ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಶಾಲಿಗೊಳಿಸಬೇಕಾದರೆ ಚುನಾವಣೆ ಮತ್ತು ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ಅಗತ್ಯವಿದೆ. ಆದ್ದರಿಂದ ಸೆ.1ರಿಂದ ಅಕ್ಟೋಬರ್ 15 ರವರೆಗೆ ನಡೆಯುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಭಾನುವಾರ (ಸೆ.1) ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿ ನಡೆಯುತ್ತದೆ. ಆದರೆ ಮತದಾನದ ದಿನದಂದು ನಮ್ಮ ಹೆಸರು ಇಲ್ಲ ಎಂಬ ದೂರುಗಳು ಬರುತ್ತವೆ. ಮತದಾರರು ಜಾಗರೂಕತೆ ವಹಿಸಿದರೆ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಮುಂಚಿತವಾಗಿಯೇ ಸರಿಪಡಿಸಬಹುದು.
ಆ ಕಾರಣಕ್ಕಾಗಿಯೇ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತದೆ. ಆದ್ದರಿಂದ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಮತ್ತು ಹೆಸರು ಕೈಬಿಡಡುವುದಕ್ಕೆ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ.
ಜನವರಿ 1 ನೇ ತಾರೀಖನ್ನು ಅರ್ಹತಾ ದಿನಾಂಕ ಎಂದು ಪರಿಗಣಿಸಿ ಪ್ರತಿವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ.
ಸೆಪ್ಟೆಂಬರ್ 1ರಿಂದ ಅಕ್ಟೋಬರ್ 15 ರವರೆಗೆ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯ ನಡೆಯಲಿದೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲೋಪದೋಷಗಳಿದ್ದರೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಿಪಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ನಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರಜಾಪ್ರಭುತ್ವದಲ್ಲಿ ನಮಗೆ ನೀಡಲಾಗಿದೆ.
ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ನಮ್ಮೆಲ್ಲರ ಹಬ್ಬ. ಮತದಾನ ಮಾಡುವಾಗ ಎಚ್ಚರ ತಪ್ಪಿದರೆ ನಾವೇ ಪರಿತಪಿಸಬೇಕಾಗುತ್ತದೆ.
ಮತದಾನ ಸಂವಿಧಾನಾತ್ಮಕ ಹಕ್ಕು. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಎಲ್ಲರೂ ತಪ್ಪದೇ ಮತದಾನಕ್ಕೆ ಮುಂದಾಗಬೇಕು ಎಂಸು ಅವರು ಕರೆ ನೀಡಿದರು.
ತಮ್ಮ ಹೆಸರು ಖಾತ್ರಿಪಡಿಸಿಕೊಳ್ಳಿ:
ಅರ್ಹ ಯುವಕರು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ನಿಗದಿತ ಅರ್ಜಿ ನಮೂನೆ 6 ಲಭ್ಯವಿರುತ್ತದೆ.
ಇದಲ್ಲದೇ ಆನ್ ಲೈನ್ ನಲ್ಲೆ ಮತದಾರರ ಪಟ್ಟಿ ಲಭ್ಯವಿದ್ದು, ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಮರಣ ಹೊಂದಿರುವವರ ಹೆಸರುಗಳನ್ನು ಅಧಿಕಾರಿಗಳೇ ತೆಗೆಯಲು ಅವಕಾಶವಿಲ್ಲ; ಅಂತಹ ಹೆಸರುಗಳನ್ನು ತೆಗೆಯಬೇಕಾದರೆ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂತಹ ಕುಟುಂಬದವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಅದೇ ರೀತಿ ರಾಜಕೀಯ ಪಕ್ಷಗಳು ಮಾಧ್ಯಮಗಳು ಈ ಪ್ರಕ್ರಿಯೆಯಲ್ಲಿ ಸಹಕರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಹಾಗೂ ಹೆಸರು ತಪ್ಪದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದರು.
ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಆನ್ ಲೈನ್ ಮೂಲಕವು ಪರಿಶೀಲನೆಗೆ ಅವಕಾಶವಿರುವುದರಿಂದ ಎಲ್ಲರೂ ಮತದಾನದ ಮೂಲಕ ದೇಶದ ಭವಿಷ್ಯ ರೂಪಿಸಲು ಕೈಜೋಡಿಸಬೇಕು ಎಂದರು.
ಚುನಾವಣೆ ಕೂಡ ಒಂದು ಹಬ್ಬ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, “ದೇಶದ ಎಲ್ಲ ನಾಗರಿಕರು ಭಾಗವಹಿಸುವಂತಹ ಚುನಾವಣೆ ಕೂಡ ಒಂದು ಹಬ್ಬವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು” ಎಂದರು.
ಸಂವಿಧಾನದ 326 ರ ಪರಿಚ್ಚೇದದಲ್ಲಿ ಹದಿನೆಂಟು ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರವಿ ಭಜಂತ್ರಿ, ಮತದಾರರ ವಿವರಗಳನ್ನು ನೂರರಷ್ಟು ಸರಿಪಡಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮದ ಉದ್ದೇಶವಾಗಿದೆ.
ಜನವರಿ 1, 2020 ಕ್ಕೆ ಹದಿನೆಂಟು ವರ್ಷ ಪೂರ್ಣಗೊಳಿಸುವ ಯುವಕ/ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮತದಾರರ ಪಟ್ಟಿಯಲ್ಲಿನ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆದು ಹಾಕುವುದು ಸೇರಿದಂತೆ ವಿವಿಧ ಬಗೆಯ ಪರಿಷ್ಕರಣೆಯನ್ನು ಪರಿಶೀಲನಾ ಸಂದರ್ಭದಲ್ಲಿ ಮಾಡಲಾಗುವುದು ಎಂದರು.
ಪ್ರಚಾರ ರಾಯಭಾರಿ ರಾಘವೇಂದ್ರ ಅಣವೇಕರ ಅವರು ಮಾತನಾಡಿ, ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಭಾರತೀಯ ಜನತಾಪಕ್ಷದ ಜಿಲ್ಲಾ ಪದಾಧಿಕಾರಿ ರಾಜೇಂದ್ರ ಹರಕುಣಿ ಅವರು, ಕಳೆದ ಬಾರಿ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕ ವಾಗಿ ನಡೆಸಿದ ಜಿಲ್ಲಾಡಳಿತ ವನ್ನು ಶ್ಲಾಘಿಸಿದರು.
ಮತದಾರರ ಪಟ್ಟಿಯಲ್ಲಿ ಕೆಲವೆಡೆ ಎರಡೆರಡು ಕಡೆಗಳಲ್ಲಿ ಹೆಸರುಗಳು ಕಂಡುಬಂದಿದ್ದು, ಈ ಬಾರಿ ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ.ಸ್ವಾಗತಿಸಿದರು. ಹೆಚ್ಚುವರಿ ಅಪರ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ದಿನೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.
ಮತದಾರರ ಸಾಕ್ಷರತಾ ಕ್ಲಬ್ ಪದಾಧಿಕಾರಿಗಳು, ವಿದ್ಯಾರ್ಥಿಗಳು, ನೋಂದಾಯಿತ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ