ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಎಕ್ಸಿಟ್ ಪೋಲ್ ಸುಳ್ಳಾಗಲಿವೆ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು.
ಸಮೀಕ್ಷೆ ನಡೆಸುವ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ದಾಟಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 85 ಸ್ಥಾನ ಮಾತ್ರ ಕೊಟ್ಟಿದ್ದರು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ. ಜೊತೆಗೆ ನಾನು ನಡೆಸಿದ್ದ ಖಾಸಗಿ ಸಮೀಕ್ಷೆ ಪ್ರಕಾರದಂತೆ ಜನ ನಮಗೆ 136 ಸ್ಥಾನ ನೀಡಿದರು.
ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ನಂಬಿಕೆ ಬಂದಿದೆ. ಇವು ನಮ್ಮ ಕೈ ಹಿಡಿಯಲಿವೆ. ಮೊದಲ ಹಂತದ ಚುನಾವಣೆಗಿಂತ ಎರಡನೇ ಹಂತದ ಚುನಾವಣೆಯಲ್ಲಿ ಎಐಸಿಸಿ ನೀಡಿದ ಗ್ಯಾರಂಟಿಗಳ ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿವೆ. ಗ್ಯಾರಂಟಿಗಳು ದೇಶದ ಜನರ ಮನಸ್ಸು ಗೆದ್ದಿವೆ.
ಕಾಂಗ್ರೆಸ್ ಅಭಿವೃದ್ಧಿ ವಿಚಾರಗಳ ಮೇಲೆ ಹಾಗೂ ಬಿಜೆಪಿಯವರು ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುತ್ತಾರೆ. ದೇಶದ ವಿಚಾರ ಹೇಳುವುದಿಲ್ಲ, ಕರ್ನಾಟಕದಲ್ಲಿ ಎರಡಂಕಿ ದಾಟುತ್ತೇವೆ ಎನ್ನುವ ಆತ್ಮ ವಿಶ್ವಾಸವಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ