*ಎರಡು ಮನಸ್ಸು ಒಂದಾಗಲು ವಧು ವರರ ಸಮಾವೇಶ: ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ ಹಿರೇಮಠ*
ಪ್ರಗತಿವಾಹಿನಿ ಸುದ್ದಿ: ವೀರಶೈವ ಲಿಂಗಾಯತ ಪಂಗಡದವರಿಗೆ ವಧು ವರರ ಸಮಾವೇಶ ನಡೆಸುತ್ತಿರುವುದು ಎರಡು ಮನಸ್ಸುಗಳನ್ನು ಒಂದು ಮಾಡಲು. ಪೋಷಕರು ಹೊಂದಾಣಿಕೆ ಮಾಡಿಕೊಂಡು ಮದುವೆ ಮಾಡಿಕೊಳ್ಳಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಭಾನುವಾರ ಗುರುಶಾಂತೇಶ್ವರ ವಧು ವರರ ಮಾಹಿತಿ ಕೇಂದ್ರದಿಂದ ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 18ನೇ ವಧು ವರರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಆಚಾರ ವಿಚಾರಗಳನ್ನು ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ವಧು ವರರ ಸಮಾವೇಶದಲ್ಲಿ ಯುವಕ, ಯುವತಿಯರು ತಮ್ಮ ಸಂಗಾತಿಯನ್ನು ಆರಿಸಿಕೊಳ್ಳಲು ಸಹಾಯ ಮಾಡಿರುವುದು ಶ್ಲಾಘನೀಯ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವಧು ವರರ ಸಮಾವೇಶ ಮಾಡುವುದು ಯಾರೂ ಮಧ್ಯವರ್ತಿಗಳಿಲ್ಲದೆ ನೇರವಾಗಿ ಯುವಕ, ಯವತಿಯರಿಗೆ ಮದುವೆ ಮಾಡಿಕೊಳ್ಳುವ ಅವಕಾಶ ಇದಾಗಿದೆ. ವಧು ವರರ ಸಮಾವೇಶದಲ್ಲಿ ಹೊಂದಾಣಿಕೆಯಾಗಿ ಮದುವೆಯಾದವರು ಸಮಾವೇಶದ ಆಯೋಜಕರಿಗೆ ಹೇಳುವುದಿಲ್ಲ. ವೀರಶೈವ ಲಿಂಗಾಯತ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಹುಕ್ಕೇರಿ ಹಿರೇಮಠ ಶ್ರೀಗಳು ಮಾಡುತ್ತಿರುವ ಕೆಲಸ ಅನನ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದೀಲಿಪ ಕುರಂದವಾಡೆ ಮಾತನಾಡಿ, ವಧು ವರರ ಸಮಾವೇಶದಲ್ಲಿ ಯುವಕ, ಯುವತಿಯರನ್ನು ಹೊಂದಾಣಿಕೆ ಮಾಡುವ ಕೆಲಸ ಮಾಡುತ್ತದೆ. ಯುವಕ, ಯುವತಿಯ ಬಗ್ಗೆ ಪೋಷಕರು ಎಚ್ಚರಿಕೆಯಿಂದ ವಿಚಾರಣೆ ಮಾಡಿ ಮದುವೆ ಮಾಡಿಕೊಡಬೇಕು. ಇತ್ತೀಚಿನ ದಿನಮಾನಗಳಲ್ಲಿ ಆನ್ ಲೈನ್ ನಲ್ಲಿ ಫೋಟೋ ಹಾಕಿ ಹೊಂದಾಣಿಕೆ ಮಾಡಿಕೊಂಡು ಸಂಜೆ ಮದುವೆಯಾದರೆ ಮಾರನೆ ದಿನ ವಿಚ್ಛೇದನವಾಗುವ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಿಮ್ಮ ಮಕ್ಕಳಿಗೆ ವಧು ಹಾಗೂ ವರರನ್ನು ಹುಡುಕುವಾಗ ಪರಿಪೂರ್ಣ ಮಾಹಿತಿ ಕಲೆ ಹಾಕಬೇಕು. ಸರಕಾರಿ ನೌಕರಿ ಬೇಕು ಎಂದು ಹೇಳುವ ಯುವತಿಯ ಫೋಷಕರು ರೈತರ ಮಕ್ಕಳಿಗೆ ಕೊಡಬೇಕು. ನಿಮ್ಮ ಯುವತಿಗೆ ಚೆನ್ನಾಗಿ ನೋಡಿಕೊಳ್ಳುವ ಯುವಕನೊಂದಿಗೆ ಮದುವೆ ಮಾಡಿಕೊಡಿ ಎಂದರು.
ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ವಧುವರರ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿರುವುದು ಸಮಾಜದ ಯುವಕ, ಯುವತಿಗೆ ಒಳ್ಳೆಯ ಸಂಗಾತಿ ಆರಿಸಿಕೊಳ್ಳಲು ಈ ಸಮಾವೇಶದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಶಾಂತೇಶ್ವರ ವಧು ವರರ ಮಾಹಿತಿ ಕೇಂದ್ರದ ಅಧ್ಯಕ್ಷ ಶಿವಾನಂದ ಝೀರಲಿ, 17 ವಧುವರರ ಸಮಾವೇಶ ಮಾಡಿ 18ನೇ ಸಮಾವೇಶವನ್ನು ಬೆಳಗಾವಿಯ ಗುರುಶಾಂತೇಶ್ವರರ ಕೃಪೆಯಿಂದ ಹುಕ್ಕೇರಿ ಹಿರೇಮಠದಲ್ಲಿ ಮಾಡುತ್ತಿದ್ದೇವೆ. ಈ ಸಮಾವೇಶದಲ್ಲಿ ಸಾಕಷ್ಟು ಜನ ತಮ್ಮ ಮಕ್ಕಳಿಗೆ ಗಂಡು, ಹೆಣ್ಣನ್ನು ಪಡೆದುಕೊಂಡು ಸಮೃದ್ಧಿ ಜೀವನ ನಡೆಸುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ನಿರೂಪಣೆ ಭೀಮಾನಂದ ಮಾಡಿದರು. ಈ ಸಂದರ್ಭದಲ್ಲಿ ನಾಗೇಂದ್ರ ಪ್ರಸಾದ, ಗುಂಡು ಪಾಟೀಲ್, ವೀರುಪಾಕ್ಷಯ್ಯ ನೀರಲಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ