Kannada NewsKarnataka NewsLatest

ಪ್ರವಾಹ- ಸಣ್ಣ ನೀರಾವರಿ ಇಲಾಖೆಗೆ 454 ಕೋಟಿ ನಷ್ಟ

ಪ್ರವಾಹ- ಸಣ್ಣ ನೀರಾವರಿ ಇಲಾಖೆಗೆ 454 ಕೋಟಿ ನಷ್ಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಇತ್ತೀಚಿನ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟಾರೆ 454 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಬ್ಯಾರೇಜ್ ಗಳು ಮತ್ತು ಏತ ನೀರಾವರಿ ಯೋಜನೆ ವ್ಯವಸ್ಥೆಯನ್ನು ಬುಧವಾರ(ಸೆ.4) ಪರಿಶೀಲಿಸಿ ಅವರು ಮಾತನಾಡಿದರು.
ಬೆಳಗಾವಿ, ಕಾರವಾರ, ಹಾವೇರಿ, ವಿಜಯಪುರ, ಕೊಪ್ಪಳದಲ್ಲಿ ಹಾನಿ ಪ್ರಮಾಣ ಜಾಸ್ತಿಯಾಗಿದೆ. ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಇಲಾಖೆ ವತಿಯಿಂದ ಮೊದಲ ಆದ್ಯತೆ ನೀಡಲಾಗುತ್ತಿದೆ.
ಹಾನಿಗೊಳಗಾದ ಬ್ಯಾರೇಜ್ ಗಳಲ್ಲಿ ತಕ್ಷಣಕ್ಕೆ ನೀರು ನಿಲ್ಲಿಸಲಾಗುವುದು. ನಂತರ ಎತ್ತರ ಹೆಚ್ಚಿಸಲು, ರಸ್ತೆ, ಸೇತುವೆ ಮತ್ತಿತರ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಐದು ಲಕ್ಷಕ್ಕಿಂತ ಕಡಿಮೆ ಅನುದಾನದಲ್ಲಿ ಕೈಗೊಳ್ಳಬಹುದಾದ ಕೆಲಸಗಳನ್ನು ಕೂಡಲೇ ಆರಂಭಿಸಲಾಗುವುದು.  ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕಿರುವುದರಿಂದ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.

ಕೇಂದ್ರದಿಂದ 11 ಕೋಟಿ ಪರಿಹಾರ ಸಾಧ್ಯ:

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 454 ಕೋಟಿ ರೂಪಾಯಿ ಹಾನಿಯಾಗಿದ್ದರೂ ಕೇಂದ್ರ ಸರ್ಕಾರದಿಂದ ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ಕೇವಲ 11 ಕೋಟಿ ರೂಪಾಯಿ ಮಾತ್ರ ಪರಿಹಾರ  ಲಭಿಸುವುದು ಸಾಧ್ಯವಾಗಲಿದೆ. ಆದ್ದರಿಂದ ದುರಸ್ತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಸರ್ಕಾರದಿಂದಲೇ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿವರಿಸಿದರು.

ಬೆಳಗಾವಿಯಲ್ಲಿ 55 ಕೋಟಿ ನಷ್ಟ:

ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 55 ಕೋಟಿ ರೂಪಾಯಿ ನಷ್ಟವಾಗಿದೆ. ಹಂತ ಹಂತವಾಗಿ ದುರಸ್ತಿ ಮತ್ತು ಪುನರ್ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.
ಗೋಕಾಕ ಪಟ್ಟಣದ ಸಮೀಪದಲ್ಲಿ ಇರುವ ಗಟ್ಟಿ ಬಸವಣ್ಣ ಏತ ನೀರಾವರಿ ಯೋಜನೆಯನ್ನು ಸಚಿವ ಮಾಧುಸ್ವಾಮಿ ಪರಿಶೀಲಿಸಿದರು.
ಪ್ರವಾಹದಿಂದ ಆಗಿರುವ ಹಾನಿಯ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಅವರು, ಪಂಪ್ ಹೌಸ್ ಸಾಮರ್ಥ್ಯವನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಯೋಗಿಕೊಳ್ಳ ಗ್ರಾಮಸ್ಥರು, ಪ್ರವಾಹದಿಂದ ಮುಳುಗಡೆಯಾಗುವ ರಸ್ತೆಯ ಎತ್ತರ ಹೆಚ್ಚಿಸಬೇಕು ಎಂದು ಮನವಿ ಮಾಡಿಕೊಂಡರು.
ಇತ್ತೀಚೆಗೆ ಮಾರ್ಕಂಡೇಯ ನದಿಯ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದು, ಕೂಡಲೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮದ ಮಹಿಳೆಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಸಂತ್ರಸ್ತರಿಗೆ ಮನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಕಾರ್ಯನಿರ್ವಾಹಕ ಅಭಿಯಂತರ ಕೆ.ಸಿ.ಸತೀಶ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೆಳವಂಕಿ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ರಾಮದುರ್ಗ ತಾಲ್ಲೂಕಿನ ಕಿಲ್ಲಾ-ತೋರಗಲ್ ಬ್ಯಾರೇಜ್ ಮತ್ತು ಹರ್ಲಾಪುರ ಬ್ಯಾರೇಜ್ ಕಾಮಗಾರಿ ವೀಕ್ಷಿಸಿದರು. ನಂತರ ಹುಕ್ಕೇರಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಕೆಲವು ಬ್ಯಾರೇಜ್ ಗಳನ್ನು ಪರಿಶೀಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button