಮವಿದೆ. ಆದರೆ ಬೆಳಗಾವಿ ಜಿಲ್ಲೆಯ ಎರಡು ಶವಗಳು ಕೊಚ್ಚಿಕೊಂಡು ಹೋಗಿ ಇನ್ನೂ ದೊರೆತಿಲ್ಲ.

ಅಂಥ ಕುಟುಂಬಗಳಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲು ನಾವು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದೇವೆ. ಅವರು ಸಹ ಇವೆರಡೂ ಪ್ರಕರಣಗಳು ವಿಶೇಷ ಪ್ರಕರಣ ಎಂದು ಭಾವಿಸಿ ಅನುದಾನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

೧೫೦ ಸ್ಥಾನ ಗಲ್ಲುವ ಗುರಿ-

ನಮ್ಮ ಪಕ್ಷ ನನ್ನ ಮೇಲೆ ಭರವಸೆ ಇಟ್ಟು ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅವರು ವಹಿಸಿಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ರಾಜ್ಯದಲ್ಲಿ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತೇನೆ.  ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂದು ಬಹಿರಂಗವಾಗಿ ಹೇಳುವುದಿಲ್ಲ. ಅದನ್ನು ಪಕ್ಷದ ವೇದಿಕೆಯ ಮೇಲೆ ಚರ್ಚೆ ಮಾಡಿ ಸಲಹೆಗಳನ್ನು ನೀಡುತ್ತೇನೆ.

೨೦೨೩ ರಲ್ಲಿ ಜರಗುವ ವಿಧಾನ ಸಭೆ ಚುನಾವಣೆಯಲ್ಲಿ ೧೫೦ ಸ್ಥಾನ ಗೆಲ್ಲವ ಗುರಿ ಇದೆ. ಆಗ ಗೆಲವಿಗಾಗಿ ಏನೇನು ಸಂಘಟನೆ ಮಾಡಬೇಕು ಅದನ್ನೆಲ್ಲ ಮಾಡುತ್ತೇವೆ. ಅದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳಿದರು. ಮುಂದೆ ಬರುವ ಉಪ ಚುನಾವಣೆಯಲ್ಲಿ ೧೭ ಸ್ಥಾನಗಳನ್ನು ಗೆಲ್ಲುತ್ತೇವೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಸಾರಿಗೆ ಇಲಾಖೆಯ ಕುರಿತು-

ಸಾರಿಗೆ ಇಲಾಖೆ ಭಾರಿ ನಷ್ಟದಲ್ಲಿದ್ದು ಇದನ್ನು ಕಡಿಮೆ ಮಾಡಲು ಎಲ್ಲ ಕ್ರಮ ಕೈಗೊಳ್ಳುತ್ತೇನೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಸಾರಿಗೆ ಇಲಾಖೆಯಲ್ಲಿ ಕೆಲವು ಸೋರಿಕೆ ಇವೆ. ಇದನ್ನು ತಡೆಗಟ್ಟಲಾಗುವದು.

ಇಲಾಖೆಯನ್ನು ಲಾಭದತ್ತ ತರುವುದಕ್ಕೆ ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಒಳ್ಳೆಯ ಗುಣಮಟ್ಟದ ಜನ ಸೇವೆಯನ್ನು ಒದಗಿಸಲಾಗುವುದು. ಸಾರ್ವಜನಿಕರು ಆದಷ್ಟು ಸಾರಿಗೆ ಇಲಾಖೆ ಬಸ್ಸುಗಳಲ್ಲಿ ಸಂಚರಿಸಬೇಕೆಂದು ವಿನಂತಿಸಿದರು.

ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು. ಈಗಾಗಲೇ ಎಲ್ಲ ಅಧಿಕಾರಿಗಳ ಸಭೆ ಮಾಡಿ ಯಾವ ಯಾವ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ಏಕೆ ಇಲ್ಲ ಎನ್ನುವ ಕಾರಣ ನೀಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಡಿಕೆ. ಶಿವಕುಮಾರ ಆದಾಯ ತೆರಿಗೆ ಇಲಾಖೆ ವಿಚಾರಣೆ ಕುರಿತು ಮಾತನಾಡಿ, ಇದು ಅವರ ವಯಕ್ತಿಕ ವಿಷಯ. ಇದರ ಬಗ್ಗೆ ನಾನು ಹೆಚ್ಚಿಗೆ ಹೇಳಿಕೆ ನೀಡಲ್ಲ ಎಂದು ಹೇಳಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button