ಕೋಣ, ಹಂದಿ ಕೂಯ್ದು ಕೇಡು ಬಯಸಲ್ಲ ನಾವು, ಕೇಡು ಬಯಸೋದು ಅವರ ಸಂಸ್ಕೃತಿ: ಡಿಕೆಶಿ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ: ಡಿಕೆಶಿ ಅವರಿಗೆ ರಕ್ಷಣೆ ಮಾಡೋದಕ್ಕೆ ದೇವರು ಇರುವಂತೆ ನಮಗೂ ದೇವರಿದ್ದಾನೆ. ನಾನು ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ರಾಜರಾಜೇಶ್ವರ ದೇವರಿಗೇ ಇದನ್ನು ಬಿಡುತ್ತೇನೆ, ರಾಜರಾಜೇಶ್ವರ ದೇವರೆ ಅವರಿಗೆ ಶಿಕ್ಷೆ ಕೊಡಲಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಾನು ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ನಮಗೆ ಇರೋ ದೋಷ ಪರಿಹಾರಕ್ಕೆ ದೇವಾಲಯಕ್ಕೆ ಹೋಗ್ತೀವಿ ಹೊರತು ಯಾಗ ಮಾಡುವುದಕ್ಕಲ್ಲ. ಯಾಗ ಮಾಡೋದು ಡಿಸಿಎಂ ಡಿಕೆ ಶಿವಕುಮಾರ್ ಸಂಸ್ಕೃತಿ. ನಮ್ಮ ಸರ್ಕಾರದ ನಾಶಕ್ಕಾಗಿ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ” ಎಂಬ ಪುರಂದರ ದಾಸರ ಕೀರ್ತನೆಯ ಮೂಲಕ ತಿರುಗೇಟು ನೀಡಿದರು.
ಕಳ್ಳನಿಗೆ ಮಳ್ಳನ ಸಾಕ್ಷಿ ಎಂಬಂತೆ ಅವರೆ ತಮ್ಮ ನಮ್ಮ ಹೆಸರು ಹೇಳುತ್ತಿದ್ದಾರೆ. ನಾನು ಎರಡು ಬಾರಿ ಸಿಎಂ ಆಗಿದ್ದೆ. ಕೋಣ, ಕುರಿ ಕಡಿದು ಆಗಿಲ್ಲ. ದೇವರು ಕೊಟ್ಟು, ಆಗಿದ್ದೇನೆ. ದೇವೇಗೌಡರು ಅಧಿಕಾರ ಅನುಭವಿಸಿದ್ದೇ ಕಡಿಮೆ ಅವಧಿ. ಅದೇನು ಕೋಳಿ, ಕುರಿ ಕಡಿದು ಮಾಡಿ ಆಗಿದ್ದಾ? ಡಿಕೆ ಶಿವಕುಮಾರ್ ದೇವರು, ಶರಣರ ಜೊತೆ ಚೆಲ್ಲಾಟ ಆಡಬಾರದು ಎಂದು ಗುಡುಗಿದರು.
ಡಿಸಿಎಂ ಆಗಿದ್ದರೂ ಆ ಸ್ಥಾನದ ಗೌರವ, ಮೌಲ್ಯ ಏನು ಅಂತ ಅವರಿಗೆ ಅರ್ಥ ಅಗಿಲ್ಲ. ಒಟ್ಟಿನಲ್ಲಿ ನಮ್ಮ ಕುಟುಂಬ ಮುಗಿಸಲೇಬೇಕು ಅಂತ ಶ್ರಮಪಡ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಯಾಗದ ಮಾತು ಹೇಳುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನನಗೆ ತಿಳಿವಳಿಕೆ ಬಂದಾಗಿನಿಂದ ಕುರಿ, ಕೋಣ, ಮೇಕೆ ಕಡಿಯೋದು ಯಾವತ್ತೂ ಮಾಡಿಲ್ಲ. ಹಿಂದೂ ಸಂಸ್ಕೃತಿಯಲ್ಲಿ ಇರೋ ಧಾರ್ಮಿಕವಾಗಿ ನಾವು ಪೂಜೆ ಮಾಡುತ್ತೇವೆ. ಯಾಗ ಮಾಡೋದು ಡಿಕೆಶಿ ಸಂಸ್ಕೃತಿ ಎಂದು ಕಿಡಿಕಾರಿದರು.
*ನಮ್ಮ ಕುಟುಂಬದಲ್ಲಿ ಕೋಣ, ಮೇಕೆ ಕಡಿಯಲ್ಲ*
ಅವರು ನಮ್ಮ ಕುಟುಂಬದ ಮೇಲೆ ಏನೆಲ್ಲಾ ಚಿತಾವಣೆ ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ಯಾವತ್ತೂ ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ನಮ್ಮಿಬ್ಬರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇನ್ನೊಬ್ಬರಿಗೆ ಕೇಡು ಬಯಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು ಕುಮಾರಸ್ವಾಮಿ ಅವರು.
ಕೋಣ, ಹಂದಿ ಕೂಯ್ದು ಕೇಡು ಬಯಸಲ್ಲ ನಾವು, ಕೇಡು ಬಯಸೋದು ಅವರ ಸಂಸ್ಕೃತಿ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ ಅವರು; ದೇವೇಗೌಡರ ಅರವತ್ತು ವರ್ಷಗಳ ರಾಜಕೀಯ ಜೀವನದಲ್ಲಿ 3-4 ವರ್ಷ ಬಿಟ್ಟರೆ ಉಳಿದದ್ದು ಎಲ್ಲಾ ವಿರೋಧ ಪಕ್ಷದಲ್ಲೇ. ಒಂದು ವೇಳೆ ಕುರಿ, ಕೋಣ ಬಲಿ ಕೊಟ್ಟರೆ ಅಧಿಕಾರ ಸಿಗುತ್ತದೆ ಎನ್ನುವುದಾದರೆ ಇಷ್ಟೆಲ್ಲಾ ಕಷ್ಟ ಏನಕ್ಕೆ ಪಡಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ