Kannada NewsLatest

ನಾಳೆ ಯಡಿಯೂರಪ್ಪ- ಫಡ್ನವೀಸ್ ಮುಖಾಮುಖಿ

ನಾಳೆ ಯಡಿಯೂರಪ್ಪ- ಫಡ್ನವೀಸ್ ಮುಖಾಮುಖಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಖಾಮುಖಿಯಾಗಲಿದ್ದಾರೆ. ಬೆಳಗ್ಗೆ 8.30ಕ್ಕೆ ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯಲಿರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ದೇವೇಂದ್ರ ಫಡ್ನವೀಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದಾರೆ. ಅದರಲ್ಲಿ ಪಾಲ್ಗೊಂಡು ಇಡೀ ದಿನ ಅವರ ಆತಿಥ್ಯದಲ್ಲಿರುವ ಯಡಿಯೂರಪ್ಪ, ಕರ್ನಾಟಕ-ಮಹಾರಾಷ್ಟ್ರ ನದಿ ನೀರಿನ ವಿಷಯವನ್ನೂ ಪ್ರಸ್ತಾಪಿಸಲಿದ್ದಾರೆ ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಕೃಷ್ಣಾ ನದಿಗೆ ಬೇಕಾದಾಗ ನೀರು ಬಿಡದಿರುವ, ಬೇಡವಾದಾಗ ಮುನ್ಸೂಚನೆ ನೀಡದೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಮಹಾರಾಷ್ಟ್ರ ಧೋರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಮಾತನಾಡುವ ನಿರೀಕ್ಷೆ ಇದೆ. ಕರ್ನಾಟಕ-ಮಹಾರಾಷ್ಟ್ರ ನಡುವೆ ನೀರಿಗೆ ಸಂಬಂಧಿಸಿದಂತೆ ಶಾಶ್ವತ ಒಪ್ಪಂದ ಅಗತ್ಯವಿದೆ ಎನ್ನುವ ವಿಷಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ಈ ಕುರಿತು ಮಾತುಕತೆಗೆ ನಾಳೆ ಚಾಲನೆ ಸಿಗಬಹುದೆನ್ನಲಾಗಿದೆ.

ಇದರ ಜೊತೆಗೆ, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಸಹ ಕರ್ನಾಟಕಕ್ಕೆ ಸಹಕಾರ ನೀಡುವಂತೆ ಯಡಿಯೂರಪ್ಪ ಫಡ್ನವೀಸ್ ಅವರ ಬಳಿ ವಿನಂತಿಸುವ ಸಾಧ್ಯತೆ ಇದೆ. ಈಗ ಮೂರೂ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರವಿರುವುದರಿಂದ ಮಹದಾಯಿ ವಿವಾದ ಮುಕ್ತಾಯ ಮಾಡಲು ಗೋಲ್ಡನ್ ಟೈಮ್ ಎಂದೇ ಪರಿಗಣಿಸಲಾಗಿದೆ.

ಈಗ ಬಗೆಹರಿಯದಿದ್ದರೆ ಇನ್ನೆಂದೂ ಬಗೆಹರಿಯುವುದಿಲ್ಲ ಎನ್ನುವ ವಾತಾವರಣವಿದೆ. ಈ ಅವಕಾಶವನ್ನು ಬಳಸಿಕೊಂಡಿ ಯಡಿಯೂರಪ್ಪ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದೆನ್ನಲಾಗುತ್ತಿದೆ.

ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಹಾಗೂ ಅಶ್ವತ್ಥ ನಾರಾಯಣ ಯಡಿಯೂರಪ್ಪ ಅವರ ಜೊತೆಗೆ ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ.

ಕೃಷ್ಣಾ ನದಿ ನೀರಿನ ಸಮಸ್ಯೆಯನ್ನು ಲಕ್ಷ್ಮಣ ಸವದಿ ಚೆನ್ನಾಗಿ ಅರಿತಿರುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಕಾರಿಯಾಗಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button