ಮಳೆ ಹಾನಿ ತಡೆಯಲು ಸರ್ವಸನ್ನದ್ದರಾಗಿ: ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
ಪ್ರಗತಿವಾಹಿನಿ ಸುದ್ದಿ: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲಾ ಇಲಾಖೆಗಳು ಸರ್ವ ಸನ್ನದ್ದರಾಗಿ ಕೆಲಸ ಮಾಡಬೇಕು. ಯಾವುದೇ ಜೀವ, ಆಸ್ತಿ ಹಾನಿಯಾಗದಂತೆ ನೋಡಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಮಳೆ ಹಾನಿ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳ ಸಭೆ ನಡೆಸಿದ ನಂತರ ಡಿಸಿಎಂ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 1533 ಗೆ ಸಾರ್ವಜನಿಕರು ಕರೆ ಮಾಡಿ ಮಳೆ ಹಾನಿ ಸಂಬಂಧಿಸಿದಂತೆ ತಕ್ಷಣ ದೂರು ನೀಡಬಹುದು. ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಸಮೀಕ್ಷೆ ನಡೆಸಿ ಕಾರ್ಯ ನಿರ್ವಹಿಸಬೇಕು. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಉತ್ತಮ ಸಾಮರ್ಥ್ಯದ ಪಂಪ್ ಸೆಟ್, ಜನರೇಟರ್ ಗಳು ಹಾಗೂ ಹೆಚ್ಚು ನೀರು ಹರಿಯುವ ರಾಜಕಾಲುವೆ ಬಳಿ ಜೆಸಿಬಿ, ಟಿಪ್ಪರ್ ಗಳನ್ನು ಮುನ್ನೆಚರಿಕೆ ಕ್ರಮವಾಗಿ ಸಿದ್ದ ಮಾಡಿಕೊಂಡಿರಬೇಕು. ಎನ್ ಡಿಆರ್ ಎಫ್ ತಂಡದೊಟ್ಟಿಗೂ ಸಂಪರ್ಕದಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ.
ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ, ಬಿಡ್ಬ್ಯೂಎಸ್ ಎಸ್ ಬಿ, ಅರಣ್ಯ ಇಲಾಖೆ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ. ರಾಜಕಾಲುವೆಗೆ ಸಂಬಂಧಿಸಿದಂತೆ ಒಂದಷ್ಟು ಜನ ನ್ಯಾಯಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಇದನ್ನು ಮುಂದಿಟ್ಟು ಕೊಂಡು ಮೈಗೆ ಎಣ್ಣೆ ಹಚ್ಚಿಕೊಂಡು ಅಧಿಕಾರಿಗಳು ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಒತ್ತುವರಿಯಾಗಿರು ಜಾಗಗಳು ಸರ್ಕಾರದ ಆಸ್ತಿಗಳು. ನೀರು ಹರಿಯಲು ತೊಂದರೆಯಾಗುವಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು.
ಭಾನುವಾರ ರಾ ತ್ರಿ ಸುರಿದ ಮಳೆ ಸಾಕಷ್ಟು ಹಾನಿ ಉಂಟಾಗಿತ್ತು. ಉತ್ತಮ ರೀತಿಯಲಿ ಪರಿಸ್ಥಿತಿ ನಿಭಾಯಿಸಿರುವ ಅಧಿಕಾರಿಗಳಿಗೆ ಅಭಿನಂದನೆಗಳು. ಮರಗಳ ತೆರವು ಸೇರಿದಂತೆ ಜನರಿಗೆ ಆಗುತ್ತಿದ್ದ ತೊಂದರೆಗಳನ್ನು ತಕ್ಷಣ ತಪ್ಪಿಸಿದ್ದಾರೆ. ಟ್ರಾಫಿಕ್ ಆಗದಂತೆ ನೋಡಿಕೊಂಡಿದ್ದಾರೆ. ಮೆಟ್ರೋ ಹಳಿ ಮೇಲೂ ಮರ ಬಿದ್ದಿತ್ತು. ಇದನ್ನು ಆದಷ್ಟು ಬೇಗ ಇದನ್ನು ತೆರವುಗೊಳಿಸಿದ್ದಾರೆ.
ಜೂನ್ ನಲ್ಲಿ ಉತ್ತಮ ಮಳೆ ಬಿದ್ದಿರುವುದು ನನಗೆ ಸಾಕಷ್ಟು ಸಂತೋಷವಾಗಿದೆ. ಮೂರು ಜನರಿಗೆ ಗಾಯಗಳಾಗಿವೆ. ವಾಹನಗಳು ಜಖಂಗೊಂಡಿವೆ. 265 ಮರಗಳು ಬಿದ್ದಿವೆ. 96 ಮರಗಳನ್ನು ತೆರವುಗೊಳಿಸಲಾಗಿದೆ. 365 ಕೊಂಬೆಗಳು ಬಿದ್ದಿದ್ದವು, ಎಲ್ಲವನ್ನು ತೆರವುಗೊಳಿಸಲಾಗಿದೆ. 261 ವಿದ್ಯುತ್ ಕಂಬಗಳು ಬಿದ್ದಿದ್ದವು. ಇದನ್ನು ಸರಿಪಡಿಸಲಾಗುತ್ತಿದೆ.
694 ದೂರುಗಳನ್ನು ಬಿಬಿಎಂಪಿ ಕಂಟ್ರೋಲ್ ರೂಮ್ ಗೆ ನೀಡಿದ್ದಾರೆ. ಇದರಲ್ಲಿ 525 ದೂರುಗಳನ್ನು ಪರಿಶೀಲಿಸಲಾಗಿದೆ. 69 ದೂರುಗಳು ಉಳಿದುಕೊಂಡಿವೆ. ಇವನ್ನು ಶೀಘ್ರ ಪರಿಹರಿಸಲಾಗುವುದು. ಜನರ ಪ್ರಾಣ ಮುಖ್ಯ. ಆದ ಕಾರಣ ಮುಂಬೈ ರೀತಿ ಹಳೆ ಕಟ್ಟಡಗಳು ಕುಸಿಯುವ ಹಂತದಲ್ಲಿ ಇದ್ದರೆ ಕೂಡಲೇ ಅವುಗಳನ್ನು ಗುರುತಿಸಿ ಸ್ಥಳಾಂತರ ಮಾಡಬೇಕು.
ಮಳೆ ಬಿದ್ದಾಗ ರಸ್ತೆಗುಂಡಿಗಳನ್ನು ಮುಚ್ಚಿದರೆ ಮತ್ತೆ ಕಿತ್ತು ಹೋಗುವ ಸಾಧ್ಯತೆ ಇರುವ ಕಾರಣ ಈ ಕೆಲಸ ತಡವಾಗಬಹುದು. ಇದೊಂದು ವಿಚಾರ ಹೊರತಾಗಿ ಮಿಕ್ಕ ವಿಚಾರಗಳಲ್ಲಿ ಎಚ್ಚರಿಕೆವಹಿಸಬೇಕು.
ಮರಗಳು ಬಿದ್ದು ವಿದ್ಯುತ್ ಕಡಿತ ಉಂಟಾಗುತ್ತಿದೆ ಎಂದು ಕೇಳಿದಾಗ “ಮರ ಬಿದ್ದು ತಂತಿ ತುಂಡದಾಗ ಮತ್ತೆ ಜೋಡಿಸುವುದು ಅತ್ಯಂತ ಕಷ್ಟದ ಹಾಗೂ ಸೂಕ್ಷ್ಮ ಕೆಲಸ. ಇದರ ನಡುವೆಯೂ ಬೆಸ್ಕಾಂ ಅವರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂಧನ ಸಚಿವರು ಕಾರ್ಯಪ್ರವೃತ್ತರಾಗಿದ್ದಾರೆ. ಭಾನುವಾರ ರಾತ್ರಿ ಬಸವೇಶ್ವರ ವೃತ್ತದಲ್ಲಿ ತೆರವುಗೊಳಿಸುತ್ತಾ ಇದ್ದಿದ್ದನ್ನು ನಾನೇ ನೋಡಿದ್ದೇನೆ. ಮರಗಳ ಮದ್ಯೆ ಕಾರು ಸಿಲುಕಿಕೊಂಡಿತ್ತು. ಯಾರಿಗಾದರೂ ತೊಂದರೆಯಾಗಿದೆಯೇ ಎಂದು ನಾನೇ ಗಾಬರಿಗೊಂಡಿದ್ದೆ. ಅದೃಷ್ಟವಶಾತ್ ತೊಂದರೆಯಾಗಿಲ್ಲ” ಎಂದರು.
ಎಲ್ಲಾ ವಾರ್ಡ್ಗಳಲ್ಲಿ ತೊಂದರೆಯಾಗುತ್ತಿದ್ದು ಸ್ಥಳೀಯ ಕಾರ್ಪೋರೇಟರ್ ಗಳು ಇಲ್ಲದಿರುವುದು ತೊಂದರೆಯಾಗುತ್ತಿದೆಯೇ ಎಂದಾಗ “ಕಾರ್ಪೋರೇಟರ್ ಗಳು ಏನು ಮಾಡುತ್ತಾರೆ. ಅಧಿಕಾರ ಇರಲಿ ಇಲ್ಲದಿರಲಿ ಜನರ ಸೇವೆಗೆ ಯಾವಾಗಲೂ ಕೆಲಸ ಮಾಡಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಜನಪ್ರತಿನಿಧಿಗಳು ಇರಬೇಕು. ಲೋಕಸಭೆ ಚುನಾವಣೆ ಮುಗಿದಿದೆ. ಈಗ ಅದರ ಬಗ್ಗೆ ಯೋಚಿಸಲಾಗುವುದು” ಎಂದು ಹೇಳಿದರು.
ಬಿಬಿಎಂಪಿ ಮೇಲೆ ಒತ್ತಡ ಆಗಿರುವ ಕಾರಣ ವಿಭಜನೆ ಮಾಡುವ ಯೋಚನೆ ಇದೆಯೇ ಎಂದಾಗ “ಲೋಕಸಭೆ ಫಲಿತಾಂಶ ಬರಲಿ. ನಂತರ ಶುಭ ಮುಹೂರ್ತ ನೀಡೋಣ” ಎಂದರು.
ಶತ್ರು ಸಂಹಾರ ಯಾಗ, ಪ್ರಾಣಿ ಬಲಿ ನೀಡಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಎಸ್ ಐಟಿ ತನಿಖೆ ನಡೆಸಲಿ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ “ಬಹಳ ಸಂತೋಷ” ಎಂದು ಚುಟುಕಾಗಿ ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ